ಸಮನ್ವಿ ನಿಧನ: ಬಿಕ್ಕಿ-ಬಿಕ್ಕಿ ಅತ್ತ ನಟಿ ತಾರಾ
'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಸ್ಪರ್ಧಿ, ಬಾಲಕಿ ಸಮನ್ವಿ ನಿನ್ನೆ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ತಾಯಿ ಅಮೃತಾ ನಾಯ್ಡು ಜೊತೆಗೆ ಸಮನ್ವಿ ಭಾಗವಹಿಸುತ್ತಿದ್ದರು. ಈ ಶೋಗೆ ನಟಿ ತಾರಾ, ಸೃಜನ್ ಲೋಕೇಶ್ ಇನ್ನೂ ಕೆಲವರು ಜಡ್ಜ್‌ಗಳಾಗಿದ್ದರು.
ಸಮನ್ವಿ ನಿಧನದ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ನಟಿ ತಾರಾ, ತೀವ್ರ ದುಃಖತಪ್ತರಾಗಿದ್ದಾರೆ. ''ನಾನು ಬೆಂಗಳೂರಿನಲ್ಲಿರಲಿಲ್ಲ. ಸಂಜೆ ನಂತರ ಒಮ್ಮೆಲೆ ಹಲವರು ಕರೆ ಮಾಡಲು ಆರಂಭಿಸಿದರು. ಕರೆ ಮಾಡಿದವರು ನನಗೆ ಒಮ್ಮೆಲೆ ಸುದ್ದಿ ತಿಳಿಸಲಿಲ್ಲ. ನನ್ನನ್ನು ಈ ಕೆಟ್ಟ ಸುದ್ದಿಗೆ ಸಜ್ಜುಗೊಳಿಸಲು ಯತ್ನಿಸಿದರು ಆಗಲೇ ನನಗೆ ಆತಂಕ ಶುರುವಾಗಿತ್ತು'' ಎಂದು ಹೇಳಿದ್ದಾರೆ ತಾರಾ.

''ಸಮನ್ವಿ ಇನಿಲ್ಲ ಎಂದರು. ಅಪಘಾತದಲ್ಲಿ ಸಮನ್ವಿ ಹೋಗಿಬಿಟ್ಟಳು ಎಂದರು. ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಏಳು-ಎಂಟು ವಾರ ಆ ಬಾಲಕಿ ನಮ್ಮ ಜೊತೆ ಇದ್ದಳು. 'ನಮ್ಮಮ್ಮ ಸೂಪರ್ ಸ್ಟಾರ್' ಶೋನಲ್ಲಿ 12 ತಾಯಂದಿರು, 12 ಮಕ್ಕಳು ಇದ್ದರು. ನನಗೆ ಎಲ್ಲ ಮಕ್ಕಳೊಂದಿಗೂ ಆಪ್ತತೆ ಪ್ರಾರಂಭವಾಗಿಬಿಟ್ಟಿತ್ತು. ಆ ಶೋನ ಎಲ್ಲರೂ ನನಗೆ ಕುಟುಂಬ ಸದಸ್ಯರಿದ್ದಂತೆ. ಈಗ ಸಮನ್ವಿ ಹೋಗಿರುವುದು ನಮ್ಮ ಕುಟುಂಬ ಸದಸ್ಯೆ ಹೋದಂತೆ ಆಗಿದೆ'' ಎಂದು ಅತ್ತರು ತಾರಾ.
''ಕಳೆದ ಎಪಿಸೋಡ್‌ನಲ್ಲಷ್ಟೆ ಅಮೃತಾ ನಾಯ್ಡು ಮತ್ತು ಸಮನ್ವಿ ಎಲಿಮಿನೇಟ್ ಆಗಿದ್ದರು. ಅಮೃತಾ ನಾಯ್ಡು ಗರ್ಭಿಣಿ ಆಗಿದ್ದರು. ಅವರಿಂದ ಡ್ಯಾನ್ಸ್ ಎಲ್ಲ ಮಾಡಿಸುವುದು ಸರಿಯಲ್ಲ ಎಂಬುದನ್ನು ಮನಸಿನಲ್ಲಿಟ್ಟುಕೊಂಡು ನಾವು ಈ ನಿರ್ಣಯ ತೆಗೆದುಕೊಂಡೆವು'' ಎಂದು ಎಲಿನಿಮೇಟ್ ಆಗಿದ್ದಕ್ಕೆ ಕಾರಣ ಬಿಚ್ಚಿಟ್ಟರು ತಾರಾ.
