'ರಾಮಾಚಾರಿ'ಯ ಹುಡುಗಿಗೆ IPS ಅಧಿಕಾರಿ ಆಗ್ಬೇಕಂತೆ: ಸೀರಿಯಲ್‌ನಲ್ಲಿ ಅಲ್ಲ ರಿಯಲ್ ಲೈಫ್‌ನಲ್ಲಿ!
'ರಾಮಾಚಾರಿ' ಧಾರಾವಾಹಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೂಪರ್ ಡೂಪರ್ ಆಗಿರುವುದು ಕಿರುತೆರೆ ವೀಕ್ಷಕರಿಗೆ ಗೊತ್ತೇ ಇದೆ. ಈ ಧಾರಾವಾಹಿಯಲ್ಲಿ "ಮಾವ.. ಮಾವ.." ಎನ್ನುತ್ತಾ ತನ್ನ ಮಾವನ ಮಗನ ಹಿಂದೆ ಸುತ್ತುವ ಹುಡುಗಿಯನ್ನು ನೋಡೋಕೆ ಚಂದ. ಹೀಗೆ ಮದುವೆ ಆದರೆ ಮಾವನ ಮಗ ರಾಮಾಚಾರಿಯನ್ನೇ ಮದುವೆ ಆಗಬೇಕೆಂದಿರುವ ಈ ಹುಡುಗಿ ತನ್ನ ಮುಗ್ಧತೆ ಜೊತೆ ಹೊತೆಗೆ ಚೂಟಿತನಕ್ಕೆ ವೀಕ್ಷಕರ ಮನ ಗೆದ್ದಿದ್ದಾಳೆ.
ಈ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ನಟಿಯ ನಿಜವಾದ ಹೆಸರು ಅಭಿಜ್ಞಾ ಭಟ್. ಕಿರುತೆರೆಯ ಈ ಜನಪ್ರಿಯ ನಟಿ ಅಭಿಜ್ಞಾ ಭಟ್ ಅವರು ರಿಯಲ್ ಲೈಫ್‌ನಲ್ಲಿ ತಮ್ಮ ರೀಲ್ ಲೈಫ್ ಗಿಂತ ಬಹಳ ವಿಭಿನ್ನ. ಕಿರುತೆರೆಯಲ್ಲಿ ಇವರನ್ನು ನೋಡುವುದೇ ಬೇರೆ. ಅದೇ ಪಾತ್ರದಿಂದ ಹೊರ ಬಂದ್ಮೇಲೆ ಇವರನ್ನು ನೋಡುವುದೇ ಬೇರೆ.

ಹೌದು, ರೀಲ್ ಲೈಫ್ ಅಂದರೆ ರಾಮಾಚಾರಿ ಧಾರಾವಾಹಿಯಲ್ಲಿ ಮಾವ ಮಾವ ಎಂದು ಧಾರಾವಾಹಿ ನಾಯಕನ ಹಿಂದೆ ಸುತ್ತುವ ಈ ನಟಿ ರಿಯಲ್ ಲೈಫ್‌ನಲ್ಲಿ ಬಹಳ ದೊಡ್ಡ ಕನಸನ್ನೇ ಕಾಣುತ್ತಿದ್ದಾರೆ. ಅವರ ಸೋಶಿಯಲ್ ಮೀಡಿಯಾನೇ ಇದಕ್ಕೆ ಸಾಕ್ಷಿ.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟಿವ್ ಆಗಿರುವ ಈಕೆ ಸಮಯ ಸಿಕ್ಕಾಗಲೆಲ್ಲಾ ಫೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಆ ಮೂಲಕ ತಮ್ಮ ಫಾಲೋವರ್ಸ್ ಅನ್ನು ಎಂಗೇಜ್ ಮಾಡುತ್ತಿರುತ್ತಾರೆ. ಇನ್ನು ಅಭಿಜ್ಞಾಗೆ ರಿಯಲ್ ಲೈಫ್‌ನಲ್ಲಿ ಐಪಿಎಸ್ ಅಧಿಕಾರಿಯಾಗಬೇಕೆಂಬ ಆಸೆ ಉಂಟಂತೆ. ಅದಕ್ಕೆ ಚೆನ್ನಾಗಿ ತಯಾರಿಯೂ ನಡೆಯುತ್ತಿದೆ ಅಂತೆ.

ಸಾಮಾನ್ಯವಾಗಿ ನಟ ನಟಿಯರು ನಟನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಗುರಿಯಿಟ್ಟು ಆ ಕಡೆಗೆ ಸಾಗುತ್ತಿರುತ್ತಾರೆ. ಆದರೆ ಇಲ್ಲಿ ನಟಿ ಅಭಿಜ್ಞಾ ಭಟ್ ಅವರು ಐಪಿಎಸ್ ಅಧಿಕಾರಿಯಾಗಬೇಕೆಂಬ ಆಸೆ ಹೊತ್ತಿರುವುದಷ್ಟೇ ಅಲ್ಲದೆ, ಶೂಟಿಂಗ್ ಇಲ್ಲದ ದಿನ 12-14ಗಂಟೆಗಳ ಕಾಲ ಸತತವಾಗಿ ಓದುತ್ತಾರಂತೆ. ತಮ್ಮ 18ನೇ ವಯಸ್ಸಿನಿಂದಲೂ ಇಂಡಿಪೆಂಡೆಂಟ್ ಆಗಿರುವ ನಟಿ ಅಭಿಜ್ಞಾ ಭಟ್ ಅವರು ತಮ್ಮ ತಂದೆ ತಾಯಿಯಿಂದ ಹಣಕ್ಕೆ ಕೈ ಚಾಚುವುದಿಲ್ಲವಂತೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ' ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಅಭಿಜ್ಞಾ ಭಟ್ ಅಂದಿನಿಂದ ಇಂದಿನವರೆಗೂ ನಟನೆ ಹಾಗೂ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಟಿ ರಾಧಿಕಾ ಪಂಡಿತ್ ಇವರ ನೆಚ್ಚಿನ ಸೆಲೆಬ್ರಿಟಿ ಆಗಿದ್ದು, ಆಕೆ ಹುಡುಗರು ಸಿನಿಮಾದಲ್ಲಿ ನಟಿಸಿರುವ ಪಾತ್ರದಂತೆಯೇ ತಮ್ಮ ಪ್ರಸ್ತುತ ಪಾತ್ರ ಇರುವುದರ ಬಗ್ಗೆ ನಟಿ ಅಭಿಜ್ಞಾ ಭಟ್ ಖುಷಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











