'ಅಗ್ನಿಸಾಕ್ಷಿ' ಧಾರಾವಾಹಿಗೆ ಹತ್ತು ವರ್ಷ: ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ಹೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಗ್ನಿಸಾಕ್ಷಿ' ಧಾರಾವಾಹಿಯೂ ಒಂದು. ಡಿಸೆಂಬರ್ 2, 2013 ರಂದು ಪ್ರಸಾರ ಶುರುವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯು 2020 ಜನವರಿ 3ರಂದು ಮುಕ್ತಾಯಗೊಂಡಿತ್ತು.
ಬರೋಬ್ಬರಿ ಏಳು ವರ್ಷಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಈ ಧಾರಾವಾಹಿ ಇದೀಗ ಹತ್ತು ವರ್ಷಗಳನ್ನು ಪೂರೈಸಿದೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಮ್ಮ ಅಖಿಲ್ ಪಾತ್ರದಲ್ಲಿ ಅಭಿನಯಿಸಿದ್ದ ರಾಜೇಶ್ ಧ್ರುವ ಇದೀಗ ಸಂತಸ ವ್ಯಕ್ತಪಡಿಸಿದ್ದಾರೆ.

"ಅಗ್ನಿಸಾಕ್ಷಿ ಧಾರಾವಾಹಿಯು ಹತ್ತನೇ ವರ್ಷ ಪೂರೈಸಿದೆ. ತುಂಬಾ ಖುಷಿಯಾಗುತ್ತಿದೆ. ಇದೊಂದು ತುಂಬಾ ಸುಂದರವಾದ ಅನುಭವ" ಎಂದು ರಾಜೇಶ್ ಧ್ರುವ ಸಂತಸದಿಂದ ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ. ಇನ್ನು ಅಖಿಲ್ ಪಾತ್ರದ ಬಗ್ಗೆಯೂ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿರುವ ನಟ ರಾಜೇಶ್ ಧ್ರುವ "ಅಖಿಲ್ ಪಾತ್ರದಿಂದ ನಾನು ಎಲ್ಲವನ್ನು ಕಲಿತಿದ್ದೇನೆ" ಎಂದು ಹೇಳಿದ್ದಾರೆ.
"ಅಖಿಲ್ ಪಾತ್ರದಿಂದ ನಾನು ನಟನೆ ಕಲಿತಿದ್ದೇನೆ. ಜನರ ಜೊತೆ ಹೇಗೆ ಮಾತನಾಡಬೇಕು ಎಂದು ಕಲಿತಿದ್ದೇನೆ. ಇಂಡಸ್ಟ್ರಿಯಲ್ಲಿ ಹೇಗೆ ಇರಬೇಕು ಎಂಬುದನ್ನು ಅಖಿಲ್ ಪಾತ್ರ ತಿಳಿಸಿಕೊಟ್ಟಿದೆ. ಜನರು ನೀಡುವ ಪ್ರೀತಿ ನೋಡಿ ಕಲಿತಿದ್ದೇನೆ. ಅಗ್ನಿಸಾಕ್ಷಿಯ ಅಖಿಲ್ ಆಗಿ ಬದಲಾಗುವ ಮೊದಲು ನಾನು ತುಂಬಾ ಸ್ಟ್ರಗಲ್ ಮಾಡುತ್ತಿದ್ದೆ. ಆ ಎಲ್ಲಾ ಸ್ಟ್ರಗಲ್ ಅಗ್ನಿಸಾಕ್ಷಿ ಧಾರಾವಾಹಿಯಿಂದ ಮುಕ್ತಾಯವಾಯಿತು" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ರಾಜೇಶ್ ಧ್ರುವ.
"ಪ್ರತಿಯೊಬ್ಬ ಕಲಾವಿದನೂ ತಾನು ನಟಿಸಿದ ಪಾತ್ರದಿಂದ ತನಗೆ ಜನಪ್ರಿಯತೆ ಸಿಗಬೇಕು ಎಂದು ಬಯಸುತ್ತಾನೆ. ಮತ್ತು ಇದು ನಟನೆಗೆ ಇಳಿದವರ ಕನಸು ಹೌದು. ನನಗೆ ಆ ಜನಪ್ರಿಯತೆಯನ್ನು ಅಖಿಲ್ ಪಾತ್ರ ಕೊಟ್ಟಿದೆ. ಚಾನೆಲ್‌ನಲ್ಲಿಯೂ ಅಷ್ಟೇ, ಈ ಪಾತ್ರ ಒಳ್ಳೆಗ ರೆಪ್ಯೂಟೇಶನ್ ಕೊಟ್ಟಿದೆ. ಇದಕ್ಕೆ ನಾನು ಅಗ್ನಿಸಾಕ್ಷಿ ತಂಡಕ್ಕೆ, ಚಾನೆಲ್‌ಗೆ ಧನ್ಯವಾದ ಹೇಳುತ್ತೇನೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ರಾಜೇಶ್ ಧ್ರುವ.