''ಶೋನಿಂದ ಎಲಿಮಿನೇಟ್ ಆದಮೇಲೆ ನನಗೆ ಕರೆ ಮಾಡಿದ್ದಳು. ಅಮೃತಾ ಕರೆ ಮಾಡಿ, ಸಮನ್ವಿ ನಿಮ್ಮನ್ನೆಲ್ಲ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಎಂದಿದ್ದಳು. ನಾನು ಆಕೆಯನ್ನು ಸೆಟ್‌ಗೆ ಕರೆದುಕೊಂಡು ಬರುವಂತೆ ಹೇಳಿದ್ದೆ. ಇಲ್ಲ ನಾನು ಎಲಿಮಿನೇಟ್ ಆಗಿಬಿಟ್ಟಿದ್ದೇನೆ, ಈಗ ಶೋಗೆ ಬರುವುದು ಸರಿಯಲ್ಲ ಎಂದು ಅಮೃತಾ ಹೇಳಿದಳು. ಸಮನ್ವಿ ಹಾಗೂ ಅಮೃತಾ ಇಲ್ಲದೆ ನಾವು ಕೇವಲ ಒಂದು ಎಪಿಸೋಡ್ ಅಷ್ಟನ್ನೇ ಚಿತ್ರೀಕರಣ ಮಾಡಿದ್ದೇವೆ'' ಎಂದು ಮಾಹಿತಿ ನೀಡಿದರು ತಾರಾ.
''ನಾನೂ, ಸೃಜನ್ ಲೋಕೇಶ್, ಅನು ಪ್ರಭಾಕರ್ ಜಡ್ಜ್ ಆಗಿದ್ದೇವೆ. ಆದರೆ ನಮ್ಮ ಮೂರೂ ಜನಕ್ಕೆ ಜಡ್ಜ್ ಮಾಡುವುದು ಬಹಳ ಕಷ್ಟ. ಏಕೆಂದರೆ ಮಕ್ಕಳನ್ನು ಹೇಗೆ ಜಡ್ಜ್ ಮಾಡುವುದು. ಆದರೂ ನಾವು ತಾಯಂದಿರ ಪ್ರದರ್ಶನವನ್ನು ಜಡ್ಜ್ ಮಾಡಿ ಅದರ ಆಧಾರದ ಮೇಲೆ ಮಾತನಾಡುತ್ತೀವಿ. ಈ ಶೋ ಅನ್ನು ಡಿಸೈನ್ ಮಾಡಿರುವುದೇ ಹಾಗೆ. ಹಾಗಾಗಿ ಮಕ್ಕಳು ನಮ್ಮೊಟ್ಟಿಗೆ ಬಹಳ ಆತ್ಮೀಯರಾಗಿರುತ್ತಾರೆ'' ಎಂದು ವಿವರಿಸಿದರು ತಾರಾ.
''ಸಮನ್ವಿ ಅಂತೂ ಬಹಳ ಪ್ರತಿಭಾವಂತ ಮಗು. ಆಕೆ ನಡೆಯುವುದು, ನಿಲ್ಲುವುದು, ಮಾತನಾಡುವುದು ಎಲ್ಲವೂ ಒಂದು ರೀತಿ ವಿಭಿನ್ನ'' ಎಂದ ತಾರಾ, ''ಅದೇನೋ ಗೊತ್ತಿಲ್ಲ ಎಲ್ಲ ಮಕ್ಕಳು ನನ್ನೊಂದಿಗೆ ಬಹಳ ಆತ್ಮೀಯವಾಗಿರುತ್ತಿದ್ದರು. ಸೃಜನ್ ಲೋಕೇಶ್ ಸದಾ ರೇಗಿಸುತ್ತಿರುತ್ತಾನೆ. ಎಲ್ಲ ಮಕ್ಕಳು ನಿಮ್ಮ ಮನೆಗೆ ಬಂದು ಬಿಡುತ್ತಾವೆ, ನೀನೆ ಅವರಿಗೆ ತಾಯಿ ಆಗಿಬಿಟ್ಟಿದ್ದೀಯ ಎನ್ನುತ್ತಿರುತ್ತಾನೆ'' ಎಂದು ಬಿಕ್ಕಳಿಸಿ ಅತ್ತರು ತಾರಾ.
ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಬಳಿ ಸ್ಕೂಟರ್‌ನಲ್ಲಿ ಅಮೃತಾ ಮತ್ತು ಸಮನ್ವಿ ಒಟ್ಟಿಗೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಬೈಕ್‌ಗೆ ಗುದ್ದಿದ ಪರಿಣಾಮ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಮೃತಾ ನಾಯ್ಡುಗೂ ಗಾಯಗಳಾಗಿವೆ. ಟಿಪ್ಪರ್ ಲಾರಿ ಡ್ರೈವರ್ ಅನ್ನು ಕೋಣನಕುಂಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


Click it and Unblock the Notifications











