"ಏನಾದರಾಗಲೀ, ನಟನಾಗಿಯೇ ಸಿದ್ಧ" ಎಂದುಕೊಂಡಿದ್ದ ಈ ನಟನೀಗ ಕಿರುತೆರೆಯಲ್ಲಿ ಬ್ಯುಸಿ; ಯಾರಿವರು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ಬ್ರಹ್ಮಾವರ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ರಕ್ಷಿತ್ ಅರಸ್ ಗೋಪಾಲ್. ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ರಕ್ಷಿತ್ ಅರಸ್ ಗೋಪಾಲ್ ಅವರಿಗೆ ಇದ್ದುದು ಒಂದೇ ಕನಸು.
ಹೌದು, ನಟನಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ರಕ್ಷಿತ್ ಇಂದು ತಮ್ಮ ಕನಸು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಏನಾದರಾಗಲೀ, ನಟನಾಗಿಯೇ ಸಿದ್ಧ ಎಂದು ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆ ಸೇರಿದ ರಕ್ಷಿತ್ ಅರಸ್ ಗೋಪಾಲ್ ನಟನೆಯ ಆಳ ಅಗಲಗಳನ್ನು ಹಂತಹಂತವಾಗಿ ತಿಳಿದುಕೊಂಡರು.

ನಾಟಕಗಳಲ್ಲಿ ನಟಿಸುವ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ರಕ್ಷಿತ್ ಅರಸ್ ಗೋಪಾಲ್ ಅವರು ಒಂದಷ್ಟು ನಾಟಕಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ ನಟನೆಯಲ್ಲಿ ಪಕ್ವತೆಯನ್ನು ಕೂಡಾ ಪಡೆದರು. ಶ್ರುತಿ ನಾಯ್ಡು ಅವರ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾದೇವಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಇವರು ಕಿರುತೆರೆಗೆ ಕಾಲಿಟ್ಟರು.
ಮುಂದೆ ರಘುಚರಣ್ ಅವರ ನಿರ್ದೇಶನದಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ಧೀರಜ್ ಆಗಿ ಕಾಣಿಸಿಕೊಂಡಿದ್ದರು. ನಾಯಕ ತೇಜಸ್ವಿಯ ಅಣ್ಣ ಧೀರಜ್ ಆಗಿ ರಕ್ಷಿತ್ ಅರಸ್ ಗೋಪಾಲ್ ನಟಿಸಿದ್ದು, ಆ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅಂದ ಹಾಗೇ ಒಂದೇ ಸಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್‌ಗಳಿದ್ದು ಅದನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.
'ಯಜಮಾನಿ' ಧಾರಾವಾಹಿಯಲ್ಲಿಯೂ ನಾಯಕನ ತಮ್ಮನಾಗಿ ಇವರು ನಟಿಸಿದ್ದು ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ನಂತರ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿರುವ ರಕ್ಷಿತ್ ಮೊದಲ ಬಾರಿಗೆ ಪೋಷಕ ಪಾತ್ರದಿಂದ ನಾಯಕ ನಟನಾಗಿ ಭಡ್ತಿಯನ್ನು ಪಡೆದಿದ್ದರು.

ಅಸಲಿಗೆ ಧಾರಾವಾಹಿಯ ಆರಂಭದ ದಿನಗಳಿಂದಲೇ ರಕ್ಷಿತ್ ಅವರು ಈ ಧಾರಾವಾಹಿಯ ಭಾಗವಾಗಿರಲಿಲ್ಲ. ಬದಲಿಗೆ ನಾಯಕ ವಸಂತನಾಗಿ ನಟಿಸುತ್ತಿದ್ದ ವಿವೇಕ್ ಸಿಂಹ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಇವರು ಆಯ್ಕೆಯಾದರು. ಮಾತ್ರವಲ್ಲ, ವಸಂತ ಪಾತ್ರಕ್ಕೆ ನ್ಯಾಯ ಕೊಡುವಲ್ಲಿ ಯಶಸ್ವಿಯಾದರು.
ನಂತರ 'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ನಾಯಕ ಶಿವು ಆಗಿ ರಕ್ಷಿತ್ ಅಭಿನಯಿಸಿದ್ದರು. ಅಂದ ಹಾಗೇ ಬೇರೆ ಎಲ್ಲಾ ಧಾರಾವಾಹಿಗಳಿಗಿಂತಲೂ 'ಮುದ್ದು ಮಣಿಗಳು' ಧಾರಾವಾಹಿಯು ಇವರ ಪಾಲಿಗೆ ತುಂಬಾ ಸ್ಪೆಷಲ್. ಅದಕ್ಕೆ ಕಾರಣವೂ ಇದೆ. ಬೇರೆ ಧಾರಾವಾಹಿಗಳಲ್ಲಿ ಎಲ್ಲವೂ ರಕ್ಷಿತ್ ಅವರು ಅರ್ಧದಲ್ಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಧಾರಾವಾಹಿ ಆರಂಭವಾಗುವಾಗಲೇ ಅವರು ನಾಯಕನಾಗಿ ಆಯ್ಕೆಯಾಗಿದ್ದರು.
ಶಿವು ಪಾತ್ರದಲ್ಲಿ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ರಕ್ಷಿತ್ ಅರಸ್ ಗೋಪಾಲ್ ಇದೀಗ ಅಗಸ್ತ್ಯ ಬ್ರಹ್ಮಾವರ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಟೀಚರ್ ಕಾವೇರಿಯ ಮನ ಕದ್ದಿರುವ ಈತ ನಟನೆಯ ಮೂಲಕ ಗುರುತಿಸಿಕೊಂಡಿರುವ ಹುಡುಗ. ಒಟ್ಟಿನಲ್ಲಿ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ರಕ್ಷಿತ್ ಅರಸ್ ಗೋಪಾಲ್ ಅವರಿಗೆ ಬಾಲ್ಯದ ಕನಸು ನನಸು ಮಾಡಿದ ಖುಷಿಯಿದೆ.


Click it and Unblock the Notifications











