'ಸರಿಗಮಪ' ರಿಯಾಲಿಟಿ ಶೋಗೆ ರಾಜೇಶ್ ಕೃಷ್ಣನ್ ರೀ ಎಂಟ್ರಿ; ಪ್ರೋಮೊ ವೈರಲ್
ಜೀ ಕನ್ನಡದಲ್ಲಿ ಪ್ರಸಾರವಾಗುವ ಮ್ಯೂಸಿಕ್ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಕೂಡ ಒಂದು. ಈ ರಿಯಾಲಿಟಿ ಶೋಗಾಗಿ ಸಂಗೀತ ಪ್ರಿಯರು ಎದುರು ನೋಡುತ್ತಲೇ ಇರುತ್ತಾರೆ. ಮ್ಯೂಸಿಕ್ ಜೊತೆ ಒಂದಿಷ್ಟು ಎಂಟರ್‌ಟೈನ್ಮೆಂಟ್ ಹೊತ್ತು ಬರುವ ಈ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ.
ಒಂದು ಕಡೆ ಹೊಸ ಪ್ರತಿಭೆಗಳು ತಮ್ಮ ಕಂಠದಿಂದ ಮನಸೆಳೆಯುತ್ತಿದ್ದರೆ, ಇನ್ನೊಂದು ಕಡೆ ಜಡ್ಜ್‌ಗಳು ಎಂಟರ್‌ಟೈನ್ಮೆಂಟ್ ಕೊಡುತ್ತಾರೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಮೂವರೂ ಕಿರುತೆರೆಯ ಈ ಮ್ಯೂಸಿಕ್ ರಿಯಾಲಿಟಿ ಶೋನಲ್ಲಿ ಚಿಂದಿ ಉಡಾಯಿಸಿಬಿಡುತ್ತಿದ್ದರು. ಆದರೆ, ಕೆಲವು ಸೀಸನ್‌ಗಳಲ್ಲಿ ರಾಜೇಶ್ ಕೃಷ್ಣನ್ ಮಿಸ್ ಆಗಿದ್ದರು.

ಇದೀಗ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಜೀ ಕನ್ನಡ 'ಸರಿಗಮಪ'ದ ಹೊಸ ಸೀಸನ್ ಶೀಘ್ರದಲ್ಲಿಯೇ ಆರಂಭ ಆಗುತ್ತಿದ್ದು, ಈಗಾಗಲೇ ಪ್ರೋಮೊ ರಿಲೀಸ್ ಆಗಿದೆ. ಅದರಲ್ಲಿ ರಾಜೇಶ್ ಕೃಷ್ಣನ್ ಕೂಡ ಕಾಣಿಸಿಕೊಂಡಿದ್ದು ಕಿರುತೆರೆ ವೀಕ್ಷಕರ ಖುಷಿಯನ್ನು ಡಬಲ್ ಮಾಡಿದೆ.
'ಸರಿಗಮಪ'ದಲ್ಲಿ ಜಡ್ಜ್‌ಗಳು ಕೊಡುವ ಆ ಸ್ಫೂರ್ತಿಯ ಮಾತು, ಅವರ ಮಾತಿನ ತೂಕಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. 'ಸರಿಗಮಪ' ಶೋನ ಹಲವು ಸೀಸನ್‌ನಗಳಲ್ಲಿ ರಾಜೇಶ್ ಕೃಷ್ಣನ್ ಜಡ್ಜ್ ಆಗಿದ್ದರು. ಆದರೆ ಮಧ್ಯದಲ್ಲಿ ಬೇರೊಂದು ವಾಹಿನಿಗೆ ಕಾರ್ಯಕ್ರಮ ನೀಡುವ ಸಲುವಾಗಿ ಹೋಗಿದ್ದರಿಂದ 'ಸರಿಗಮಪ' ಅನ್ನು ಬಿಡಬೇಕಾಗಿ ಬಂದಿತ್ತು. ಆದ್ರೀಗ ಮತ್ತೆ ರಾಜೇಶ್ ಕೃಷ್ಣನ್ ಶೋಗೆ ಆಗಮಿಸಿದ್ದಾರೆ. ಹೀಗಾಗಿ ವೀಕ್ಷಕರು ಸರಿಗಮಪ ರಿಯಾಲಿಟಿ ಶೋ ಅನ್ನು ನೋಡಲು ಇನ್ನಷ್ಟು ಕಾತರರಾಗಿದ್ದಾರೆ.

