''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ
Recommended Video
''ವಿಧಿ ಇವರ ಜೀವನದಲ್ಲಿ ವಿಧ ವಿಧವಾಗಿ ಆಟ ಆಡಿದರೂ, ಯಾವುದಕ್ಕೂ ಜಗ್ಗದೆ, ಯಾವುದಕ್ಕೂ ಕುಗ್ಗದೆ, ಮುನ್ನುಗುತ್ತಿರುವ ಹಸನ್ಮುಖಿ ರಾಘವೇಂದ್ರ ರಾಜ್ ಕುಮಾರ್.''
ಈ ರೀತಿ ರಮೇಶ್ ಅರವಿಂದ್ ತಮ್ಮ 'ವಿಕೇಂಡ್ ವಿತ್ ರಮೇಶ್ ಸೀಸನ್ 4'ರ ಎರಡನೇ ಸಂಚಿಕೆಯನ್ನು ಶುರು ಮಾಡಿದ್ದಾರೆ. ಈ ಸಂಚಿಕೆಯಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅತಿಥಿಯಾಗಿದ್ದಾರೆ. ಈ ಕಾರ್ಯಕ್ರಮದ ಪ್ರೊಮೋ ಸದ್ಯ ಹೊರಬಂದಿದೆ.
ಸಿನಿಮಾ ಸಾಧನೆ ಮಾತ್ರವಲ್ಲದೆ, ತಮ್ಮ ಅನಾರೋಗ್ಯಕ್ಕೆ ಸೆಡ್ಡು ಹೊಡೆದ ರಾಘವೇಂದ್ರ ರಾಜ್ ಕುಮಾರ್ ಜೀವನ ಸಾಕಷ್ಟು ಸ್ಫೂರ್ತಿ ನೀಡಲಿದೆ. ಇದೇ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಪ್ರೀತಿಯ ಸಹೋದರನ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ.
ಅಂದಹಾಗೆ, 'ವಿಕೇಂಡ್ ವಿತ್ ರಮೇಶ್ ಸೀಸನ್ 4'ರ ಎರಡನೇ ಸಂಚಿಕೆ ಪ್ರೊಮೋದ ವಿಶೇಷಗಳು ಹೀಗಿವೆ.

ಶಿವಣ್ಣ, ರಾಘಣ್ಣರ ಭಾವುಕ ಮಾತುಗಳು
ಕಾರ್ಯಕ್ರಮದಲ್ಲಿ ತಮ್ಮನ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ಅನಾರೋಗ್ಯದಿಂದ ಬಳಲಿದ್ದ ರಾಘವೇಂದ್ರ ರಾಜ್ ಕುಮಾರ್ ರಿಗೆ ತನ್ನ ಆಯಸ್ಸುನನ್ನು ದೇವರು ನೀಡಲಿ ಎಂದು ಕೇಳಿಕೊಂಡಿದ್ದಾರೆ. ''ನನಗೆ ಈ ರೀತಿಯ ಸಹೋದರನನ್ನು ನೋಡಲು ತುಂಬ ಖುಷಿ ಆಗುತ್ತದೆ. ದೇವರು ನನ್ನ ಆಯಸ್ಸುನ್ನೂ ಅವನಿಗೆ ನೀಡಲಿ'' ಎಂದು ಭಾವುಕ ಮಾತುಗಳನ್ನು ಆಡಿದ್ದಾರೆ.

ನನಗೆ ಅವನು ಅಣ್ಣ ಅಲ್ಲ.. ತಂದೆ
ಶಿವರಾಜ್ ಕುಮಾರ್ ನೀಡಿರುವ ಪ್ರೀತಿ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ''ಅವನು ನನಗೆ ಅಣ್ಣ ಅಲ್ಲ.. ತಂದೆ. ನನಗೆ ಹುಷಾರಿಲ್ಲದೆ ಇರುವಾಗ ನನ್ನನ್ನು ಮಗುತರ ಒಂದು ತಿಂಗಳು ನೋಡಿಕೊಂಡಿದ್ದಾನೆ. ಇನ್ನೊಬ್ಬ ತಮ್ಮ ಪುನೀತ್ ನನ್ನ ಮನೆ ಕಟ್ಟಿಸಿಕೊಟ್ಟಿದ್ದಾನೆ.'' ಎಂದು ಸಹೋದರರ ಬಗ್ಗೆ ಮಾತನಾಡಿದ್ದಾರೆ.

ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಕಣ್ಣೀರು
ಪತಿಯ ಬಗ್ಗೆ ಮಾತನಾಡಿದ ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಇಡೀ ಕುಟುಂಬದ ಸಹಾಯ ನೆನೆದು ಕಣ್ಣೀರು ಹಾಕಿದರು. ಉಳಿದಂತೆ, ಕಾರ್ಯಕ್ರಮದಲ್ಲಿ ನಿರ್ದೇಶಕ ಭಗವಾನ್, ಚಿನ್ನೆಗೌಡ, ರಾಘಣ್ಣನ ತಂಗಿಯರು, ಅಜ್ಜಿ, ಗೆಳೆಯರು ಹಾಗೂ ಮಗ ಯುವ ರಾಜ್ ಕುಮಾರ್ ಭಾಗಿಯಾಗಿದ್ದರು.
ಪ್ರೊಮೋ ಸೂಪರ್, ಎಪಿಸೋಡ್ ಗೆ ವೈಟಿಂಗ್
ರಾಘವೇಂದ್ರ ರಾಜ್ ಕುಮಾರ್ ಅವರ ಸಂಚಿಕೆಯ ಪ್ರೊಮೋ ಸೂಪರ್ ಆಗಿದೆ. ತಮಾಷೆ, ಭಾವುಕತೆ, ಸ್ಫೂರ್ತಿಯ ಕಥೆ, ನಗು, ಖುಷಿ ಹೀಗೆ ಎಲ್ಲವೂ ಸೇರಿದ ಈ ಸಂಚಿಕೆಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.


Click it and Unblock the Notifications











