ವಿವಾಹ ವಾರ್ಷಿಕೋತ್ಸವಕ್ಕೆ ಸರ್‌ಪ್ರೈಸ್: ಪತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಕಿರುತೆರೆ ನಟಿ
ಸಾಮಾನ್ಯವಾಗಿ ಪ್ರತಿಯೊಬ್ಬ ಹೆಣ್ನೂ ಮಗಳು ಕೂಡ ತನ್ನ ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಕಿರುತೆರೆ ನಟಿಯರೇನು ಹೊರತಾಗಿಲ್ಲ. ಯಾಕಪ್ಪ ಈಗ ಈ ವಿಚಾರ ಅಂತ ಕೇಳ್ತೀರಾ? ಕಿರುತೆರೆ ನಟಿಯರು ಕೂಡ ತಮ್ಮ ಪತಿಗಾಗಿ ಏನೆಲ್ಲಾ ಮಾಡುತ್ತಾರೆ ಎಂಬ ಕುತೂಹಲ ನಿಮಗೆ ಇದ್ದೇ ಇರುತ್ತದೆ. ಇದೀಗ ಅಂತಹದ್ದೇ ಒಂದು ವಿಚಾರವನ್ನು ಹೇಳಲು ಹೊರಟಿದ್ದೇವೆ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಿನ್ನು ಪಾತ್ರದ ರಶ್ಮಿ ಪ್ರಭಾಕರ್ ಪತಿಗಾಗಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಕೇಳಿದರೆ ನೀವೂ ಖುಷಿ ಪಡುತ್ತೀರಾ. ಕನ್ನಡದಲ್ಲಿ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಮೂಲಕ ರಶ್ಮಿ ಪ್ರಭಾಕರ್ ವೀಕ್ಷಕರ ಮನ ಗೆದ್ದಿದ್ದರು. ರಶ್ಮಿ ಪ್ರಭಾಕರ್ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದು, ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಯ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡದ 'ಶುಭ ವಿವಾಹ', 'ಮಹಾಭಾರತ', 'ದರ್ಪಣ', 'ಜೀವನ ಚೈತ್ರ', 'ಮನಸೆಲ್ಲಾ ನೀನೇ', 'ಲಕ್ಷ್ಮೀ ಬಾರಮ್ಮ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ರಶ್ಮಿ ಅವರಿಗೆ ಬೇರೆ ಭಾಷೆಗಳ ಕಿರುತೆರೆಯಲ್ಲಿ ಅವಕಾಶಗಳು ಬರಲು ಶುರುವಾದವು. ಹೀಗಾಗಿ ರಶ್ಮಿ ಅವರು ತಮಿಳು ಭಾಷೆಯಲ್ಲಿ 'ಅರುಂಧತಿ' ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದರು. ನಂತರ ತೆಲುಗಿನ 'ಪೌರ್ಣಮಿ' ಹಾಗೂ 'ಕಾವ್ಯಾಂಜಲಿ' ಧಾರಾವಾಹಿಗಳ ಭಾಗವಾದರು. ಇದಷ್ಟೇ ಅಲ್ಲದೇ, 'ಮಹಾಕಾವ್ಯ' ಮತ್ತು 'ಬಿಬಿ5' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಶ್ಮಿ ಪ್ರಭಾಕರ್ ಇತ್ತೀಚೆಗಷ್ಟೇ 'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆದ್ದಿದ್ದರು. ಕಳೆದ ವರ್ಷ ಮದುವೆಯಾಗಿರುವ ರಶ್ಮಿ ಪ್ರಭಾಕರ್ ಈಗ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಕೆಲ ವರ್ಷಗಳ ಹಿಂದೆ ನಿಖಿಲ್ ಹಾಗೂ ರಶ್ಮಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನು ಒಬ್ಬರು ಮೆಚ್ಚಿ ಪ್ರೀತಿಸಲು ಆರಂಭಿಸಿದರು. ಬಳಿಕ ಇಬ್ಬರ ಮನೆಯಲ್ಲಿ ವಿಷಯ ತಿಳಿಸಿದ್ದಾರೆ. ಎರಡೂ ಮನೆಯವರೂ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನಿಖಿಲ್ ಭಾರ್ಗವ್ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ನಿಖಿಲ್ ಹಾಗೂ ಮನೆಯವರು ರಶ್ಮಿ ಅವರ ನಟನೆಗೆ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ಕಳೆದ ವರ್ಷ ನಟ ನಿರಂಜನ್ ದೇಶ್ ಪಾಂಡೆ ಅವರ ಪತ್ನಿ ಯಶಸ್ವಿನಿ ಗಂಡನಿಗೆ ಇಷ್ಟ ಎಂದು ಮೂಗು ಚುಚ್ಚಿಸಿಕೊಂಡು ಸರ್ಪ್ರೈಸ್ ನೀಡಿದ್ದರು. ಅದೇ ರೀತಿಯಲ್ಲಿ ನಟಿ ರಶ್ಮಿ ಪ್ರಭಾಕರ್ ಕೂಡ ಮೂಗು ಚುಚ್ಚಿಸಿಕೊಂಡಿದ್ದರು. ಇದೀಗ ಆಕೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಹೌದು.. ನಟಿ ರಶ್ಮಿ ಪ್ರಭಾಕರ್ ಅವರು ತಮ್ಮ ಪತಿಯ ಹೆಸರಿನ ಮೊದಲ ಅಕ್ಷರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ವೀಡಿಯೋವನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವಕ್ಕೆ ವಿವಾಹದ ವೀಡಿಯೋ ಶೇರ್ ಮಾಡಿ ಪತಿಗೆ ಧನ್ಯವಾದವನ್ನು ತಿಳಿಸಿದ್ದಾರೆ. 'N' ಅಕ್ಷರದ ಟ್ಯಾಟೂ ಹಾಕಿಸಿಕೊಂಡಿದ್ದು, ಸಂಭ್ರಮಿಸಿದ್ದಾರೆ. ಅಭಿಮಾನಿಗಳು ರಶ್ಮಿ ಹಾಗೂ ನಿಖಿಲ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಶುಭ ಹಾರೈಸುತ್ತಿದ್ದಾರೆ.


Click it and Unblock the Notifications











