ಕರಾವಳಿ ಭಾಗದ ಪ್ರೇಮಕಥೆ 'ಮಾರ್ನಮಿ'ಯಲ್ಲಿ ರಿತ್ವಿಕ್ ಮಠದ್; ಈ ನಟ ಯಾರು ಗೊತ್ತೇ?
ರಿತ್ವಿಕ್ ಮಠದ್.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಿನಗಾಗಿ'ಯಲ್ಲಿ ನಾಯಕ ಜೀವ ಪಾತ್ರದಲ್ಲಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ರಿತ್ವಿಕ್ ಮಠದ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ರಿತ್ವಿಕ್ ಮಠದ್ ಎರಡೆರಡು ಸಿಹಿ ಸುದ್ದಿಗಳನ್ನು ನೀಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಅನುಬಂಧ ಅವಾರ್ಡ್ಸ್' ನಡೆಯುತ್ತಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಈ ಅನುಬಂಧ ಅವಾರ್ಡ್ಸ್‌ನಲ್ಲಿ 'ಮನೆ ಮೆಚ್ಚಿದ ಅಪ್ಪ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ರಿತ್ವಿಕ್ ಮಠದ್. ಕಾಕತಾಳೀಯವೆಂದರೆ ಇದೇ ಸಮಯದಲ್ಲಿ ರಿತ್ವಿಕ್ ಮಠದ್ ಅವರ ಹೊಸ ಸಿನಿಮಾದ ಅನೌನ್ಸ್ ಕೂಡಾ ಆಗಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರೀತಮ್ ಆರ್ ಶೆಟ್ಟಿ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ರಿತಿಶ್ ಶೆಟ್ಟಿ ಅವರ ನಿರ್ದೇಶನದ ಹೊಚ್ಚ ಹೊಸ ಸಿನಿಮಾ 'ಮಾರ್ನಮಿ'ಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ರಿತ್ವಿಕ್ ಮಠದ್. ಅಂದ ಹಾಗೇ ರಿತ್ವಿಕ್ ಅವರಿಗೆ ನಾಯಕಿಯಾಗಿ ಚೈತ್ರಾ ಜೆ ಆಚಾರ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಸಕತ್ ಸದ್ದು ಮಾಡುತ್ತಿದೆ.
"ಮಾರ್ನಮಿ ಸಿನಿಮಾದ ಬಗ್ಗೆ ನನಗೆ ತುಂಬಾ ಖುಷಿಯಿದೆ. ಕರಾವಳಿ ಭಾಗದಲ್ಲಿ ನಡೆಯುವ ಒಂದು ಸುಂದರ ಪ್ರೇಮಕಥೆಯನ್ನು ನಾವು ಸಿನಿಮಾದ ಮೂಲಕ ನಿಮ್ಮ ಮುಂದೆ ಹೇಳಹೊರಟಿದ್ದೇವೆ. ಮಾರ್ನಮಿ ಎಂದರೆ ದಸರಾ ಹಬ್ಬ. ನಿರ್ದೇಶಕ ರಿತಿಶ್ ಶೆಟ್ಟಿ, ನಿರ್ಮಾಪಕ ನಿಶಾಂತ್ ಅವರಿಗೆ ಧನ್ಯವಾದಗಳು" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ ರಿತ್ವಿಕ್.

ಇದಕ್ಕಿಂತಲೂ ಮೊದಲು 'ಕಲ್ಲು ಸಕ್ರೆ' ಎನ್ನುವ ಸಿನಿಮಾವನ್ನು ಒಪ್ಪಿಕೊಂಡಿದ್ದರು ರಿತ್ವಿಕ್ ಮಠದ್. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕನ್ನಡ ಸೊಬಗಿನ ಭಾಷೆಯುಳ್ಳ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮು ಆಗಿ ಅಭಿನಯಿಸಿದ್ದರು ರಿತ್ವಿಕ್ ಮಠದ್. ಏಳ್ನೂರಕ್ಕೂ ಹೆಚ್ಚು ಸಂಚಿಕೆಗಳು, ಎರಡು ವರ್ಷಗಳ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿ ಕಳೆದ ವರ್ಷ ಮುಕ್ತಾಯಗೊಂಡಿತ್ತು. ತದ ನಂತರ 'ಕಲ್ಲು ಸಕ್ರೆ' ಸಿನಿಮಾದಲ್ಲಿ ಅವಕಾಶ ಪಡೆದ ಇವರು 'ನಿನಗಾಗಿ' ಧಾರಾವಾಹಿಯ ಜೀವ ಆಗಿ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದರು.
ಅಸಲಿಗೆ ರಿತ್ವಿಕ್ ಅವರ ನಟನಾ ಪಯಣ ಶುರುವಾಗಿದ್ದು ಕಿರುತೆರೆಯಿಂದ. ಅನಿಮೇಶನ್‌ನಲ್ಲಿ ಬಿಎಸ್‌ಸಿ ಪದವಿ ಪಡೆದರುವ ರಿತ್ವಿಕ್ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ ನಟನೆಯ ಸಲುವಾಗಿ ಕೆಲಸಕ್ಕೆ ವಿದಾಯ ಹೇಳಿದ ರಿತ್ವಿಕ್ 'ಅನುರೂಪ' ಧಾರಾವಾಹಿಯ ಶ್ಯಾಮ್ ಆಗಿ ಕಿರುತೆರೆಗೆ ಕಾಲಿಟ್ಟರು. ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ ಇವರು ಮುಂದೆ ಹಾರಿದ್ದು ಹಿರಿತೆರೆಗೆ.
'ಜಸ್ಟ್ ಲವ್' ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ರಿತ್ವಿಕ್ ಮಠದ್ ಮುಂದೆ 'ಯುವ ಸಾಮ್ರಾಟ್', 'ಶಂಭೂ ಮಹಾದೇವ', 'ಗಿಫ್ಟ್ ಬಾಕ್ಸ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ತದ ನಂತರ "ಶಿವರಾಮು" ಆಗಿ ಕಿರುತೆರೆಯತ್ತ ಮುಖ ಮಾಡಿದ ರಿತ್ವಿಕ್ ಎರಡು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದರು.


Click it and Unblock the Notifications











