'ಕನ್ನಡತಿ' ಭುವನೇಶ್ವರಿ ಆಗಿ ಮತ್ತೆ ನಿಮ್ಮ ಮನೆಗೆ ಬರ್ತಿದ್ದಾರೆ ರಂಜನಿ ರಾಘವನ್.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಪುಟ್ಟಗೌರಿ ಆಗಿ ಸಕಲ ಕಷ್ಟಗಳನ್ನು ಅನುಭವಿಸಿ ಪ್ರತಿನಿತ್ಯ ಹೆಂಗಳೆಯರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದ್ದ ನಟಿ ರಂಜನಿ ರಾಘವನ್.
'ಪುಟ್ಟಗೌರಿ ಮದುವೆ' ಸೀರಿಯಲ್ ಗ್ಯಾಪ್ ನಲ್ಲೇ 'ರಾಜಹಂಸ', 'ಟಕ್ಕರ್' ಸಿನಿಮಾಗಳಲ್ಲಿ ಅಭಿನಯಿಸಿದ ರಂಜನಿ ರಾಘವನ್ 'ಪೌರ್ಣಮಿ ತಿಂಗಳ್' ಮೂಲಕ ಮಲಯಾಳಂ ಕಿರುತೆರೆಯನ್ನೂ ಒಂದು ಕೈ ನೋಡಿದರು.
ಬಳಿಕ 'ಇಷ್ಟ ದೇವತೆ' ಸೀರಿಯಲ್ ನಲ್ಲಿ ಕ್ರಿಯೇಟಿವ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್ ಮತ್ತು ಕೋ-ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸಿದ ರಂಜನಿ ರಾಘವನ್ ಇದೀಗ ಬ್ಯಾಕ್ ಟು ಪೆವಿಲಿಯನ್ ಎನ್ನುವ ಹಾಗೆ ಮತ್ತೆ ಕನ್ನಡ ಸೀರಿಯಲ್ ವೊಂದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಕಲರ್ಸ್ ಕನ್ನಡದ ಹೊಸ ಧಾರಾವಾಹಿ 'ಕನ್ನಡತಿ'ಯಲ್ಲಿ ರಂಜನಿ ರಾಘವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. 'ಸರಿಗನ್ನಡಂ ಗೆಲ್ಗೆ' ಎನ್ನುವ ಅಪ್ಪಟ ಕನ್ನಡತಿ ಭುವನೇಶ್ವರಿ ಪಾತ್ರ ನಿಭಾಯಿಸುತ್ತಿದ್ದಾರೆ ರಂಜನಿ ರಾಘವನ್.

ಹೆಮ್ಮೆಯ ಕನ್ನಡತಿ ಭುವನೇಶ್ವರಿ ಮತ್ತು ದೊಡ್ಡ ಬಿಸಿನೆಸ್ ಮ್ಯಾನ್ ಸುತ್ತ ಸುತ್ತವ ಕಥೆಯೇ 'ಕನ್ನಡತಿ' ಧಾರಾವಾಹಿಯ ಹೂರಣ. ಈಗಾಗಲೇ 'ಕನ್ನಡತಿ' ಪ್ರೋಮೋಗಳು ಬಿಡುಗಡೆ ಆಗಿದ್ದು, ಕಿರುತೆರೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 'ಕನ್ನಡತಿ' ಸೀರಿಯಲ್ ಪ್ರಸಾರ ದಿನಾಂಕ ಮತ್ತು ಸಮಯ ಇನ್ನೂ ನಿಗದಿ ಆಗಿಲ್ಲ.


Click it and Unblock the Notifications











