ಅಮೃತಧಾರೆ ದಿಯಾಗೆ ಕೂಡಿ ಬಂತು ಕಂಕಣ ಭಾಗ್ಯ ; ಶ್ವೇತಾ ಗೌಡ ಹೃದಯ ಗೆದ್ದ ಹುಡುಗ ಯಾರು?
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಕೇವಲ ಒಂದೆರಡು ದಿನಗಳ ಸಂಭ್ರಮ ಅಲ್ಲ. ಬದಲಿಗೆ ವಾರಾನುವಾರಗಳ ಕಾಲ ನಡೆಯುವ ಹಬ್ಬ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಪಾಲಿಗೆ ಮದುವೆ ತಮ್ಮ ನಿಜ ಜೀವನದ ಅದ್ದೂರಿ ಸಿನಿಮಾದಂತೆಯೇ. ಮದುವೆಗೆ ಇನ್ನೂ ತಿಂಗಳಿರುವಾಗಲೇ ಇವರ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿರುತ್ತೆ.
ಸದ್ಯ ಇಂತಹದ್ದೇ ಒಂದು ಸಂಭ್ರಮದ ಅಲೆಯಲ್ಲಿ ''ಅಮೃತಧಾರೆ'' ಧಾರಾವಾಹಿಯ ದಿಯಾ ಅಲಿಯಾಸ್ ಶ್ವೇತಾ ಗೌಡ ತೇಲುತ್ತಿದ್ದು, ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ತಮ್ಮ ಪ್ರಿ-ವೆಡ್ಡಿಂಗ್ ಫೋಟೋಶೂಟ್ ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ.

ಹೌದು, ಶ್ವೇತಾ ಗೌಡ ಬೆಂಗಳೂರಿನ ಚೆಲುವೆ. ಕೇವಲ ನಟಿ ಮಾತ್ರ ಅಲ್ಲ ಮಾಡೆಲ್ ಕೂಡ ಹೌದು. ಬೆಂಗಳೂರು ಯುನಿವರ್ಸಿಟಿಯಲ್ಲಿ ಎಂಕಾಂ ಪದವಿಯನ್ನು ಪಡೆದಿರುವ ಶ್ವೇತಾ ಗೌಡ ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ರ್‍ಯಾಂಪ್ ಮೇಲೆ ಬೆಕ್ಕಿನ ನಡಿಗೆಯನ್ನು ಕೂಡ ಮಾಡಿದ್ದಾರೆ.
''ಪುಣ್ಯವತಿ'' ಮತ್ತು ''ರಾಧಿಕಾ'' ಇವರ ಧಾರಾವಾಹಿಗಳು. ಆದರೆ ಜನಪ್ರಿಯತೆ ಇವರಿಗೆ ಸಿಕ್ಕಿದ್ದು ''ಅಮೃತಧಾರೆ'' ಧಾರಾವಾಹಿಯ ಮೂಲಕ ಕೇಡಿ ಜೆಡಿಯ ಪತ್ನಿ ದಿಯಾ ಆಗಿ ಮನ ಮತ್ತು ಮನೆಗಳನ್ನು ಶ್ವೇತಾ ಗೌಡ ಈ ಧಾರಾವಾಹಿಯ ಮೂಲಕ ತಲುಪಿದ್ದಾರೆ.
ಇಂಥಾ ಶ್ವೇತಾ ಗೌಡ ಸದ್ಯ ಯದುವೀರ್ ಸುನೀಲ್ ಚಂದ್ರ ಅವರ ಜೊತೆ ಮದುವೆಯಾಗಲು ಅಣಿಯಾಗಿದ್ದಾರೆ. ಇದೇ ಮೇ 14ರಂದು ಬೆಂಗಳೂರಿನಲ್ಲಿ ಇವರ ಅದ್ಧೂರಿ ಮದುವೆ ನಡೆಯಲಿದೆ ಎನ್ನುವ ಸುದ್ದಿ ಇದೆ. ಆದರೆ.. ಮದುವೆಯ ದಿನಾಂಕವನ್ನು ಶ್ವೇತಾ ಗೌಡ ಅಧಿಕೃತವಾಗಿ ಹಂಚಿಕೊಂಡಿಲ್ಲ.
