ಸರಿಗಮಪ ಶೋನಿಂದ ಹಿಂದೆ ಸರಿದರೇ ಅನುಶ್ರೀ? ಅಸಲಿ ಕಾರಣ ಏನು?
ರಿಯಾಲಿಟಿ ಶೋ ನಿರೂಪಣೆ ಅಂತ ಬಂದರೆ, ಕನ್ನಡದಲ್ಲಿ ಕೆಲವೇ ಹೆಸರುಗಳು ಕಣ್ತುಂದೆ ಬರುತ್ತವೆ. ಅವುಗಳಲ್ಲಿ ಅನುಶ್ರೀ ಕೂಡ ಒಬ್ಬರು. ಕನ್ನಡ ಕಿರುತೆರೆಯ ಈ ಮಾತಿನ ಮಲ್ಲಿಯನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ನಿರೂಪಣೆ ಅಂತ ಬಂದರೆ ಮೊದಲು ನೆನಪಾಗುವುದೇ ಅನುಶ್ರೀ. ಇನ್ನು ಕೆಲವು ವರ್ಷಗಳಿಂದ ಜೀ ಕನ್ನಡದಲ್ಲಿ ಕೆಲವು ಶೋಗಳನ್ನು ಅನುಶ್ರೀಯೇ ನಡೆಸಿಕೊಡುತ್ತಾರೆ.
ಈಗ ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ಅನುಶ್ರೀ ಇಲ್ಲ ಅಂದರೆ, ಆ ಶೋದಲ್ಲಿ ಮನರಂಜನೆಯೇ ಇರುವುದಿಲ್ಲ ಅನ್ನೋ ಹಾಗಾಗಿದೆ. ಇನ್ನು ಹಲವು ಸರಿಗಮಪದ ಹಲವು ಸೀಸನ್‌ಗಳನ್ನು ಅನುಶ್ರೀಯೇ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಆ ಶೋಗೂ ಬಹು ದೊಡ್ಡ ಫ್ಯಾನ್ ಬೇಸ್ ಇದೆ. ಹಾಗೇ ಅನುಶ್ರೀಗೂ ಅಷ್ಟೇ ದೊಡ್ಡ ಅಭಿಮಾನಿ ಬಳಗವಿದೆ. ಅನುಶ್ರೀ ನಿರೂಪಣೆಯನ್ನು ಬಿಟ್ಟು ಕಿರಿತೆರೆ ವೀಕ್ಷಕರು 'ಸರಿಗಮಪ' ನೋಡುತ್ತಾರೆ ಅನ್ನೋ ಗೊಂದಲದಲ್ಲಿಯೇ ಇದ್ದಾರೆ.

ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ 'ಸರಿಗಮಪ' ಶೋನಿಂದ ಅನುಶ್ರೀ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಈ ಸುದ್ದಿಯ ಅಸಲಿಯತ್ತೇನು? ನಿಜಕ್ಕೂ ಅನುಶ್ರೀ ಸರಿಗಮಪ ಶೋನಿಂದ ಹೊರಬಂದರೇ? ಅನ್ನೋದನ್ನು ನೋಡುವುದಾದರೇ..
ನಿರೂಪಕಿ ಅನುಶ್ರೀ ಸರಿಗಮಪ ಶೋನಿಂದ ಹೊರ ಹೋಗಿದ್ದಾರೆ ಅನ್ನೋ ಸುದ್ದಿ ಹರಡುವುದಕ್ಕೆ ಒಂದು ಕಾರಣವಿದೆ. ಕಳೆದ ವೀಕೆಂಡ್‌ನಲ್ಲಿ ಅನುಶ್ರೀ ಸರಿಗಮಪ ಮ್ಯೂಸಿಕ್ ರಿಯಾಲಿಟಿ ಶೋ ಅನ್ನು ಅನುಶ್ರೀ ನಡೆಸಿಕೊಟ್ಟಿರಲಿಲ್ಲ. ಅವರ ಬದಲಾಗಿ ಮತ್ತೊಬ್ಬ ನಿರೂಪಕ ಮಾಸ್ಟರ್ ಆನಂದ್ ನಿರೂಪಣೆ ಮಾಡಿದ್ದರು. ಮಾಸ್ಟರ್ ಆನಂದ್ ಕೂಡ ತಮ್ಮ ನಿರೂಪಣೆಯಲ್ಲಿ ವೀಕ್ಷಕರನ್ನು ರಂಜಿಸುವುದರಲ್ಲಿ ಎಕ್ಸ್‌ಪರ್ಟ್. ಹೀಗಾಗಿ ಹೆಚ್ಚೇನೂ ವ್ಯತ್ಯಾಸ ಅನಿಸಲಿಲ್ಲ. ಆದರೂ ಕಿರುತೆರೆ ವೀಕ್ಷಕರಿಗೆ ಅನುಶ್ರೀ ನಿರೂಪಣೆ ಮಾಡದೇ ಇರುವುದು ಅಚ್ಚರಿ ಮೂಡಿಸಿತ್ತು.

