ಇಂಗ್ಲೀಷ್ ಮಾತನಾಡಿ ರಮ್ಯಾ ಟ್ರೋಲ್: "ಸತ್ಯವನ್ನು ಒಪ್ಪಿಕೊಳ್ಳಲೇಬೇಕು" ಎಂದ ರಮೇಶ್ ಅರವಿಂದ್
ವೀಕೆಂಡ್ ವಿತ್ ರಮೇಶ್ ಸೀಸನ್-5ರ ನಾಲ್ಕು ಎಪಿಸೋಡ್‌ಗಳು ಮುಕ್ತಾಯವಾಗಿದೆ. ಕಳೆದ ವಾರ ನಟಿ ರಮ್ಯಾ ಬದುಕನ್ನು ರಮೇಶ್ ರಿವೈಂಡ್ ಮಾಡಿ ತೋರಿಸಿದ್ದರು. ಈ ವಾರ ಪ್ರಭುದೇವ ಅವರ ಏಳುಬೀಳಿನ ಕಥೆ ಅನಾವರಣ ಆಯಿತು. ಆದರೆ ಕಳೆದ ವಾರ ರಮ್ಯಾ ಹೆಚ್ಚು ಇಂಗ್ಲೀಷ್ ಮಾತನಾಡಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ರಮೇಶ್ ಅರವಿಂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಹೇಳಿಕೇಳಿ ಇದು ಕನ್ನಡ ಕಾರ್ಯಕ್ರಮ. ಸಾಧಕರ ಸೀಟ್‌ನಲ್ಲಿ ಕೂತವರು ಇಂಗ್ಲೀಷ್ ಮಾತನಾಡಬಾರದು ಅಂತಲ್ಲ. ಆದರೆ ಬರೀ ಇಂಗ್ಲೀಷ್‌ನಲ್ಲೇ ಮಾತನಾಡಬಾರದು ಎಂದು ರಮ್ಯಾನ ಟ್ರೋಲ್ ಮಾಡಲಾಗಿತ್ತು. ನಮ್ಮ ಅಜ್ಜಿಗೆ ಇಂಗ್ಲೀಷ್ ಬರಲ್ಲ, ರಶ್ಮಿಕಾ ತಸ್ಸಮ, ರಮ್ಯಾ ತದ್ಬವ ಅಂತೆಲ್ಲಾ ಕಿಚಾಯಿಸಿದ್ದರು. ಇದಕ್ಕೆ ರಮ್ಯಾ ನೀಡಿದ ಸ್ಪಷ್ಟನೆ ಕೂಡ ಕೆಲವರಿಗೆ ಬೇಸರ ತರಿಸಿತ್ತು. ಕಾರ್ಯಕ್ರಮದ ಆಯೋಜಕರು ಏನು ಮಾಡುತ್ತಿದ್ದರು? ಕೊನೆಪಕ್ಷ ನಿರೂಪಕರಾದ ರಮೇಶ್ ಅರವಿಂದ್ ಆದರೂ ಇದನ್ನು ಸರಿ ಮಾಡಬಹುದಿತ್ತು ಎಂದು ಕೆಲವರು ಹೇಳಿದ್ದರು.

ಇದೇ ವಿಚಾರದ ಬಗ್ಗೆ ನಟ, ನಿರೂಪಕ ರಮೇಶ್ ಅರವಿಂದ್ ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಇಂಗ್ಲೀಷ್ ಬಗ್ಗೆ ಮಾತ್ರವಲ್ಲ, ನಮ್ಮ ವೀಕೆಂಡ್ ವಿತ್ ರಮೇಶ್ ಮಾತ್ರವಲ್ಲ, ನನ್ನ ಸಿನಿಮಾಗಳ ಬಗ್ಗೆ ಇರಬಹುದು, ನನ್ನ ವೈಯಕ್ತಿಕ ಬದುಕಿನ ಬಗ್ಗೆ ಇರಬಹುದು ಏನೇ ಸಲಹೆ ಬಂದರೂ ಅದರಲ್ಲಿ ಸತ್ಯ ಇದೆ ಎನಿಸಿದರೆ ನನ್ನನ್ನು ನಾನು ತಿದ್ದುಕೊಳ್ಳದಿದ್ದರೆ ನನ್ನಷ್ಟು ದಡ್ಡ ಮತ್ತೊಬ್ಬಇಲ್ಲ. ಹಾಗಾಗಿ ಏನೇ ಸಲಹೆ ಬಂದರೂ ಅದನ್ನು ಪರಿಗಣಿಸಬೇಕು."

