'ರಾಮಾಚಾರಿ' ಧಾರಾವಾಹಿಯ ಶರ್ಮಿಳಾ ಪಾತ್ರ ಬಿಟ್ಟು ನಟಿ ಸಿರಿಜಾ ಹೊರಟಿದ್ದೆಲ್ಲಿಗೆ?
ಕನ್ನಡ ಕಿರುತೆರೆಯಲ್ಲಿ 2 ದಶಕಗಳಿಂದ ಕಾಣಿಸಿಕೊಳ್ಳುತ್ತಿರುವ ನಟಿ ಸಿರಿಜಾ ಪರಿಚಯ ವೀಕ್ಷಕರಿಗಿದೆ. ಕೆಲ ಸಮಯ ಮಾತ್ರ ಮಾಯವಾಗಿದ್ದ ಸಿರಿಜಾ ಅವರು ಪರಭಾಷೆ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದರು. ಕಳೆದ ವರ್ಷ ಉದಯ ಟಿವಿಯಲ್ಲಿ ಮೂಡಿ ಬಂದ 'ಮದುಮಗಳು' ಎಂಬ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸಿರಿಜಾ ಅವರು ಈಗ ಮತ್ತೆ ನಾಪತ್ತೆಯಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಟಾಪ್ ಲಿಸ್ಟ್‌ನಲ್ಲಿರುವ ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಸಿರಿಜಾ ಅವರು ಅಭಿನಯಿಸುತ್ತಿದ್ದಾರೆ. ಆದರೆ, ಈಗಾಗಲೇ ಹಲವು ದಿನಗಳಿಂದ ಧಾರಾವಾಹಿಯಲ್ಲಿ ಪುನಃ ಕಾಣೆಯಾಗಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿದ್ದ ನಟಿ ಸಿರಿಜಾ ಅವರು ʼಮನೆಯೊಂದು ಮೂರು ಬಾಗಿಲು', 'ಸಂಬಂಧ', 'ರಂಗೋಲಿ', 'ಬದುಕು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಅನೇಕ ಮೆಗಾ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಸಿರಿಜಾ ಕೆಲ ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಅದಷ್ಟೇ ಅಲ್ಲದೇ, ಅಂಬಿಕಾ', 'ನನ್ನವಳು ನನ್ನವಳು', 'ಬಂದೇ ಬರತಾವ ಕಾಲ', 'ಕೋಗಿಲೆ , 'ಈ ಬಂಧನ', 'ಗೀತಾಂಜಲಿ', 'ಜೋಡಿಹಕ್ಕಿ', 'ಅಂಜಲಿ' ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಸಿರಿಜಾ ಕಾಣಿಸಿಕೊಂಡಿದ್ದಾರೆ. ಏಕಕಾಲಕ್ಕೆ 3-4 ಧಾರಾವಾಹಿಗಳಲ್ಲಿ ಬ್ಯುಸಿಯಿರುತ್ತಿದ್ದ ಸಿರಿಜಾ ಕನ್ನಡ, ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟನೆ
ಚಿಕ್ಕ ವಯಸ್ಸಿಗೆ ಸಿರಿಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಕನ್ನಡ ಸೇರಿ ಪರಭಾಷೆಯಲ್ಲಿಯೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಅಭಿ' ಚಿತ್ರದ ಮೂಲಕ ಸಿರಿಜಾ ಅವರು ಚಿರಪರಿಚಿತರಾಗಿದ್ದರು. ತೆಲುಗು ಚಿತ್ರರಂಗದಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದರು. ಜ್ಯೂ.ಎನ್ಟಿಆರ್ ಅವರ 'ನಿನ್ನು ಚೂಡಾಲನಿ' ಸಿನಿಮಾದಲ್ಲಿಯೂ ಸಿರಿ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ 'ಸಿಂಹಾದ್ರಿಯ ಸಿಂಹ', 'ಚಂದು' ಮುಂತಾದ ಸಿನಿಮಾಗಳಲ್ಲಿ ಸಿರಿ ನಟಿಸಿದ್ದಾರೆ.
'ಮದುಮಗಳು' ಕಥೆಯಲ್ಲಿ ವಿಲನ್
ಉದಯ ವಾಹಿನಿಯ 'ಮದುಮಗಳು' ಧಾರಾವಾಹಿಯಲ್ಲಿ ನಟಿ ಸಿರಿಜಾ ಅವರು ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸುಂದರ್ ವೀಣಾ, ಭವೀಶ್, ರಕ್ಷಿತಾ ನಟಿಸಿದ್ದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಧಾರಾವಾಹಿ ರಾಮಾಚಾರಿ. ಇದರಲ್ಲೂ ದೊಡ್ಡ ತಾರಾ ಬಳಗವೇ ಇದೆ. ರಾಮಾಚಾರಿ ಧಾರಾವಾಹಿಯಲ್ಲಿ ಸೈಲೆಂಟ್ ಆಗಿದ್ದ ಇವರ ಪಾತ್ರ ಈಗ ಸೈಲೆಂಟ್ ಆಗಿಯೇ ಮಾಯವಾಗಿದೆ. ಜಯಶಂಕರ್ ಎರಡನೇ ಪತ್ನಿ ಶರ್ಮಿಳಾ ಪಾತ್ರದಲ್ಲಿ ಸಿರಿಜಾ ನಟಿಸುತ್ತಿದ್ದರು. ಒಳ್ಳೆ ಪಾತ್ರ ಮಾಡಿದ್ದ ಸಿರಿಜಾ, ಈಗ ಕಳೆದ ಹದಿನೈದು ದಿನಗಳಿಂದ ಕಾಣೆಯಾಗಿದ್ದಾರೆ.

ಧಾರಾವಾಹಿಯಿಂದ ಹೊರ ನಡೆದ್ರಾ..?
ಚಾರುಲತಾ ನಿಶ್ಚಿತಾರ್ಥದ ಸಂದರ್ಭದಲ್ಲೂ ಸಿರಿಜಾ ಅವರು ಕಾಣಿಸಿಕೊಂಡಿಲ್ಲ. ಆದರೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿದೇಶಿ ಪ್ರವಾಸದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಿಂಗಾಪುರದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ಎರಡು ದಿನಗಳ ಹಿಂದೆ ತೇಲಿ ಬಿಟ್ಟಿದ್ದಾರೆ.
ಸ್ಪಷ್ಟನೆ ಸಿಗಬೇಕಿದೆ
ಇನ್ನು 'ರಾಮಾಚಾರಿ' ತಂಡ ಸಿರಿಜಾ ಅವರ ಬದಲಿಗೆ ಬೇರೆ ಕಲಾವಿದರನ್ನು ಕರೆ ತರಲು ಹುಡುಕಾಟ ನಡೆಸಿದೆ ಎನ್ನಲಾತ್ತಿದೆ. ಆದರೆ, ಸಿರಿಜಾ ಅವರು ಶರ್ಮಿಳಾ ಪಾತ್ರವನ್ನು ಕೈಬಿಟ್ಟು ಧಾರಾವಾಹಿಯಿಂದ ಹೊರ ನಡೆದಿರುವುದು ಎಷ್ಟು ಸತ್ಯ ಎಂಬುದು ಇನ್ನು ಮುಂದಷ್ಟೇ ತಿಳಿದು ಬರಬೇಕಿದೆ.


Click it and Unblock the Notifications