ಈ ವೀಕೆಂಡ್‌ನಲ್ಲಿ ನಿರೂಪಕಿ ಅನುಶ್ರೀ ಬಾರದೆ ಇರುವುದನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹಬ್ಬಿದೆ. ಅನುಶ್ರೀ ಸರಿಗಮಪ ಶೋನಿಂದ ಹೊರ ಬಂದಿದ್ದಾರೆ ಅಂತ ವದಂತಿಗಳು ಹಬ್ಬುವುದಕ್ಕೆ ಶುರುವಾಗಿದ್ದವು. ಆದರೆ, ಕಳೆದ ವೀಕೆಂಡ್‌ನಲ್ಲಿ ಅನುಶ್ರೀ ಸರಿಗಮಪ ಶೋನಲ್ಲಿ ಕಾಣಿಸದೇ ಇರುವುದಕ್ಕೆ ಒಂದು ಕಾರಣವಿದೆ. ಆ ವಾರ ಅನುಶ್ರೀ ಬರ್ತ್‌ಡೇ ಇತ್ತು. ಈ ಕಾರಣಕ್ಕೆ ಅವರು ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಟ್ಟಿಲ್ಲ ಅಂತ ವರದಿಯಾಗಿದೆ.
ಇನ್ನೊಂದು ಕಡೆ ಅನುಶ್ರೀ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಮದುವೆ ತಯಾರಿಯಲ್ಲಿಯೂ ಬ್ಯುಸಿಯಾಗಿದ್ದಾರಂತೆ. ಇದೆಲ್ಲ ಕಾರಣದಿಂದ ಈ ವಾರ ಸರಿಗಮಪಗೆ ಗೈರಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ನಿರೂಪಕ ಮಾಸ್ಟರ್ ಆನಂದ್ ಅವರೇ ಮುಂದಿನ ವಾರ ಅನುಶ್ರೀ ಎಂದಿನಂತೆ ಆಂಕರಿಂಗ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಬ್ಬುತ್ತಿರುವ ಸುದ್ದಿ ಕೇವಲ ವದಂತಿಗಳು ಅಷ್ಟೇ ಎಂದು ಹೇಳಲಾಗುತ್ತಿದೆ.
ಅನುಶ್ರೀ ಸದ್ಯ ಕನ್ನಡದಲ್ಲಿ ಬ್ಯುಸಿ ಇರುವ ನಿರೂಪಕಿ. ಜೀ ಕನ್ನಡದ ಹಲವು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಅವರೇ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನಗಳನ್ನು ಮಾಡುತ್ತಿರುತ್ತಾರೆ. ಹಾಗೇ ಸಿನಿಮಾ ಪ್ರಮೋಷನಲ್ ಇವೆಂಟ್‌ಗಳಿಗೆ ಅನುಶ್ರೀ ನಿರೂಪಣೆಯನ್ನು ಮಾಡುತ್ತಾರೆ. ಇಷ್ಟೊಂದು ಬ್ಯುಸಿಯಾಗಿರುವ ನಟಿ ತನ್ನ ವೈಯಕ್ತಿಕ ಕಾರಣಗಳಿಗೆ ಸರಿಗಮಪ ನಿರೂಪಣೆಯಿಂದ ಬಿಡುವು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











