10 ವರ್ಷಗಳ ಬಳಿಕ ಸ್ಟಾರ್ ಸುವರ್ಣಕ್ಕೆ ಎಂಟ್ರಿ ಕೊಟ್ಟ ರಾಜೇಶ್ ಧ್ರುವ ಈಗ ಖಳನಾಯಕ!
ವಿಭಿನ್ನ ರೀತಿಯ ಕಥಾಹಂದರವನ್ನೊಳಗೊಂಡ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. 'ಆಸೆ', 'ನಿನ್ನ ಜೊತೆ ನನ್ನ ಕಥೆ', 'ನೀನಾದೆ ನಾ', 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ', 'ಶ್ರೀದೇವಿ ಮಹಾತ್ಮೆ', 'ಗೌರಿಶಂಕರ', 'ಅವನು ಮತ್ತು ಶ್ರಾವಣಿ' ಧಾರಾವಾಹಿಗಳು ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇನ್ನು 'ಪ್ರೀತಿಗಾಗಿ', 'ಅನುಪಮ' ಎಂಬ ಡಬ್ಬಿಂಗ್ ಧಾರಾವಾಹಿಗಳ ಜೊತೆಗೆ 'ಸುವರ್ಣ ಸಂಕಲ್ಪ', 'ಸುವರ್ಣ ಗೃಹಮಂತ್ರಿ', 'ಬೊಂಬಾಟ್ ಭೋಜನ' ಶೋಗಳು ಪ್ರಸಾರವಾಗುತ್ತಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಇದರ ಜೊತೆಗೆ ಖುಷಿಯ ವಿಚಾರವೆಂದರೆ ಇಂದಿನಿಂದ 'ಶಾರದೆ' ಎನ್ನುವ ಧಾರಾವಾಹಿಯು ಪ್ರಸಾರ ಕಾಣಲಿದೆ.

ಪುರಾಣಿಕ್ ಪ್ರೊಡಕ್ಷನ್ಸ್ ನಡಿಯಲ್ಲಿ ಸುನೀಲ್ ಪುರಾಣಿಕ್ ಹಾಗೂ ಸಾಗರ್ ಪುರಾಣಿಕ್ ನಿರ್ಮಿಸುತ್ತಿರುವ ಈ ಧಾರಾವಾಹಿಯನ್ನು ಧರಣಿ ಜಿ ರಮೇಶ್ ನಿರ್ದೇಶಿಸುತ್ತಿದ್ದಾರೆ. ಧಾರಾವಾಹಿಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಸಕತ್ ಸದ್ದು ಮಾಡುತ್ತಿದೆ. 'ಶಾರದೆ' ಧಾರಾವಾಹಿಯಲ್ಲಿ ನಾಯಕಿ ಶಾರದಾ ಆಗಿ ಚೈತ್ರಾ ಸಕ್ಕರಿ ಹಾಗೂ ನಾಯಕ ಸಿದ್ಧಾರ್ಥ್ ಆಗಿ ಸೂರಜ್ ಹೊಳಲು ಕಾಣಿಸಿಕೊಂಡಿರುವುದು ತಿಳಿದೇ ಇದೆ.
ನಾಯಕ, ನಾಯಕಿಯ ಹೊರತಾಗಿ ಮನ ಸೆಳೆಯುವ ಮತ್ತೊಂದು ಪಾತ್ರವೆಂದರೆ ಅದು ಖಳನಾಯಕನ ಪಾತ್ರ. ಹೌದು, ನಾಯಕಿ ಶಾರದಾಳ ಗಂಡ, ಖಳನಾಯಕ ನರಸಿಂಹನಾಗಿ ನಟಿಸುವ ಮೂಲಕ ಮತ್ತೊಮ್ಮೆ ವಿಲನ್ ಆಗಿ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ ನಟ ರಾಜೇಶ್ ಧ್ರುವ. "ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹತ್ತು ವರ್ಷದ ಬಳಿಕ ನಾನು ಪೂರ್ಣ ಪ್ರಮಾಣದಲ್ಲಿ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಖುಷಿಯಿದೆ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ರಾಜೇಶ್ ಧ್ರುವ ಪ್ರತಿಕ್ರಿಯೆ ನೀಡಿದ್ದಾರೆ.

