ರವಿಚಂದ್ರನ್ ಹುಟ್ಟು ಹಬ್ಬಕ್ಕೆ ಡ್ರಾಮಾ ಜೂನಿಯರ್ಸ್ ತಂಡ ಸರ್ಪ್ರೈಸ್!
ಬಾಲನಟನಾಗಿ ಬಂದು ಹೀರೋ ಆಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಬೆಳೆದು ಸ್ಯಾಂಡಲ್‌ವುಡ್‌ನಲ್ಲಿ ಎಲ್ಲಾ ಏಳು ಬೀಳುಗಳನ್ನು, ಬದಲಾವಣೆಗಳನ್ನು ಕಂಡವರು ಕ್ರೇಜಿ ಸ್ಟಾರ್ ರವಿಚಂದ್ರನ್, ಅವರು ಇಂದು 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಕ್ರೇಜಿ ಸ್ಟಾರ್ ಅವರ ಬರ್ತ್ ಡೇ ಅನ್ನು ವಿಶೇಷವಾಗಿ ಆಚರಿಸಲಾಗಿದೆ.
ಸದ್ಯ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ತೀರ್ಪುಗಾರರಾಗಿ ಬರುತ್ತಿರುವ ರವಿಚಂದ್ರನ್ ಅವರು ಪುಟಾಣಿಗಳ ಜೊತೆಗೆ ಪ್ರತೀ ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಜೀ ಕನ್ನಡ ವಾಹಿನಿ ಸೇರಿ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ, ವಿಭಿನ್ನವಾಗಿ ಆಚರಿಸಿದೆ.
ರವಿಚಂದ್ರನ್ ಅವರ ಬಯೋಪಿಕ್ ರೀತಿ ಸ್ಕಿಟ್ ಒಂದನ್ನು ತಯಾರಿಸಿದ್ದು, ಪುಟಾಣಿಗಳು ರವಿ ಮಾಮನ ವೇಷದಲ್ಲಿ ಬಂದು ಮಿಂಚಿದ್ದಾರೆ. ಸಿನಿಮಾ ಇಂಡಸ್ಟ್ರಿ ಹಾಗೂ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಇದನ್ನು ನೋಡಿದವರೆಲ್ಲರೂ ಕಣ್ಣು ಒದ್ದೆ ಮಾಡಿಕೊಂಡಿದ್ದಾರೆ.

ಕ್ರೇಜಿ ಸ್ಟಾರ್‌ಗೆ ಸರ್ಪ್ರೈಸ್ ಕೊಟ್ಟ ಡ್ರಾಮಾ ಜೂನಿಯರ್ಸ್!
ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ ರವಿ ಸರ್ ಗಾಗಿ ಸರ್ಪ್ರೈಸ್ ಒಂದನ್ನು ನೀಡಿದ್ದರು. ಅದೇನೆಂದರೆ ನಟಿ ಖುಷ್ಬೂ ಅವರನ್ನು ಕರೆಸಿದ್ದರು. ರವಿಚಂದ್ರನ್ ಹಾಗೂ ಖುಷ್ಬೂ ಅವರದ್ದು ಬಹಳ ವರ್ಷಗಳ ಸ್ನೇಹ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಖುಷ್ಬೂ ಅವರು ಸಂತಸ ಹಂಚಿಕೊಂಡರು. ಅಲ್ಲದೇ, ತಮ್ಮ ತಾಯಿ ಆಸ್ಪತ್ರೆಯಲ್ಲಿದ್ದಾಗ, ಯಾರಿಗೂ ಗೊತ್ತಿಲ್ಲದೇ ಬಂದು ಹಣ ಕಟ್ಟಿ ಡಿಸ್ಚಾರ್ಜ್ ಮಾಡಿಸಿ ಮಾಡಿದ ಸಹಾಯವನ್ನು ಸ್ಮರಿಸಿಕೊಂಡರು.

