ಯಾರು ಎಷ್ಟೇ ಟ್ರೋಲ್ ಮಾಡಿದ್ರೂ ಡೋಂಟ್ ಕೇರ್; ಈ ಸಲ ಕಪ್ ನಮ್ದೇ ಎಂದ ರಮ್ಯಾ!
ಸ್ಯಾಂಡಲ್ ವುಡ್ ಕ್ವೀನ್, ಮೋಹಕತಾರೆ ರಮ್ಯಾ ಹಲವು ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸಿನಿಮಾರಂಗದಿಂದ ದೂರ ಉಳಿದಿದ್ದರು.
2016ರಲ್ಲಿ ಬಿಡುಗಡೆಗೊಂಡಿದ್ದ ನಾಗರಹಾವು ಸಿನಿಮಾಗಾಗಿ ಬಣ್ಣ ಹಚ್ಚಿದ ಬಳಿಕ ಚಿತ್ರರಂಗದಿಂದ ದೂರ ಇದ್ದ ರಮ್ಯಾ ಕಳೆದ ವರ್ಷ ಆಪಲ್ ಬಾಕ್ಸ್ ಸ್ಟುಡಿಯೊಸ್ ಎಂಬ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿ ಇಂಡಸ್ಟ್ರಿಗೆ ಮರಳಿದರು. ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಧನಂಜಯ್ ನಟನೆಯ ಮುಂದಿನ ಚಿತ್ರ ಉತ್ತರಾಖಂಡ ಮೂಲಕ ನಾಯಕಿಯಾಗಿಯೂ ಸಹ ರಮ್ಯಾ ಚಿತ್ರರಂಗಕ್ಕೆ ಮರಳಿದ್ದಾರೆ.

ಹೀಗೆ ದೊಡ್ಡ ಮಟ್ಟದಲ್ಲಿಯೇ ಚಿತ್ರರಂಗಕ್ಕೆ ವಾಪಸ್ಸಾದ ರಮ್ಯಾಗೆ ಕನ್ನಡ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮದಿಂದ ಸ್ವಾಗತ ಕೋರಿ ಬರಮಾಡಿಕೊಂಡಿದ್ದರು. ಸ್ಟಾರ್ ನಟರ ರೇಂಜಿಗೆ ರಮ್ಯಾ ಕುರಿತು ಟ್ವೀಟ್ ಹರಿದಾಡಿದ್ದವು. ಇಷ್ಟು ವಿಜೃಂಭಣೆಯಿಂದ ನಟಿ ರಮ್ಯಾ ಸ್ವಾಗತ ಪಡೆದುಕೊಳ್ಳಲು ಕಾರಣ ಚಿತ್ರರಂಗದಲ್ಲಿ ಅವರು ಮಾಡಿರುವ ಹೆಸರು ಹಾಗೂ ಗಳಿಸಿರುವ ಖ್ಯಾತಿ.
ಹೌದು, ರಮ್ಯಾ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಹೀಗಾಗಿಯೇ ಅವರನ್ನು ನಿನ್ನೆಯಿಂದ ( ಮಾರ್ಚ್ 25 ) ಆರಂಭಗೊಂಡ ಐದನೇ ಸೀಸನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಹೌದು, ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ರಮ್ಯಾ ಸಾಧಕರ ಖುರ್ಚಿಯನ್ನು ಏರಿದ್ದಾರೆ.

ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ರಮ್ಯಾ ಎಂದಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಅಭಿಮಾನಿಗಳು ಪೋಸ್ಟ್ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಹಲವು ವರ್ಷಗಳ ಬಳಿಕ ರಮ್ಯಾ ಅವರನ್ನು ಹೆಚ್ಚು ಸಮಯ ತೆರೆ ಮೇಲೆ ವೀಕ್ಷಿಸಬಹುದು ಎಂದು ಹರ್ಷಗೊಂಡಿದ್ದರು.
ಆದರೆ ಈ ಸಂಚಿಕೆ ಪ್ರಸಾರವಾಗಿ ಕೆಲ ಸಮಯ ಕಳೆಯುತ್ತಿದ್ದಂತೆಯೇ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಕಂಟೆಂಟ್ ಆಗಿಬಿಟ್ಟರು. ಕಾರಣ ರಮ್ಯಾ ಮಾತನಾಡುವಾಗ ಇಂಗ್ಲಿಷ್ ಭಾಷೆಯನ್ನೇ ಹೆಚ್ಚು ಬಳಸಿದ್ದು. ಹೌದು, ರಮ್ಯಾ ಕಾರ್ಯಕ್ರಮದಲ್ಲಿ ಮಾತನಾಡುವಾಗ ಇಂಗ್ಲಿಷ್ ಬಳಕೆ ಹೆಚ್ಚಿತ್ತು, ಕಾರ್ಯಕ್ರಮ ಸಂಪೂರ್ಣ ಇಂಗ್ಲಿಷ್ ಮಯವಾಗಿತ್ತು, ಇದು ಜೀ ಕನ್ನಡನಾ ಅಥವಾ ಜೀ ಇಂಗ್ಲಿಷಾ, ಅಯ್ಯೋ ರಮ್ಯಾ ಸಂಚಿಕೆಗೆ ಕನ್ನಡ ಸಬ್ ಟೈಟಲ್ ಹಾಕಿಲ್ಲ ಎಂದೆಲ್ಲಾ ಟ್ರೋಲ್ ಮಾಡಿದ್ದರು.
ರಮ್ಯಾಗಿಂತ ರಶ್ಮಿಕಾ ಮಂದಣ್ಣನೇ ಎಷ್ಟೋ ಪರವಾಗಿಲ್ಲ ಅಲ್ಪಸ್ವಲ್ಪ ಕನ್ನಡವಾದ್ರೂ ಬಳಸ್ತಾರೆ ಎಂದು ಭಿನ್ನ ವಿಭಿನ್ನ ಟ್ರೋಲ್ಸ್ ಹರಿದಾಡಿದ್ದವು. ಟ್ವಿಟರ್ ವೇದಿಕೆಯಲ್ಲಿ ರಮ್ಯಾ ಖಾತೆಯನ್ನು ಉಲ್ಲೇಖಿಸಿ ಹೀನಾಯವಾಗಿ ಟ್ರೋಲ್ ಮಾಡಿದ್ದರು. ಹೀಗೆ ಬೃಹತ್ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದು, ರಮ್ಯಾ ಈ ಕುರಿತು ಪ್ರತಿಕ್ರಿಯಿಸಬಹುದು ಎಂಬ ನಿರೀಕ್ಷೆ ಇತ್ತು.
ಆದರೆ ರಮ್ಯಾ ಮಾತ್ರ ಇದ್ಯಾವುದರ ಕುರಿತು ಕಿಂಚಿತ್ತೂ ಗಮನ ನೀಡಿಲ್ಲ. ಸಾಲು ಸಾಲು ಟ್ವೀಟ್ ತನ್ನ ವಿರುದ್ಧ ಇದ್ದರೂ ಸಹ ಇಂದು ( ಮಾರ್ಚ್ 26 ) ರಮ್ಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ ಬಾಕ್ಸ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ, ಈ ಸಲ ಕಪ್ ನಮ್ದೇ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಎಷ್ಟೇ ನೆಗೆಟಿವ್ ಟ್ವೀಟ್ ಮಾಡಿ ಟ್ರೆಂಡ್ ಮಾಡಿದರೂ ಐ ಡೋಂಟ್ ಕೇರ್ ಎಂದು ರಮ್ಯಾ ಪರೋಕ್ಷವಾಗಿ ತಿಳಿಸಿದಂತಿದೆ.


Click it and Unblock the Notifications