"ಅದರಲ್ಲಿ ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು. ನನ್ನನ್ನು ನಾನು ತಿದ್ದಿ ಕೊಳ್ಳಬೇಕು. ಅದೊಂದೇ ಮೇಲೆ ಬರಲು ದಾರಿ. ಹಾಗಾಗಿ ನೀವು ಹೇಳಿದ ಅಂಶ ನಮಗೆ ಗೊತ್ತಾಗಿದೆ. ನಮ್ಮ ತಂಡದವರು, ನಾವು ಎಲ್ಲರೂ ಇನ್ನು ಎಚ್ಚರವಾಗಿ ಇರ್ತೀವಿ, ಅದರ ಬಗ್ಗೆ ಸಂಶಯವೇ ಇಲ್ಲ. ಇನ್ನು 20 ಎಪಿಸೋಡ್ ಇದೆ. ಹಾಗಾಗಿ ತಿದ್ದಿಕೊಳ್ಳೋದು ಸಮಸ್ಯೆನೇ ಅಲ್ಲ, ಇನ್ನೊಂದು ಅವಕಾಶ ಮುಂದಿನ ವಾರವೇ ಸಿಗಲಿದೆ ನಮಗೆ. ಥ್ಯಾಂಕ್ಯೂ ನಿಮ್ಮ ಸಲಹೆಗಳು ಬರುತ್ತಿರಲಿ."
"ಶೋ ಬಗ್ಗೆ ಮಾತ್ರವಲ್ಲ, ನನ್ನ ಬಗ್ಗೆಯೂ ಗಮನವಿರಲಿ. ಏನಾದರೂ ತಿದ್ದುಪಡಿ ಇದ್ದರೆ ತಿಳಿಸಿ. ನಿರಂತರ ತಿದ್ದುಪಡಿಬೇಕು. ಅದನ್ನು ಮಾಡಿಕೊಂಡು ಬಂದಿದ್ದೇನೆ" ಎಂದಿದ್ದಾರೆ. ಇನ್ನು ಯೂಟ್ಯೂಬರ್ ಡಾ. ಬ್ರೋನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸುವ ಬಗ್ಗೆ ಎದುರಾದ ಪ್ರಶ್ನೆಗೂ ರಮೇಶ್ ಅರವಿಂದ್ ಉತ್ತರಿಸಿದ್ದಾರೆ. "ನಾನು ಸಾಧಕರ ಆಯ್ಕೆ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ. ನನ್ನ ಕೆಲಸ ನಿರೂಪಣೆ ಮಾಡುವುದು ಅಷ್ಟೇ"
"ಕರ್ನಾಟಕದಲ್ಲಿರುವ ಎಲ್ಲಾ ಒಳ್ಳೆ ಸಾಧಕರನ್ನು ಜನ ಇಷ್ಟಪಡುವಂತಹ ವ್ಯಕ್ತಿಗಳನ್ನು ಸಾಧಕರ ಸೀಟ್‌ನಲ್ಲಿ ಕೂರಿಸುವ ಆಸೆ ಇದೆ. ಯಾವುದೋ ಒಂದು ಕಾರಣಕ್ಕೆ ಒಬ್ಬರು ನಿಮಗೆ ಇಷ್ಟವಾಗಿದ್ದಾರೆ, ಯುವಕರಿಗೆ ಇಷ್ಟವಾಗಿದ್ದಾರೆ ಅಂದ್ರೆ ಅದನ್ನು ನಾವು ಗೌರವಿಸಲೇಬೇಕು. ಆ ಸೀಟಿನ ಉದ್ದೇಶವೇ ಅದು. ಹಾಗಾಗಿ ಯಾರ್ಯಾರು ಏನೇನು ಸಾಧನೆ ಮಾಡಿದ್ದಾರೋ ಅವರನ್ನೆಲ್ಲಾ ನಿಮ್ಮ ಎದುರಿಗೆ ಕೂರಿಸಬೇಕು, ಅವರ ಕಥೆಗಳನ್ನು ಹೇಳಬೇಕು ಎನ್ನುವ ಆಸೆ ನನಗಿದೆ. ಆದರೆ ಈಗಲೇ ಆಗುತ್ತೆ, ಮುಂದಿನ ವಾರವೇ ಆಗುತ್ತೆ ಎನ್ನಲು ಸಾಧ್ಯವಿಲ್ಲ. ಅದು ಚಾನಲ್‌ನವರ ನಿರ್ಧಾರ. ಎಲ್ಲಾ ಸಾಧಕರು ಆ ಸೀಟ್ ಕೂರಬೇಕು, ಆದರೆ ಕೊಂಚ ತಡ ಆಗಬಹುದು." ಎಂದಿದ್ದಾರೆ.
ಸದ್ಯ ನಟ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'- 2 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. 3 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಹಿಟ್ ಆಗಿತ್ತು. ಅದಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಈ ಸಿನಿಮಾ ಬಂದಿದೆ. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ರಮೇಶ್ ಕಾಣಿಸಿಕೊಂಡಿದ್ದು ಸರಣಿ ಕೊಲೆಗಳ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಪತ್ತೇದಾರ ಪಾತ್ರದಲ್ಲಿ ರಮೇಶ್ ಅರವಿಂದ್ ಮತ್ತೊಮ್ಮೆ ಪ್ರೇಕ್ಷಕರಿಗೆ ಥ್ರಿಲ್ ಕೊಡಲು ಬರ್ತಿದ್ದಾರೆ.


Click it and Unblock the Notifications











