ಬಿಗ್ ಸರ್‌ಪ್ರೈಸ್; 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್‌ನಲ್ಲಿ ರಿಷಬ್ ಶೆಟ್ಟಿ
'ಕಾಂತಾರ- 1' ಸಿನಿಮಾ ಗೆಲುವಿನ ಆರ್ಭಟ ಮುಂದುವರೆದಿದೆ. ಟ್ರೈಲರ್ ಬಿಡುಗಡೆ ಮಾಡಿದ ದಿನದಿಂದಲೂ ರಿಷಬ್ ಶೆಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು, ಮುಂಬೈ, ಹೈದರಾಬಾದ್, ಕೊಚ್ಚಿ, ದೆಹಲಿ ಹೀಗೆ ದೇಶದ ಮೂಲೆ ಮೂಲೆಗೆ ಸುತ್ತಾಡಿ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ ಅಮಿತಾಬ್ ಬಚ್ಚನ್ ಜೊತೆ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು. ಇದೀಗ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ದರ್ಶನ ಕೊಟ್ಟಿದ್ದಾರೆ. ಈಗಾಗಲೇ 5 ಸೀಸನ್‌ಗಳಲ್ಲಿ ಈ ಶೋ ಯಶಸ್ವಿಯಾಗಿದೆ. ಸಾಕಷ್ಟು ಸಾಧಕರನ್ನು ನಟ ರಮೇಶ್ ಅರವಿಂದ್ ಸಂದರ್ಶನ ಮಾಡಿದ್ದಾರೆ. ಸಾಧಕರ ಸಾಧನೆಯ ಜೀವನದ ಜೊತೆಗೆ ವೈಯಕ್ತಿಕ ವಿಚಾರಗಳು ಅನಾವರಣ ಆಗಿದೆ. ಅವರ ನೋವು, ನಲಿವು ಎಲ್ಲವೂ ವೀಕೆಂಡ್ ಶೋನಲ್ಲಿ ವೀಕ್ಷಕರಿಗೆ ಹತ್ತಿರವಾಗಿದೆ.

ಹೊಸದಾಗಿ ವೀಕೆಂಡ್ ವಿತ್ ರಮೇಶ್ ಸೀಸನ್ ಶುರುವಾಗಿಲ್ಲ. ಆದರೆ ರಿಷಬ್ ಶೆಟ್ಟಿ ಮಾತ್ರ ಸಾಧಕರ ಸೀಟ್‌ನಲ್ಲಿ ಕೂತಿದ್ದಾರೆ. ರಮೇಶ್ ಅರವಿಂದ್ ಸಂದರ್ಶನ ಮಾಡಿದ್ದಾರೆ. ರಿಷಬ್ ಶೆಟ್ಟಿ ನೋವು ನಲಿವಿನ ಕಥೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಜೀ ಕುಟುಂಬ ಅವಾರ್ಡ್ಸ್ - 2025ರ ಸಮಾರಂಭದಲ್ಲಿ ಇದೆಲ್ಲ ಸಾಧ್ಯವಾಗಿದೆ.
ಪ್ರತಿವರ್ಷ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತದೆ. ಈ ಬಾರಿ ಕೂಡ ಸಾಕಷ್ಟು ಸರ್‌ಪ್ರೈಸ್‌ಗಳೊಂದಿಗೆ ಕಾರ್ಯಕ್ರಮ ಚಿತ್ರೀಕರಣವಾಗಿದೆ. 'ಕಾಂತಾರ- 1' ಚಿತ್ರತಂಡ ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದೆ. ಇದೇ ವೇಳೆ ವೀಕೆಂಡ್ ರಮೇಶ್ ಶೋ ರೀತಿಯಲ್ಲಿ ಸಣ್ಣ ಸೆಗ್ಮೆಂಟ್ ಸೆರೆಹಿಡಿಯಲಾಗಿದೆ. ಸೇಮ್ ಟು ಸೇಮ್ ಅದೇ ರೀತಿ ಸೆಟಪ್‌ನಲ್ಲಿ ಸಾಧಕರ ಸೀಟ್‌ನಲ್ಲಿ ರಿಷಬ್ ಶೆಟ್ಟಿ ಕೂತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ.
ಈ ಫೋಟೊಗಳನ್ನು ನೋಡಿ ಅರೇ, 'ವೀಕೆಂಡ್ ವಿತ್ ರಮೇಶ್' ಶೋ ಹೊಸ ಸೀಸನ್ ಬರ್ತಿದ್ಯಾ? ಎಂದು ಕೆಲವರು ಅಚ್ಚರಿಗೊಂಡಿದ್ದಾರೆ. ಇನ್ನು 'ಕಾಂತಾರ- 1' ಸಿನಿಮಾ ದಾಖಲೆಯ ಪ್ರದರ್ಶನ ಮುಂದುವರೆಸಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ.
ರಜನಿಕಾಂತ್ ನಟನೆಯ 'ಕೂಲಿ' ಸೇರಿದಂತೆ ಹಲವು ಸಿನಿಮಾಗಳ ದಾಖಲೆಯನ್ನು ರಿಷಬ್ ಶೆಟ್ಟಿ ಸಿನಿಮಾ ಮುರಿದಿದೆ. ಬಾಲಿವುಡ್ 'ಸಯ್ಯಾರ' ಸಿನಿಮಾ ದಾಖಲೆ ಹಿಂದಿಕ್ಕಿದ್ದು ಇದೀಗ 'ಛಾವ' ಸಿನಿಮಾ ಬಾಕ್ಸಾಫೀಸ್ ದಾಖಲೆ ಮೇಲೆ ಕಣ್ಣಿಟ್ಟಿದೆ. ಶೀಘ್ರದಲ್ಲೇ ವರ್ಷದ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಸುಳಿವು ಸಿಕ್ತಿದೆ.
ಬರೀ ಬುಕ್ ಮೈ ಶೋನಲ್ಲಿ 'ಕಾಂತಾರ- 1' ಚಿತ್ರದ 1 ಕೋಟಿಗೂ ಹೆಚ್ಚು ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. ಎಲ್ಲೆಲ್ಲೂ ರಿಷಬ್ ಶೆಟ್ಟಿ ಸಿನಿಮಾ ಫೀವರ್ ಜೋರಾಗಿದೆ. ಪರಭಾಷಿಕರು ದೊಡ್ಡಮಟ್ಟದಲ್ಲಿ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಮೊದಲ ವಾರ 509 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿತ್ತು. ಸೆಕೆಂಡ್ ವೀಕೆಂಡ್ ಬಳಿಕ ಅದು 600 ಕೋಟಿ ರೂ. ಗಡಿ ದಾಟಿದೆ.
ಅಚ್ಚರಿ ಎಂದರೆ 2ನೇ ಶನಿವಾರ ಹಾಗೂ ಭಾನುವಾರ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಈ ವೀಕೆಂಡ್ ವೇಳೆಗೆ ದೀಪಾವಳಿ ಸಂಭ್ರಮ ಶುರುವಾಗಲಿದೆ. ಅಲ್ಲಿಯವರೆಗೆ 'ಕಾಂತಾರ- 1' ದರ್ಬಾರ್ ಹೀಗೆ ಮುಂದುವರೆದರೆ ಸಿನಿಮಾ ಇನ್ನು 200 ಕೋಟಿ ರೂ. ಗಳಿಕೆ ಕಾಣಬಹುದು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಬಗ್ಗೆ ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್ ಮೆಚ್ಚಿಕೊಂಡಾಡುತ್ತಿದ್ದಾರೆ.


Click it and Unblock the Notifications











