ಮತ್ತೆ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ರಾಜೇಶ್ ನಟರಂಗ: ಶುರು 'ಅಮೃತಧಾರೆ' ಅಬ್ಬರ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಅಮೃತಧಾರೆ'. ಈ ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಲು ಸಜ್ಜಾಗಿ ಬರುತ್ತಿದ್ದಾರೆ ನಟ ರಾಜೇಶ್ ನಟರಂಗ.
ಪೋಷಕ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಈಗ ಮತ್ತೆ 'ಅಮೃತಧಾರೆ' ಮೂಲಕ ಕಿರುತೆರೆಗೆ ರಾಜೇಶ್ ನಟರಂಗ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಮುಖ್ಯ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ತ್ರಿವೇಣಿ ಸಂಗಮ'ದ ನೆನಪು
ಅಂದ ಹಾಗೆ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಬದಲಿಗೆ ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿಯೂ ನಾಯಕ ತ್ರಿವಿಕ್ರಮ್ ಆಗಿ ರಾಜೇಶ್ ನಟರಂಗ ನಟಿಸಿದ್ದರು. ಅವರಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ಚೆಲುವೆ ಅನುಪ್ರಭಾಕರ್ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಗೆ ಜನಮೆಚ್ಚಿಗೆ ಗಳಿಸಿತ್ತು.
ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಿರುತೆರೆಗೆ ಎಂಟ್ರಿ
ರಾಜೇಶ್ ನಟರಂಗ ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದರು. 'ಗುಪ್ತಗಾಮಿನಿ' ಧಾರಾವಾಹಿಯ ಪಾತ್ರ ರಾಜೇಶ್ ಅವರಿಗೆ ಆ ಸಮಯದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು.
ನಟನೆಯ ಮೂಲಕ ಫೇಮಸ್ಸು!
ರಾಜೇಶ್ ನಟರಂಗ ನಟನೆ ಮನರಂಜನಾ ಪ್ರಿಯರಿಗೆ ಮೊದಲಿನಿಂದಲೂ ಇಷ್ಟ. ಸ್ಪಷ್ಟ ಮಾತುಗಾರಿಕೆಯ, ಪ್ರಬುದ್ಧ ನಟನೆ ಕಿರುತೆರೆ ವೀಕ್ಷಕರಿಗೆ ಇಷ್ಟ. ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲಾ ಪ್ರೇಕ್ಷಕರ ಮನ ಗೆದ್ದ ನಟ. ತಮ್ಮದೇ ಆದ ನಟನಾ ಶೈಲಿಯ ಮೂಲಕ ಹಿರಿತೆರೆಯಲ್ಲಿಯೂ ಕಮಾಲ್ ಮಾಡಿದ ರಾಜೇಶ್, ಗೌತಮ್ ದಿವಾನ್ ಆಗಿ ಕಿರುತೆರೆಗೆ ಬರಲಿದ್ದು ವೀಕ್ಷಕರನ್ನು ರಂಜಿಸಲು ಕಾಯುತ್ತಿದ್ದಾರೆ.

ನಟರಂಗ ಎಂಬುದು ರಂಗಸಂಸ್ಥೆಯ ಹೆಸರು
ನಟರಂಗ ಎಂಬುದು ಒಂದು ರಂಗಸಂಸ್ಥೆಯ ಹೆಸರು. ಅಭಿನಯದ ಆರಂಭದ ಹೆಜ್ಜೆ ಕೆಲವು ಕಲಾವಿದರ ಹೆಸರಿನೊಂದಿಗೆ ಶಾಶ್ವತವಾಗಿ ತಳುಕು ಹಾಕಿಕೊಳ್ಳುವ ಹಾಗೆ ರಾಜೇಶ್ ಅವರೊಂದಿಗೆ ನಟರಂಗವು ಸೇರಿಕೊಂಡಿತು. ಇವರು ಪದವಿಯಲ್ಲಿರುವಾಗಲೇ ನಟನೆಯತ್ತ ವಿಶೇಷ ಒಲವನ್ನು ಹೊಂದಿದ್ದರು. ಮುಂದೆ ನಟರಂಗ ಸಂಸ್ಥೆಯ ಮುಖಾಂತರ ಹಲವಾರು ನಾಟಕಗಳಲ್ಲಿ ಅಭಿನಯಿಸಿ, ಇಂದು ಮನೋರಂಜನಾ ಕ್ಷೇತ್ರದ ಬೇಡಿಕೆಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications











