ಏಕಕಾಲಕ್ಕೆ ಕನ್ನಡ, ತೆಲುಗು ಭಾಷೆಯಲ್ಲಿ ಅಭಿನಯಿಸುತ್ತಿರುವ ರಾಮ್ ಪವನ್ ಶೇಟ್: ಆ ಎರಡು ಪ್ರಾಜೆಕ್ಟ್ ಯಾವುದು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶಾಂಭವಿ' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೇ ಈ ಧಾರಾವಾಹಿಯು ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯಲ್ಲಿಯೂ ಪ್ರಸಾರವಾಗುತ್ತಿದೆ. ಇದೀಗ ಆ ಧಾರಾವಾಹಿಯಲ್ಲಿ ಆದಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟ ರಾಮ್ ಪವನ್ ಶೇಟ್.
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕಿಶೋರ್ ಆಗಿ ಅಭಿನಯಿಸಿದ್ದ ರಾಮ್ ಪವನ್ ಶೇಟ್ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. 'ರುದ್ರ ಗರುಡ ಪುರಾಣ' ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿರುವ ರಾಮ್ ಪವನ್ ಶೇಟ್ ಇದೀಗ ಆದಿಯಾಗಿ ಕನ್ನಡ ಕಿರುತೆರೆ ವೀಕ್ಷಕರನ್ನು ಮಾತ್ರವಲ್ಲದೇ ತೆಲುಗು ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ.

"ನಾನೀಗ ತೆಲುಗಿನ ಜೆಮಿನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ 'ಭೈರವಿ' ಧಾರಾವಾಹಿಯಲ್ಲಿ ಆದಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅದೇ ಧಾರಾವಾಹಿಯು ಕನ್ನಡದಲ್ಲಿ ಶಾಂಭವಿ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದು, ಅದರಲ್ಲಿಯೂ ನಾನು ಇದೇ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಒಂದೇ ಕಥೆ, ಎರಡು ಭಾಷೆಯ ಧಾರಾವಾಹಿ. ಎರಡು ಭಾಷೆಯಲ್ಲಿ ಒಂದೇ ಪಾತ್ರಕ್ಕೆ ಜೀವ ತುಂಬುತ್ತಿರುವುದು ನನಗೆ ಖುಷಿ ಇದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ರಾಮ್ ಪವನ್ ಶೆಟ್ ಹೇಳಿದ್ದಾರೆ.
"ಆದಿ ಪಾತ್ರ ತುಂಬಾ ಚೆನ್ನಾಗಿದೆ. ನಾನು ಇಷ್ಟು ಸಮಯ ಮಾಡಿರುವ ಪ್ರಾಜೆಕ್ಟ್‌ಗಳಲ್ಲಿ ನನಗೆ ತುಂಬಾ ಖುಷಿ ಕೊಟ್ಟ ಪಾತ್ರವಿದು. ಏಕಕಾಲದಲ್ಲಿ ಎರಡು ಭಾಷೆಯ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ನನಗೆ ದೊರಕಿದೆ. ಪಾತ್ರವೂ ತುಂಬಾ ಮಜವಾಗಿದೆ. ಒಂದೊಳ್ಳೆಯ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ" ಆದಿ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡುವಾಗ ರಾಮ್ ಪವನ್ ಶೇಟ್ ಖುಷಿಯನ್ನು ಹಂಚಿಕೊಂಡಿದ್ದಾರೆ.
"ತೆಲುಗು ಭೈರವಿ ಧಾರಾವಾಹಿಯನ್ನು ನಿರ್ದೇಶಸುತ್ತಿರುವ ರವಿ ತೇಜ ಅವರಿಗೆ, ಶಾಂಭವಿ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವ ಗೋಪಿಯವರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. ಇನ್ನು ನನ್ನನ್ನು ಆದಿ ಪಾತ್ರಕ್ಕೆ ರೆಫರ್ ಮಾಡಿದ ಧಾರಾವಾಹಿಯ ನಾಯಕಿ ಐಶ್ವರ್ಯಾ ಶಿಂಧೋಗಿ ಅವರಿಗೂ ನಾನು ಥ್ಯಾಂಕ್ಸ್ ಹೇಳ ಬಯಸುತ್ತೇನೆ. ಜೊತೆಗೆ ಸುವರ್ಣ ಅವಕಾಶ ನೀಡಿದ ಉದಯವಾಹಿನಿಗೂ, ಜೆಮಿನಿ ವಾಹಿನಿಗೂ ನನ್ನ ಕಡೆಯಿಂದ ಧನ್ಯವಾದಗಳು" ಎಂದು ರಾಮ್ ಪವನ್ ಶೇಟ್ ಹೇಳಿದ್ದಾರೆ.

"ತೆಲುಗಿನಲ್ಲಿ ಇದು ನನ್ನ ಮೊದಲನೆಯ ಪ್ರಾಜೆಕ್ಟ್. ಮೊದಲ ಧಾರಾವಾಹಿಯಲ್ಲಿಯೇ ಒಂದು ಪವರ್ ಫುಲ್ ಪಾತ್ರವನ್ನು ನಿರ್ವಹಿಸುವುದಕ್ಕೆ ಅವಕಾಶ ದೊರಕಿರುವುದು ನನ್ನ ಅದೃಷ್ಟ ಎಂದೇ ಹೇಳಬಹುದು. ಅಂದಹಾಗೆ ಏಕಕಾಲದಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಎಲ್ಲರಿಗೂ ದೊರಕುವುದಿಲ್ಲ. ಆ ಸುವರ್ಣ ಅವಕಾಶ ನನಗೆ ದೊರಕಿದೆ. ಇದರ ಬಗ್ಗೆ ನನಗೆ ಸಂತೋಷವಿದೆ" ಎಂದು ರಾಮ್ ಪವನ್ ಶೇಟ್ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಮ್ ಪವನ್ ಶೇಟ್ ಅವರು 'ಗಿಣಿರಾಮ' ಧಾರಾವಾಹಿಯ ರಣಧೀರನಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದವರು. 'ಪ್ರೀತಿಯಿಂದ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಮುಂದೆ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ಮಿಂಚಿದರು. ಮುಂದೆ 'ಜೋಡಿಹಕ್ಕಿ', 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಅಭಿನಯಿಸಿದ ಇವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಮತ್ತೊಮ್ಮೆ ಖಳನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ರಾಮ್ ಪವನ್ ಶೇಟ್ ಒಂದು ಉತ್ತಮ ಪಾತ್ರ ದೊರಕಿರುವ ಸಂತಸದಲ್ಲಿದ್ದಾರೆ.


Click it and Unblock the Notifications