ಇನ್ನೂ ಜೀ ಕನ್ನಡ ರಿಲೀಸ್ ಮಾಡಿರುವ 'ಸರಿಗಮಪ' ಶೋದ ಪ್ರೋಮೋ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಈ ಪ್ರೋಮೊದಲ್ಲಿ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಜೊತೆಗೆ ಸಿಕ್ಕ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಆ ವೇಳೆ ಅಲ್ಲಿಗೆ ರಾಜೇಶ್ ಕೃಷ್ಣನ್ ಬರುವುದನ್ನು ನೋಡಿ ಖುಷಿ ಪಡುತ್ತಾರೆ. ಮೂವರು ಒಟ್ಟಿಗೆ ಸಿಕ್ಕಿದ್ದಕ್ಕೆ ಥ್ರಿಲ್ ಸಿಗಲು ಸಾಹಸ ಮಾಡುವುದಕ್ಕೆ ಮುಂದಾಗುತ್ತಾರೆ.
ಸ್ಕೈ ಡೈವಿಂಗ್, ತೂಫಾನ್‌ನಲ್ಲಿ ಡ್ರೈವಿಂಗ್, ಹಿಮಾಲಯಕ್ಕೆ ಟ್ರಕ್ಕಿಂಗ್ ಹೀಗೆ ಏನೇ ಮಾಡಿದರೂ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್‌ಗೆ ತೃಪ್ತಿನೇ ಸಿಗುವುದಿಲ್ಲ. ಮೂರು ಜನ ಎಲ್ಲಿ ಹೋದರು ಥ್ರಿಲ್ ಸಿಗುತ್ತಿಲ್ಲ ಎನ್ನುವಾಗಲೇ 'ಸರಿಗಮಪ' ಬಾವುಟ ಎದುರಾಗುತ್ತೆ. ಹೀಗೆ ಕ್ರಿಯೇಟಿವ್ ಆಗಿ ಪ್ರೋಮೊ ಮಾಡಿದ್ದು ಆದಷ್ಟು ಬೇಕ ಈ ರಿಯಾಲಿಟಿ ಶೋ ಶುರುವಾಗಲಿ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನೂ ಜೀ ಕನ್ನಡ ಪ್ರೋಮೊ ರಿಲೀಸ್ ಮಾಡಿ ಕೆಳಗೆ ಕ್ಯಾಪ್ಶನ್ ಕೊಟ್ಟಿದೆ. "ನೀವಿಷ್ಟು ದಿನ ಕಾತರ, ಕುತೂಹಲದಿಂದ ಕಾಯ್ತಿದ್ದ ಸಂಗೀತ ಸಾಮ್ರಾಜ್ಯದ ವೈಭವ ಹೊಸ ಥ್ರಿಲ್‌ನೊಂದಿಗೆ ಮತ್ತೆ ಬರ್ತಿದೆ ನಿಮ್ಮ ಮುಂದೆ." ಎಂದು ಕಿರುತೆರೆ ವೀಕ್ಷಕರನ್ನು ಕಾಯುವಿಕೆಯನ್ನು ಹೆಚ್ಚಿಸಿದೆ. ಇವೆಲ್ಲದರ ಜೊತೆಗೆ ರಾಜೇಶ್ ಕೃಷ್ಣನ್ ಮತ್ತೆ ಸರಿಗಮಪಗೆ ಮರಳಿದ್ದು ಕಿರುತೆರೆಗೆ ಥ್ರಿಲ್ ಕೊಟ್ಟಿದೆ.


Click it and Unblock the Notifications











