'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ರಮೇಶ್ ಮೊದಲೇ ಮಾಡಬೇಕಿತ್ತು
ಸ್ಟಾರ್ ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಹೊಸ ಸಾರಥಿ ಸಿಕ್ಕಿದ್ದಾರೆ. ನಟ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಈ ಬಾರಿಯ ಕೋಟ್ಯಾಧಿಪತಿ ಶೋ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದಿದೆ. ಪುನೀತ್ ನಂತರ ರಮೇಶ್ ಈ ಶೋ ಮುಂದುವರೆಸುತ್ತಿದ್ದು ಎಲ್ಲರೂ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಆದರೆ, ವಾಸ್ತವವಾಗಿ ಈ ಹಿಂದೆಯೇ ರಮೇಶ್ ಈ ಕಾರ್ಯಕ್ರಮವನ್ನು ಮಾಡಬೇಕಿತ್ತಂತೆ.
ಹೌದು, ನಿನ್ನೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಲಾಂಚ್ ವೇಳೆ ನಟ ರಮೇಶ್ ಈ ಕಾರ್ಯಕ್ರಮವನ್ನು ಒಪ್ಪಿಕೊಂಡಿದರ ಹಿಂದಿನ ರೋಚಕ ಘಟನೆಯನ್ನು ಹಂಚಿಕೊಂಡಿದ್ದಾರೆ. ಲೈಫ್ ಒಂದು ಸರ್ಕಲ್ ಎನ್ನುವ ಹಾಗೆ ರಮೇಶ್ ಮತ್ತೆ ಈ ಕಾರ್ಯಕ್ರಮಕ್ಕೆ ಮರಳಿದ್ದಾರೆ. ಮುಂದೆ ಓದಿ...

ಮೊದಲು ರಮೇಶ್ ಬಳಿಗೆ ಬಂದಿತ್ತು ಕೋಟ್ಯಾಧಿಪತಿ ಆಫರ್
''ನಾನು ಈ ಕಾರ್ಯಕ್ರಮ ಒಪ್ಪಿಕೊಳ್ಳುವ ಹಿಂದೆ ಒಂದು ರೋಚಕ ಕಥೆ ಇದೆ. ಮೊದಲು ಕೋಟ್ಯಾಧಿಪತಿ ಕನ್ನಡಕ್ಕೆ ಬಂದಾಗ ಬೇರೆ ವಾಹಿನಿಯಲ್ಲಿ ಇತ್ತು. ಆ ವಾಹಿನಿಯಲ್ಲಿ ನಾನು ಕಾರ್ಯಕ್ರಮ ಮಾಡಬೇಕಿತ್ತು. ಎಲ್ಲ ರೆಡಿ ಆಗಿತ್ತು, ಶೋ ಶುರು ಆಗಬೇಕಿತ್ತು ಅಷ್ಟೆ. ಅಷ್ಟರಲ್ಲಿ ಕಾರ್ಯಕ್ರಮ ಇನ್ನೊಂದು ವಾಹಿನಿಗೆ ಶಿಫ್ಟ್ ಆಯ್ತು.'' - ರಮೇಶ್ ಅರವಿಂದ್, ನಟ

ಕಾರ್ಯಕ್ರಮ ಬೇರೆ ವಾಹಿನಿಗೆ ಶಿಫ್ಟ್ ಆಯ್ತು
''ನನ್ನ ಹೆಂಡತಿ ಕೂಡ ಅಮಿತಾಭ್ ಬಚ್ಚನ್ ಮಾಡಿದ ಕಾರ್ಯಕ್ರಮವನ್ನು ಕನ್ನಡದಲ್ಲಿ ನಾನು ಮಾಡುತ್ತಿದ್ದೇನೆ ಅಂತ ತುಂಬ ಖುಷಿ ಆಗಿದ್ದಳು. ಆದರೆ ಯಾವುದೋ ಕಾರಣಕ್ಕೆ ಆ ಕಾರ್ಯಕ್ರಮ ಆ ವಾಹಿನಿಯಿಂದ ಮತ್ತೊಂದು ವಾಹಿನಿಗೆ ಹೋಯ್ತು. ಕಾರ್ಯಕ್ರಮ ಬೇರೆ ವಾಹಿನಿಗೆ ಹೋದ ಮೇಲೆ ಎಲ್ಲ ಬದಲಾವಣೆ ಆಯ್ತು.'' - ರಮೇಶ್ ಅರವಿಂದ್, ನಟ

ನಂತರ 'ವೀಕೆಂಡ್ ವಿತ್ ರಮೇಶ್' ಮಾಡಿದ್ರು
''ಆ ನಂತರ ಅಪ್ಪು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಮಾಡಿದರು. ನಾನು 'ವೀಕೆಂಡ್ ವಿತ್ ರಮೇಶ್' ಶುರು ಮಾಡಿದೆ. ಆದರೆ ಈಗ ಮತ್ತೆ ನಾನು ಈ ಕಾರ್ಯಕ್ರಮಕ್ಕೆ ಮರಳಿದ್ದೇನೆ. ಲೈಫ್ ಒಂದು ಸರ್ಕಲ್ ಎನ್ನುವ ಹಾಗೆ ಎಲ್ಲ ಮತ್ತೆ ವಾಪಸ್ ಬಂದಿದೆ.'' ಎಂದು ರಮೇಶ್ ತಮ್ಮ ಸಂತಸವನ್ನು ಹಂಚಿಕೊಂಡರು.

ಆಗಲೇ ತಯಾರಿ ಮಾಡಿಕೊಂಡಿದ್ದರು ರಮೇಶ್
ರಮೇಶ್ ಒಂದು ಕೆಲಸವನ್ನು ಎಷ್ಟು ಚೆನ್ನಾಗಿ ಆಗುತ್ತದೆಯೋ ಅಷ್ಟು ಚೆನ್ನಾಗಿ ಮಾಡುವ ವ್ಯಕ್ತಿ. ಇನ್ನು ಮೊದಲ ಬಾರಿಗೆ ಕೋಟ್ಯಾಧಿಪತಿ ಆಫರ್ ಬಂದಾಗಲೇ ರಮೇಶ್ ಆ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದರು. ಆಗ ಕಾರ್ಯಕ್ರಮಕ್ಕೆ ಬೇಕಾದ ಅರ್ಹತೆಗಳ ಬಗ್ಗೆ ಬರೆದುಕೊಂಡಿದ್ದ ಪುಸ್ತಕ ಇನ್ನೂ ಕೂಡ ಅವರು ಇಟ್ಟುಕೊಂಡಿದ್ದಾರೆ. ಇದು ಕಾರ್ಯಕ್ರಮದ ಬಗ್ಗೆ ಅವರಿಗೆ ಇರುವ ಪ್ಯಾಷನ್ ಅನ್ನು ತೋರಿಸುತ್ತದೆ.


Click it and Unblock the Notifications