"ಹತ್ತು ವರ್ಷದ ನಂತರ ಮತ್ತೆ ನರಸಿಂಹನಾಗಿ ಸ್ಟಾರ್ ಸುವರ್ಣ ವಾಹಿನಿಗೆ ಮರಳುತ್ತಿದ್ದೇನೆ. ಆದರೆ ಹತ್ತು ವರ್ಷ ಗ್ಯಾಪ್ ಯಾಕೆ ಆಯಿತು ಎಂದು ಕೇಳಿದರೆ ನನಗೆ ಗೊತ್ತಿಲ್ಲ. ಅದನ್ನ ಚಾನೆಲ್ ಅವರ ಬಳಿಯೇ ಕೇಳಬೇಕು. ಯಾಕೆಂದರೆ ಈ ಗ್ಯಾಪ್‌ನಲ್ಲಿ ನಾನು ಮರಳಿ ಮನಸ್ಸಾಗಿದೆ, ಅರಮನೆ ಗಿಳಿ ಎರಡು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಅಲ್ಲೂ ಪೂರ್ಣ ಪ್ರಮಾಣದಲ್ಲಿ ಯಾಕಿಲ್ಲ ಎಂದು ಕೇಳಿದರೆ ಅದರ ಐಡಿಯಾ ನನಗಿಲ್ಲ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುತ್ತಾ ರಾಜೇಶ್ ಧ್ರುವ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಶಾರದೆ ಧಾರಾವಾಹಿಯಲ್ಲಿ ನನ್ನದು ಕಂಪ್ಲೀಟ್ ನೆಗೆಟಿವ್ ಕ್ಯಾರೆಕ್ಟರ್. ಈ ಹಿಂದೆ ಶ್ರೀಗೌರಿ ಧಾರಾವಾಹಿಯಲ್ಲಿ ಆ ತರಹದ ಫ್ಲೇವರ್‌ನ ಪಾತ್ರವೊಂದರಲ್ಲಿ ನಟಿಸಿದ್ದೆ. ಅದು ಫಸ್ಟ್ ಟೈಮ್ ಆಗಿತ್ತು. ಆದರೆ, ಅದರಲ್ಲಿ ಬೇರೆ ತರಹದ ಶೇಡ್ ಇತ್ತು. ಆ ಪಾತ್ರ ಕಾಮಿಡಿಯನ್ನು ಅದು ಒಳಗೊಂಡಿತ್ತು. ಬಟ್ ಪೂರ್ಣ ಪ್ರಮಾಣದ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮೊದಲನೇ ಸೀರಿಯಲ್ ಅಂದರೆ ಅದು ಶಾರದೆ" ಎಂದು ಹೇಳಿದ್ದಾರೆ ರಾಜೇಶ್ ಧ್ರುವ.
"ಪಾತ್ರ ಹೇಗಿರುತ್ತೆ ಅನ್ನುವುದಕ್ಕೆ ಅಲ್ ರೆಡಿ ಪ್ರೋಮೋದಲ್ಲಿ ಒಂದಷ್ಟು ವಿಚಾರಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದ್ರೆ ನಾಯಕಿಯ ಗಂಡನ ಪಾತ್ರ ನಂದು. ಅವಳನ್ನ ಮತ್ತು ಮಗಳನ್ನ ಇಷ್ಟಪಡದೇ ಇರೋ ಕಾರಣಕ್ಕೆ ನಾನು ಅವಳನ್ನ ಬಿಟ್ಟು ಬೇರೆ ಊರಿಗೆ ಬಂದು ಇನ್ನೊಂದು ಮದುವೆ ಆಗಿರು.ತ್ತೇನೆ. ಕಥೆ ಈ ರೀತಿ ಮುಂದುವರಿಯುತ್ತೆ" ಎಂದು ರಾಜೇಶ್ ಧ್ರುವ ಹೇಳಿಕೊಂಡಿದ್ದಾರೆ.
"ಸುನೀಲ್ ಪುರಾಣಿಕ್ ಅವರ ಪ್ರೊಡಕ್ಷನ್ ಇದು. ಶ್ರೀಗೌರಿ ಧಾರಾವಾಹಿಯಲ್ಲಿ ನನ್ನ ಚಿಕ್ಕಪ್ಪನ ಪಾತ್ರವನ್ನು ಮಾಡಿದ್ದರು. ಎಷ್ಟೋ ವರ್ಷದ ನಂತ್ರ ಮತ್ತೆ ಪ್ರೊಡಕ್ಷನ್‌ಗೆ ಅವರು ಇಳಿದಿದ್ದಾರೆ. ಅದು ಖುಷಿಕೊಟ್ಟಿದೆ. ಧರಣಿ ಗಂಗೆಪುತ್ರ ಇದರ ನಿರ್ದೇಶಕರು. ಖುಷಿ ಏನಂದ್ರೆ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಆದ ಮೇಲೆ ನಾನು ಮತ್ತೆ ರಾಧಿಕಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ. ರಾಧಿಕಾ ಅವರದು ಫಸ್ಟ್ ಕಿರುತೆರೆ ಜರ್ನಿ ಇದು. ಮೊದಲ ಧಾರಾವಾಹಿಯಲ್ಲಿ ಅವರು ನನ್ನ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ" ಎಂದು ಹೇಳಿಕೊಂಡಿದ್ದಾರೆ ರಾಜೇಶ್ ಧ್ರುವ.


Click it and Unblock the Notifications











