ರಾಜ್ ಕುಟುಂಬದ 'ವಿಜಯದಶಮಿ'ಗೆ ಮುಹೂರ್ತ ಫಿಕ್ಸ್!
ಕ್ನನಡ ಚಿತ್ರಂಗದಲ್ಲಿ ದೊಡ್ಮನೆ ಎಂದೇ ಖ್ಯಾತಿ ಗಳಿಸಿರುವುದು ಡಾ.ರಾಜ್‌ಕುಮಾರ್ ಕುಟುಂಬ. ಡಾ.ರಾಜ್ ಕುಮಾರ್ ಹಾಗೂ ಅವರ ಮಕ್ಕಳು ಕನ್ನಡ ಕಿರುತೆರೆಗೆ, ಸಿನಿಮಾ ರಂಗಕ್ಕೆ ಏನಾದರೂ ಒಂದು ಕೊಡುಗೆಯನ್ನು ಕೊಡುತ್ತಲೇ ಇರುತ್ತಾರೆ. ಇಷ್ಟು ದಿನ ಸಿನಿಮಾ ಮಾಡುತ್ತಿದ್ದ ದೊಡ್ಮನೆ ಮಕ್ಕಳು ಈಗ ಕಿರುತೆರೆಗೂ ಎಂಟ್ರಿಕೊಟ್ಟಿದ್ದಾರೆ.
ಅದಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಿರುತೆರೆಗೆ ಪದಾರ್ಪಣೆ ಮಾಡಿದ್ದು, ಡಿಕೆಡಿಯಲ್ಲಿ ಗುರುಗಳ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಇದೀಗ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ಕಿರುತೆರೆಗೆ ಬಂದಿದ್ದಾರೆ.
ವಜ್ರೇಶ್ವರಿ, ಪೂರ್ಣಿಮಾ ಎಂಟರ್ ಪ್ರೈಸಸ್ ನಿಂದ ಸಾಕಷ್ಟು ಸಿನಿಮಾಗಳು ಮೂಡಿ ಬಂದಿವೆ. ಆ ಮೂಲಕ ಭರವಸೆಯ ನಟ-ನಟಿಯರನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ಹೊರ ತಂದಿದ್ದಾರೆ. ಅವರು ಹಾಕಿಕೊಟ್ಟ ನೆರಳಲ್ಲಿಯೇ ಮಕ್ಕಳು ಕೂಡ ಚಿತ್ರರಂಗಕ್ಕೆ ಹೊಸ ಹೊಸ ಸಿನಿಮಾ, ಧಾರಾವಾಹಿಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
ಹೊಸ ಧಾರಾವಾಹಿ ನಿರ್ಮಿಸಿದ ರಾಘಣ್ಣ!
ಈಗಾಗಲೇ ಪಿಆರ್ಕೆ ಪ್ರೊಡಕ್ಷನ್ ವತಿಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಿನಿಮಾ ಹಾಗೂ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಶಿವಣ್ಣನ ಚಿಕ್ಕ ಮಗಳು ನಿವೇದಿತಾ ಕೂಡ ವೆಬ್‌ಸೀರೀಸ್ ಮಾಡುತ್ತಿದ್ದು, ಶಿವಣ್ಣ ಕೂಡ ಡಿಕೆಡಿಯಲ್ಲಿ ಮಿಂಚುತ್ತಿದ್ದಾರೆ. ಇದೀಗ ರಾಘವೇಂದ್ರ ರಾಜ್‌ಕುಮಾರ್ ಅವರ ಸರದಿ. ಅವರ ನಿರ್ಮಾಣ ಸಂಸ್ಥೆಯಿಂದ ಹೊಸದೊಂದು ಧಾರಾವಾಹಿ ಹೊರ ಬಂದಿದೆ. ಯಾವುದು ಆ ಧಾರಾವಾಹಿ.? ಯಾವಾಗ ಪ್ರಸಾರವಾಗುತ್ತೆ ಎಂಬ ವಿಚಾರವನ್ನು ಮುಂದೆ ಓದಿ...