"ಅಗ್ನಿಸಾಕ್ಷಿ ಧಾರಾವಾಹಿಯಿಂದಾಗಿ ಅಖಿಲ್ ಹೊರತು, ಅಖಿಲ್‌ನಿಂದಾಗಿ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲ. ಇನ್ನು ಸಹ ಕಲಾವಿದರುಗಳು ಕೂಡಾ ಅಷ್ಟೇ... ಅವರೆಲ್ಲರೂ ಕೂಡಾ ಅವರಿಂದ ಸಾಧ್ಯವಾಗುವ ಕಾಂಟ್ರಿಬ್ಯೂಷನ್‌ಗಳನ್ನು ಮಾಡಿದ್ದಾರೆ. ಒಂದು ಧಾರಾವಾಹಿ ಪ್ರಸಾರ ಆಗುವಷ್ಟು ಸಮಯ ಚೆನ್ನಾಗಿ ಪ್ರಸಾರ ಕಂಡು, ಅದರ ಛಾಪನ್ನು ಸೀರಿಯಲ್ ಮುಗಿದ ಮೇಲೆಯೂ ಉಳಿಸಿಕೊಂಡಿದೆ ಎಂದರೆ ಅದು ಸಣ್ಣ ವಿಚಾರವಲ್ಲ. ಜನಕ್ಕೆ ಈ ಧಾರಾವಾಹಿ ಅದೆಷ್ಟು ಇಷ್ಟವಾಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ರಾಜೇಶ್ ಧ್ರುವ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ರಾಜೇಶ್ ಧ್ರುವ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು. 'ಬದುಕು' ಧಾರಾವಾಹಿಯ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿರುವ ಇವರು ತದ ನಂತರ 'ಆಕಾಶದೀಪ', 'ಒಂದೇ ಗೂಡಿನ ಹಕ್ಕಿಗಳು', 'ಮಿಲನ', 'ಪ್ರೀತಿ ಎಂದರೇನು?', 'ಸರಯೂ', 'ಅಗ್ನಿಸಾಕ್ಷಿ', 'ನಂದಿನಿ', 'ಅರಮನೆ ಗಿಳಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು.
'ಅನಿರೀಕ್ಷಿತ', 'ಆಮಂತ್ರಣ', 'ರೌದ್ರಂ', 'ತದ ನಂತರ' ಎಂಬ ಕಿರುಚಿತ್ರಗಳಿಗೆ ರಾಜೇಶ್ ಧ್ರುವ ಅವರೇ ಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಇದರ ಜೊತೆಗೆ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಎನ್ನುವ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ ರಾಜೇಶ್ ಧ್ರುವ. ಅಂದ ಹಾಗೇ ಈ ಸಿನಿಮಾವನ್ನು ಅವರೇ ನಿರ್ದೇಶನ ಕೂಡ ಮಾಡಿದ್ದರು.


Click it and Unblock the Notifications











