'ಹರ ಹರ ಮಹಾದೇವ'ನಿಂದ ರಕ್ಷಿತ್ ಶೆಟ್ಟಿಯ '777 ಚಾರ್ಲಿ'ವರೆಗೂ ಸಂಗೀತ ಶೃಂಗೇರಿ ಪಯಣ ಹೇಗಿತ್ತು?
ಮಲೆನಾಡ ಕಂಪನ್ನು ಪಸರಿಸಿದ ನಟಿ ಸಂಗೀತ ಶೃಂಗೇರಿ ಎಂದು ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. 'ಹರ ಹರ ಮಹಾದೇವ' ಧಾರಾವಾಹಿಯ ಸತಿ ಎಂಬ ಪಾತ್ರದ ಮೂಲಕ ಎಲ್ಲರ ಮನಸೂರೆಗೊಂಡ ನಟಿ ಸಂಗೀತ ಶೃಂಗೇರಿ. ಕನ್ನಡ ಸಿನಿ ಜಗತ್ತಿಗೆ ಮಲೆನಾಡ ಕಂಪು ಅಗಾಧವಾಗಿ ಹರಡುತ್ತಿದೆ. ನಟ, ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ಹಲವಾರು ಯುವ ಪ್ರತಿಭೆಗಳು ಚಂದನವನದಲ್ಲಿ ಭದ್ರ ನೆಲೆಯನ್ನು ಕಾಣುತ್ತಿದ್ದಾರೆ.
ಮಲೆನಾಡು ಭಾಗದಿಂದ ಬಂದಂತಹ ಚೆಂದುಳ್ಳಿ ಚೆಲುವೆ ಸಂಗೀತ ಶೃಂಗೇರಿ. ಕಲರ್ ಫುಲ್ ದುನಿಯಾ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ಸೆಳೆಯುತ್ತೆ. ಮೂಲತಃ ಶೃಂಗೇರಿಯವರಾದ ಸಂಗೀತ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಹೆಚ್ಚು ಒಲವನ್ನು ಬೆಳೆಸಿಕೊಂಡಿದ್ದರು. ಅದರಂತೆ ಕಾಲೇಜು ದಿನಗಳಲ್ಲಿ ವರ್ಲ್ಡ್ ಸೂಪರ್ ಮಾಡೆಲ್ ಟೀಮ್‌ಗೆ ಕೂಡ ಆಯ್ಕೆಯಾಗಿದ್ದರಂತೆ. ಸದ್ಯ ರಕ್ಷಿತ್ ಶೆಟ್ಟಿ ಸಿನಿಮಾ ಮೂಲಕ ಗಮನ ಸೆಳೆಯುತ್ತಿರುವ ಸಂಗೀತಾ ಲೈಫ್‌ಸ್ಟೈಲ್ ಹೇಗಿದೆ ನೋಡಿ.

ಮೂರೂವರೆ ಗಂಟೆ ಏಳುತ್ತಾರೆ ಸಂಗೀತಾ
ಸಂಗೀತ ಶೃಂಗೇರಿಗೆ ಬೆಳ್ಳಂಬೆಳಗ್ಗೆ ಏಳುವ ಅಭ್ಯಾಸವಿದೆ. ಇವರು ಪ್ರತಿದಿನ ಬೆಳಗ್ಗೆ ಮೂರೂವರೆ ಗಂಟೆಗೆ ಎದ್ದು ಯೋಗ ಮಾಡುತ್ತಾರಂತೆ. ತಿಂಡಿ ಅಥವಾ ಊಟಕ್ಕೂ ನಾಲ್ಕು ಗಂಟೆ ಮೊದಲು ಯೋಗ ಮಾಡುವುದು ಸಂಗೀತ ಶೃಂಗೇರಿಗೆ ಅಭ್ಯಾಸವಾಗಿ ಬಿಟ್ಟಿದೆ. ಈ ಕಾರಣಕ್ಕೆ ಸಂಗೀತ ಬೆಳ್ಳಂಬೆಳಗ್ಗೆ ಏಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಗೀತ ಶೃಂಗೇರಿಯವರ ಯೋಗ ಸಾಧನೆಗೆ ರಕ್ಷಿತ್ ಶೆಟ್ಟಿ ಪ್ರೇರಣೆಯೂ ಇದೆಯಂತೆ.

