ಬೆಳ್ಳಿ ತೆರೆಯಲ್ಲೂ ಒಂದಾಗುತ್ತಿದೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿ
ಬೆಳ್ಳಿತೆರೆಯಲ್ಲಿ ಮಿಂಚಲು ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಹಲವರ ಅಚ್ಚು ಮೆಚ್ಚಿನ ಈ ಜೋಡಿ ಆಗಾಗ ಸುದ್ದಿಯಲ್ಲಿರುತ್ತಾರೆ. ನಿವೇದಿತಾ ಅವರಂತೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿವೇದಿತಾ ಹೆಚ್ಚು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪತಿ ಚಂದನ್ ಶೆಟ್ಟಿ ಜೊತೆಯೇ ಸಾಕಷ್ಟು ರೀಲ್ಸ್ ಮಾಡುತ್ತಿರುತ್ತಾರೆ. ಹಾಡು, ಡ್ಯಾನ್ಸ್, ಫೈಟ್ ಎಲ್ಲಾ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

ಬಿಗ್ ಬಾಸ್ ಮೂಲಕ ಒಂದಾಗಿದ್ದ ಜೋಡಿ
ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಕನ್ನಡ ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿಯಾಗಿ ಖ್ಯಾತಿ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ಇಬ್ಬರೂ ಪರಿಚಿತರಾದರು. ಇಬ್ಬರೂ ಅಲ್ಲೇ ಒಳ್ಳೆಯ ಸ್ನೇಹಿತರಾದರು. ನಿವೇದಿತಾಗಾಗಿ ಚಂದನ್ ಬಿಗ್ ಬಾಸ್ ಮನೆಯಲ್ಲಿ ಹಾಡೊಂದನ್ನು ಸಿದ್ಧಪಡಿಸಿ ಕಂಪೋಸ್ ಮಾಡಿದ್ದರು. ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಹೊರಬಂದ ಬಳಿಕ ಇವರಿಬ್ಬರ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬೆಳೆದು ಮನೆಯವರ ಸಮ್ಮುಖದಲ್ಲಿ ಮದುವೆ ಆಯ್ತು. 2020ರ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು.
ಮಿಸೆಸ್ ಇಂಡಿಯಾ ನಿವೇದಿತಾ
ಮದುವೆಯಾದ ಮೇಲೆ ಇಬ್ಬರೂ ಖುಷಿಯಾಗಿದ್ದು, ನಿವೇದಿತಾ ಕಿರುತೆರೆಯಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುತ್ತಾರೆ. ನಿವೇದಿತಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹತ್ತಾರು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದರಲ್ಲಿ ಹೇರ್ ಕೇರ್ ಬಗ್ಗೆ, ಡಯಟ್ ಬಗ್ಗೆ, ತಮ್ಮ ಇತರೆ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಕಳೆದ ವರ್ಷ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು ಬಂದಿದ್ದರು. ಈ ಖುಷಿಯನ್ನು ನಿವೇದಿತಾ ಗೌಡ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು.
ಜೋಡಿಯ ಮೊದಲ ಚಿತ್ರ
ಇದೇ ಮೊಟ್ಟ ಮೊದಲ ಬಾರಿಗೆ ದಂಪತಿ ಕನ್ನಡ ಸಿನಿಮಾವೊಂದರಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ನಾಯಕ ಹಾಗೂ ನಾಯಕಿಯಾಗಿ ಇಬ್ಬರೂ ನಟಿಸಲಿದ್ದು, ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಇದೊಂದು ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಆಗಿದೆ. ಪುನೀತ್ ಶ್ರೀನಿವಾಸ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾಕ್ಕೆ ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಸಂಯೋಜನೆ ಮಾಡುತ್ತಿದ್ದು, ಕರುಣಾಕರ್ ಅವರ ಛಾಯಾಗ್ರಹಣವಿದೆ.
'ಸೂತ್ರಧಾರಿ' ಚಿತ್ರ ಮುಂದಿನ ವರ್ಷ ತೆರೆಗೆ
ಚಿತ್ರದ ಶೂಟಿಂಗ್ ಮುಂದಿನ ತಿಂಗಳಿಂದ ಆರಂಭಿಸಲು ಚಿತ್ರ ತಂಡ ಪ್ಲಾನ್ ಮಾಡಿಕೊಂಡಿದೆ. ಇನ್ನು ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಕೆಲವೇ ದಿನಗಳಲ್ಲಿ ಈ ಚಿತ್ರದ ಶೀರ್ಷಿಕೆ ಹಾಗೂ ಮಹೂರ್ತದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ಚಂದನ್ ಶೆಟ್ಟಿ ಅವರು ನಾಯಕನಾಗಿ ನಟಿಸಿರುವ 'ಸೂತ್ರಧಾರಿ' ಚಿತ್ರ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ. 'ಸೂತ್ರಧಾರಿ' ಚಿತ್ರವನ್ನು ನಿರ್ದೇಶಕ ಕಿರಣ್ ಕುಮಾರ್ ನಿರ್ದೇಶಿಸಿದ್ದಾರೆ.


Click it and Unblock the Notifications