ರವಿ ಮಾಮನ ವೇಷದಲ್ಲಿ ಪುಟಾಣಿಗಳು!
ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಪುಟಾಣಿಗಳು 'ಪ್ರೇಮಲೋಕ' ಚಿತ್ರದಿಂದ ಹಿಡಿದು 'ಏಕಾಂಗಿ', 'ಮಲ್ಲ' ಚಿತ್ರದವರೆಗೂ ರವಿಚಂದ್ರನ್ ಅವರ ಬದುಕಿನಲ್ಲಿ ನಡೆದ ಏಳು ಬೀಳುಗಳನ್ನು ಅಭಿನಯಿಸಿ ತೋರಿಸಿದರು. 'ಪ್ರೇಮಲೋಕ', 'ರಣಧೀರ', 'ಶಾಂತಿ ಕ್ರಾಂತಿ', 'ರಾಮಾಚಾರಿ' ಸೇರಿದಂತೆ ಎಲ್ಲಾ ಚಿತ್ರಗಳು ಹಿಟ್ ಆದವು. ಆದರೆ 'ಏಕಾಂಗಿ' ಚಿತ್ರ ಮಕಾಡೆ ಮಲಗಿತ್ತು. ಇದರಿಂದ ಚಿತ್ರರಂಗದಿಂದ ದೂರ ಉಳಿದ ರವಿಚಂದ್ರನ್ ಅವರು ಕೆಲ ತಿಂಗಳ ಬಳಿಕ 'ಮಲ್ಲ' ಚಿತ್ರದ ಮೂಲಕ ರಿಎಂಟ್ರಿ ಕೊಟ್ಟು ಸಕ್ಸಸ್ ಕಂಡರು. ಇದೆಲ್ಲವನ್ನೂ ತೋರಿಸಲಾಯ್ತು.

ಪುಟಾಣಿಗಳ ಜೊತೆ ಕೇಕ್ ಕತ್ತರಿಸಿದ ರವಿಚಂದ್ರನ್!
ಸ್ಕಿಟ್ ಮುಗಿದ ನಂತರ ಕಾರ್ಯಕ್ರಮದಲ್ಲಿದ್ದ ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು. ನಂತರ ವೇದಿಕೆ ಮೇಲೆ ಬಂದ ರವಿಚಂದ್ರನ್ ಅವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ರವಿಚಂದ್ರನ್ ಅವರಿಗಾಗಿ ಕೇಕ್ ತರಿಸಲಾಗಿತ್ತು. ಕ್ಯಾಂಡಲ್ ಗಳನ್ನು ಮಕ್ಕಳ ಜೊತೆ ಸೇರಿ ಉರುಬಿದ ರವಿಚಂದ್ರನ್ ಅವರು ಕೇಕ್ ಕಟ್ ಮಾಡಿ ಎಲ್ಲರಿಗೂ ತಿನ್ನಿಸಿದರು.

'ರವಿ ಬೋಪಣ್ಣ' ಟೀಸರ್ ರಿಲೀಸ್!
ರವಿಚಂದ್ರನ್ ಅವರ ಹುಟ್ಟುಹಬ್ಬ ಹಿನ್ನೆಲೆ ಇಂದು ಅವರಿಗೆ ಡಬಲ್ ಗಿಫ್ಟ್ ಸಿಕ್ಕಿದೆ. ಕ್ರೇಜಿಸ್ಟಾರ್ ಅವರ ಮುಂದಿನ ಚಿತ್ರ 'ರವಿ ಬೋಪಣ್ಣ' ಟೀಸರ್ ಇಂದು ರಿಲೀಸ್ ಆಗಿದೆ. ಇದನ್ನು ಸ್ವತಃ ರವಿಚಂದ್ರನ್ ಅವರೇ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಟೀಸರ್ ಮೂಲಕ ಚಿತ್ರ ಭಾರೀ ಕುತೂಹಲ ಮೂಡಿಸಿದೆ. ಈ ಚಿತ್ರ ಜುಲೈನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನು ರವಿಚಂದ್ರನ್ ಅವರ ಪುತ್ರ ವಿಕ್ರಮ್ ಅವರ ಚೊಚ್ಚಲ ಚಿತ್ರ 'ತ್ರಿವಿಕ್ರಮ' ಸಿನಿಮಾದ ಪ್ಲೀಸ್ ಮಮ್ಮಿ ಹಾಡು ಕೂಡ ಇಂದೇ ರಿಲೀಸ್ ಆಗಿದೆ. ಈ ಚಿತ್ರ ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.


Click it and Unblock the Notifications