ಸಂಗೀತ 'ಸತಿ' ಮೆಚ್ಚುಗೆ
ಸ್ನೇಹಿತರ ಒತ್ತಾಯದ ಮೇರೆಗೆ ಕಿರುಚಿತ್ರವೊಂದರಲ್ಲಿ ಸಂಗೀತ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಸಂಗೀತರ ಪ್ರತಿಭೆಯನ್ನು ಗಮನಿಸಿದ ಸ್ಟಾರ್ ಸುವರ್ಣ 'ಹರ ಹರ ಮಹಾದೇವ' ಎಂಬ ಭಕ್ತಿಪ್ರಧಾನ ಧಾರಾವಾಹಿಗೆ ಆಡಿಷನ್ ನೀಡುವಂತೆ ಹೇಳಿದರಂತೆ. 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಶಿವನ ಪತ್ನಿ ಸತಿದೇವಿಯ ಪಾತ್ರವನ್ನು ನೀಡಿದ್ದರು. ನಿರೀಕ್ಷಿಸಿದಂತೆ ಆಡಿಷನ್‌ನಲ್ಲೂ ಕೂಡ ಉತ್ತಮವಾಗಿ ನಟಿಸಿ ಧಾರಾವಾಹಿಯಲ್ಲಿ ಮಿಂಚ ತೊಡಗಿದರೂ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬೇಕಾದರೆ ಭಾಷೆಯ ಹಿಡಿತ ಹಾಗೂ ಹಾವಾ-ಭಾವ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ಬಹಳ ಗಂಭೀರವಾಗಿ ಪೂಜ್ಯ ಭಾವನೆ ಬರುವಂತೆ ಕಾಣಬೇಕು. ಇವೆಲ್ಲವನ್ನೂ ಮನಗಂಡು ಅಚ್ಚುಕಟ್ಟಾಗಿ ಅಭಿನಯಿಸಿ ಪ್ರೇಕ್ಷಕರ ಪ್ರೀತಿಯನ್ನು ಪಡೆದು ಸತಿದೇವಿ ಎಂದೇ ಗುರುತಿಸಿಕೊಂಡ ಈ ಬೆಡಗಿಯ ಮುಂದಿನ ಬಣ್ಣದ ಯಾನ ಹೊಸ ರೂಪವನ್ನು ಪಡೆದುಕೊಂಡಿತು.

ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿದ್ದ ಸಂಗೀತ
ಧಾರಾವಾಹಿಯಲ್ಲಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡ ಈ ನಟಿ ಮತ್ತೊಬ್ಬ ಧಾರಾವಾಹಿಯ ನಟ ವಿಜಯ್ ಸೂರ್ಯರೊಂದಿಗೆ ಬೆಳ್ಳಿ ಪರದೆ ಪ್ರವೇಶ ಮಾಡಿದರು. ಈ ಚಿತ್ರವು ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. ಆದರೆ, ಒಂದು ಸಿನಿಮಾಗೆ ಅವಕಾಶ ಸಿಗುವುದರ ಜೊತೆಗೆ ಅದೃಷ್ಟವೂ ಅಷ್ಟೇ ಮುಖ್ಯ. ಇದೆಲ್ಲವನ್ನೂ ಮನಗಂಡ ನಟಿ ಸಂಗೀತ ಕಥೆ ಹಾಗೂ ತನ್ನ ಪಾತ್ರದ ಆಯ್ಕೆಯ ಮಹತ್ವವನ್ನು ಅರಿತು ಮುಂದೆ ಸಾಗಬೇಕೆಂಬುದು ಅರಿವಾಗಿತ್ತು. ನಟಿ ಸಂಗೀತ ಶೃಂಗೇರಿ ಈಗ ಬ್ಯಾಕ್ ಟು ಬ್ಯಾಕ್ ವಿಭಿನ್ನ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಪಂಪ' , 'ಚಾರ್ಲಿ 777' ಸಂಗೀತ ಕೈಯಲ್ಲಿದೆ. ತನ್ನ ನಟನಾ ಸಾಮರ್ಥ್ಯ ತೋರಿಸುವ ಪ್ರತಿಭೆ ಇದ್ದರೆ ಖಂಡಿತ ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತೆ ಎನ್ನುವುದಕ್ಕೆ ಸಂಗೀತ ಶೃಂಗೇರಿ ಸಾಕ್ಷಿ.

ಸಂಗೀತ ಶೃಂಗೇರಿ ಪ್ರಾಣಿ ರಕ್ಷಣಾಧಿಕಾರಿ
'ಕಿರಿಕ್ ಪಾರ್ಟಿ' ನಟ ರಕ್ಷಿತ್ ಶೆಟ್ಟಿಯ ಚಾರ್ಲಿ 777 ಚಿತ್ರದಲ್ಲಿ ಸಂಗೀತ ನಟಿಯಾಗಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಪ್ರಾಣಿ ರಕ್ಷಣಾ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹಳ ವಿಭಿನ್ನ ಪಾತ್ರವಾಗಿದ್ದು, ಪೂರ್ವ ತಯಾರಿ ಮಾಡಿಕೊಂಡು ಸಂಗೀತ ನಡೆಸಿದ್ದಾರಂತೆ. ಈ ಚಿತ್ರದ ಕಥಾ ಹಂದರದಲ್ಲಿ ನಾಯಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ. ಒಟ್ಟಾರೆ ಸಂಗೀತ ಶೃಂಗೇರಿ ಪ್ರೇಕ್ಷಕರ ಗಮನ ಸೆಳೆಯುವಂತಹ ಪಾತ್ರಗಳು ಸಿಕ್ಕಿ , ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಟಿಯಾಗಿ ಮಿಂಚುವುದರ ಜೊತೆಗೆ ಪರಭಾಷೆಗಳಲ್ಲೂ ಕೂಡ ತನ್ನ ಛಾಪನ್ನು ಮೂಡಿಸುವತ್ತ ಸಾಗುತ್ತಿದ್ದಾರೆ.


Click it and Unblock the Notifications