ಹೊಸ ಧಾರಾವಾಹಿ ವಿಜಯದಶಮಿ
ದೊಡ್ಮನೆಯ ಕುಡಿ ರಾಘವೇಂದ್ರ ರಾಜ್ ಕುಮಾರ್ ಕೂಡ ಹೊಸ ಧಾರಾವಾಹಿ ನಿರ್ಮಿಸಿದ್ದಾರೆ. ಆ ಧಾರಾವಾಹಿ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆ ಧಾರಾವಾಹಿಗೆ 'ವಿಜಯ ದಶಮಿ' ಎಂದು ಹೆಸರಿಡಲಾಗಿದೆ. ಈ ಧಾರಾವಾಹಿ ಮೂಲಕ ಒಂದಷ್ಟು ಹೊಸ ಪ್ರತಿಭೆಗಳಿಗೂ ಅವಕಾಶ ಸಿಕ್ಕಿದೆ. ಇದರಲ್ಲಿ 19ಕ್ಕೂ ಅಧಿಕ ಮುಖ್ಯಪಾತ್ರಧಾರಿಗಳಿದ್ದು, ಬರೋಬ್ಬರಿ 70ಕ್ಕೂ ಅಧಿಕ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾ ರೇಂಜಿನಲ್ಲಿ ವಿಜಯದಶಮಿ ಧಾರಾವಾಹಿಯನ್ನು ಶೂಟ್ ಮಾಡಲಾಗಿದೆ.
ಅದ್ದೂರಿಯಾಗಿ ಧಾರಾವಾಹಿ ನಿರ್ಮಾಣ!
ವಿಜಯದಶಮಿ ಧಾರಾವಾಹಿಯನ್ನು ಭಾರತದಾದ್ಯಂತ ಚಿತ್ರೀಕರಿಸಲಾಗಿದೆ. ಆಗಸ್ಟ್ 1ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಸಿರಿಕನ್ನಡ ವಾಹಿನಿಯಲ್ಲಿ 'ವಿಜಯದಶಮಿ' ಪ್ರಸಾರವಾಗಲಿದೆ. ಈ ಧಾರಾವಾಹಿಯನ್ನು ಶಶಿ ನಿರ್ದೇಶನ ಮಾಡಿದ್ದು, ಮಂಗಳಾ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಪ್ರೋಮೋ ನೋಡೋದಕ್ಕೆ ಸಿನಿಮಾ ಟ್ರೈಲರ್ ನಂತಿದೆ. ವಿಜಯದಶಮಿ ಎಂದರೆ ಎಲ್ಲರಿಗೂ ಗೊತ್ತಿರಲೇಬೇಕು. ಸಾಗರದ ನಡುವೆ ಹಡಗುಗಳ ಓಟ, ದೇವಸ್ಥಾನ, ಪೂಜೆ ಹೀಗೆ ಎಲ್ಲವೂ ಅನಾವರಣವಾಗಿದೆ. ಪ್ರೇಕ್ಷಕರು ಕೂಡಾ ಈ ಧಾರಾವಾಹಿ ಮೇಲೆ ಅಪಾರವಾದ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಇದರ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಲಾಂಚ್ ಕಾರ್ಯಕ್ರಮದಲ್ಲಿ ಸೆಲಬ್ರಿಟಿಗಳು ಕೈ ಜೋಡಿಸಿದ್ದರು.
ಇಬ್ಬರು ನಾಯಕಿಯರ ಕಥೆ!
ವಿಜಯದಶಮಿ ಧಾರಾವಾಹಿಯು ಇಬ್ಬರು ಹೆಣ್ಣು ಮಕ್ಕಳ ಜೀವನವನ್ನು ಆಧರಿಸಿದೆ. ಅವರಿಬ್ಬರ ಬಾಳಲ್ಲಿ ನಡೆಯುವ ಘಟನೆಗಳೇ ಧಾರಾವಾಹಿಯ ಕಥೆ. ಇದರಲ್ಲಿ ವೈಭವಿ ಈಶ್ವರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ವಿಹಾನ್ ನಾಯಕನ ಪಾತ್ರ ಮಾಡಲಿದ್ದಾರೆ. ಇದರಲ್ಲಿ ನಾಯಕಿ ನೀರಿನೊಳಗೆ ಹೊಡೆದಾಡುವ ದೃಶ್ಯವಿದ್ದು, ಧಾರಾವಾಹಿಯ ಎಲ್ಲಾ ಸೀನ್ ಗಳೂ ಅದ್ಧೂರಿಯಾಗಿ ಚಿತ್ರೀಕರಣಗೊಂಡಿವೆ ಎಂದು ನಿರ್ದೇಶಕರೇ ತಿಳಿಸಿದ್ದಾರೆ. ಇನ್ನು ಪಾತ್ರದಿಂದ ಪಾತ್ರಗಳ ವೇಷಭೂಷಣಗಳು ಕೂಡ ಸಾಕಷ್ಟು ವ್ಯತ್ಯಾಸವನ್ನು ಹೊಂದಿದೆಯಂತೆ.


Click it and Unblock the Notifications