ಇನ್ನು ಶ್ವೇತಾ ಕೈ ಹಿಡಿಯುತ್ತಿರುವ ಯದುವೀರ್ ಸುನೀಲ್ ಚಂದ್ರ ಉದ್ಯಮಿ ಎನ್ನುವ ಮಾತು ಕೇಳಿ ಬರುತ್ತಿದೆ. ಬಣ್ಣದ ಲೋಕದಿಂದ ದೂರ ಇರುವ ಯದುವೀರ್ ಸುನೀಲ್ ಚಂದ್ರ ಮತ್ತು ಶ್ವೇತಾ ಗೌಡ ಅವರ ಪರಿಚಯ ಆಗಿದ್ಹೇಗೆ..? ಇಬ್ಬರ ನಡುವೆ ಪ್ರೇಮಾಂಕುರವಾಗಿದ್ಹೇಗೆ..? ಇದು ಅರೆಂಜ್ ಮ್ಯಾರೇಜಾ..? ಲವ್ ಮ್ಯಾರೇಜಾ..? ಅಥವಾ ಲವ್ ಕಂ ಅರೆಂಜ್ ಮ್ಯಾರೇಜಾ..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಖುದ್ದು ಶ್ವೇತಾ ಗೌಡ ಅವರೇ ಉತ್ತರ ಕೊಡಬೇಕಿದೆ.

ಇನ್ನು ಬೆಳ್ಳಿತೆರೆ ಇರಲಿ, ಕಿರುತೆರೆ ಇರಲಿ, ಸಾಮಾನ್ಯವಾಗಿ ಮದುವೆಯಾದ ನಂತರ ಹಲವರು ತಮ್ಮ ವೃತ್ತಿ ಬದುಕಿಗೆ ಅಲ್ಪವಿರಾಮ ಹಾಕುತ್ತಾರೆ. ಇನ್ನೂ ಕೆಲವರು ಪೂರ್ಣ ವಿರಾಮ ಹಾಕಿ ಮನೆ-ಗಂಡ-ಮಕ್ಕಳು-ಸಂಸಾರ ಎಂದು ಬ್ಯುಸಿಯಾಗುತ್ತಾರಾ. ಈ ಹಿನ್ನೆಲೆ ಮದುವೆಯ ನಂತರ ಶ್ವೇತಾ ಗೌಡ ಅಭಿನಯಿಸುತ್ತಾರಾ..? ಇಲ್ಲವಾ..? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.
ಸದ್ಯ ಹಲವರು ಮುದ್ದಾದ ಜೋಡಿ, ಸದಾ ಕಾಲ ಹೀಗೆ ಖುಷಿಯಾಗಿರಿ ಎಂದು ನವ ಜೋಡಿಗೆ ಶುಭ ಕೋರುತ್ತಿದ್ದಾರೆ. ಇನ್ನು ''ಅಮೃತಧಾರೆ'' ವಿಚಾರಕ್ಕೆ ಬಂದರೆ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದಂತೆ ಇದ್ದು ದಿಯಾ ಮನೆಯಲ್ಲಿ ಇದ್ದ ಒಡವೆ ಬಂಗಾರ ಎಲ್ಲವನ್ನೂ ಕದ್ದುಕೊಂಡು ದಿಯಾ ಪರಾರಿಯಾಗಿದ್ದಾಳೆ. ಧಾರಾವಾಹಿಯಲ್ಲಿ ಒಡವೆ ಕದ್ದ ದಿಯಾ ಅಲಿಯಾಸ್ ಶ್ವೇತಾ ನಿಜ ಜೀವನದಲ್ಲಿ ಈಗ ಯುದವೀರ್ ಸುನೀಲ್ ಚಂದ್ರ ಅವರ ಹೃದಯ ಕದ್ದಿದ್ಧಾರೆ.
ಶ್ವೇತಾ ಅವರ ಮದುವೆಯ ಹಿನ್ನೆಲೆ ಇನ್ನೂ ಕೆಲ ದಿನ ''ಅಮೃತಧಾರೆ'' ಧಾರಾವಾಹಿಯಲ್ಲಿ ದಿಯಾ ಕಾಣಿಸುವುದು ಅಸಾಧ್ಯ. ಸದ್ಯ ಎಲ್ಲವನ್ನು ಕಳೆದುಕೊಂಡು ಜೈದೇವ್ ಕಂಗಾಲಾಗಿದ್ದು, ಶಕುಂತಲಾಗೆ ಗೌತಮ್ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾನೆ.
ಇನ್ನುಳಿದಂತೆ ಸದ್ಯ ಹಲವರು ಶ್ವೇತಾ ಗೌಡಗೆ ಶುಭಾಶಯ ಕೋರುತ್ತಿದ್ದು, ತಮ್ಮ ಮದುವೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಶ್ವೇತಾ ಗೌಡ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications