ಸಿನಿಮಾದತ್ತ ಮುಖ ಮಾಡಿದ ರಾಧಾ ಭಗವತಿ, ಸಾಲು ಸಾಲು ಚಿತ್ರಗಳಲ್ಲಿ ಮಿಂಚುತ್ತಿರುವ 'ರಾಮಾಚಾರಿ' ತಂಗಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ತಂಗಿ ಪಾತ್ರವನ್ನು ಮಾಡುತ್ತಿದ್ದ ರಾಧಾ ಭಗವತಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಹೌದು ರಾಧಾ ಭಗವತಿ ಇದೀಗ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಹೊಸ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ತಂಗಿ ಶ್ರುತಿಯಾಗಿ ನಟನೆ ಮಾಡುತ್ತಿರುವ ಈಕೆಯ ಮುಗ್ಧ ನಟನೆಗೆ ಜನ ಸೈ ಎಂದಿದ್ದಾರೆ.
ಪಾತ್ರಕ್ಕೆ ಜೀವತುಂಬಿ ಅಪ್ಪಟ ಮುಗ್ಧೆಯಾಗಿ ಅಭಿನಯಿಸುತ್ತಿರುವ ನಟಿ ರಾಧಾ ಭಗವತಿ
ಧಾರಾವಾಹಿಯಲ್ಲಿ ತಂದೆಯ ಪ್ರೀತಿಯ ಮಗಳು ಎಂದರೆ ತಪ್ಪಾಗದು. ತಂದೆಯ ಮಾತಿಗೆ ಒಂದು ಮಾತು ಎದುರಾಡದೆ ಪ್ರೀತಿಯಿಂದ ಇರುವ ಮನೆ ಮಗಳು ಈಕೆ. ಅಣ್ಣನ ಮುದ್ದಿನ ತಂಗಿ. ಅತ್ತಿಗೆಯ ಮೇಲೆ ಸಣ್ಣ ಮುನಿಸು ಇದ್ದರೂ ಪ್ರೀತಿ ಇದೆ ಈಕೆಗೆ . ತಾಯಿಯ ಪ್ರೀತಿಯ ಮಗಳಾಗಿ ಇರುವ ಶ್ರುತಿ ನೋಡುಗರ ಮನದಲ್ಲಿ ತನ್ನದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಿರುತೆರೆಯಿಂದ ಹಿರಿತೆರೆಗೆ ಮುಖ ಮಾಡಿದ ನಟಿ
ಇದೀಗ ರಾಧಾ ಕಿರುತೆರೆಯಿಂದ ಹಿರಿತೆರೆಯತ್ತಾ ಮುಖ ಮಾಡಿದ್ದಾರೆ. ರಾಧಾ ಭಗವತಿ ಇದೀಗ ವಸಂತ ಕಾಲದ ಹೂವುಗಳು ಎಂಬ ಹೊಚ್ಚ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಚಿನ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ರಾಧ ಭಗವತಿ ಅವರ ಎರಡನೇ ಸಿನಿಮಾ ಇದಾಗಿದೆ.
ಈಗಾಗಲೇ ರಾಧಾ 90 ದಿನಗಳು ಎನ್ನುವ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ನೋಡಿದ ಸಿನಿಪ್ರೇಮಿಗಳು ಇಷ್ಟಪಟ್ಟಿದ್ದಾರೆ. ಇದರ ಜೊತೆ ರಾಧಾಗೆ ಸಾಲು ಸಾಲು ಆಫರ್ ಗಳು ಬರುತ್ತಿದೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ', 'ವಸಂತ ಕಾಲದ ಹೂಗಳು' ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ.

ಹಲವು ಧಾರಾವಾಹಿಗಳಿಗೆ ಕಂಠದಾನ ಮಾಡಿರುವ ನಟಿ
ರಾಧಾ ಎರಡು ಸಿನಿಮಾಗಳಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರಂತೆ. ಜೊತೆಗೆ ಸೀರಿಯಲ್ ಒಂದಕ್ಕೆ ನಾಯಕಿ ಪಾತ್ರಕ್ಕೆ ಕಂಠದಾನ ಕೂಡ ಮಾಡಿದ್ದಾರೆ. ರಾಧ ಭಗವತಿ ಅವರು ಹುಟ್ಟಿನಿಂದಲೂ ನಟನೆಯನ್ನು ಕರಗತ ಮಾಡಿಕೊಂಡು ಬೆಳೆದವರು. ನಟನೆಯಲ್ಲಿ ಏನಾದರು ಸಾಧನೆ ಮಾಡಲೇ ಬೇಕು ಎಂಬ ಅವರ ಬಹು ದಿನಗಳ ಕನಸು ನನಸಾಗುತ್ತಿದೆ.


Click it and Unblock the Notifications











