»   » ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ

ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ

By: ಉದಯರವಿ
Subscribe to Filmibeat Kannada

ಈ ವಾರ ಜೀ ಕನ್ನಡ ವಾಹಿನಿಯ ವೀಕ್ಷಕ ವರ್ಗಕ್ಕೆ ಒಂದು ಅಚ್ಚರಿಯ ಸಂಗತಿ ಕಾದಿತ್ತು. ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ವಾರದ ಸೆಲೆಬ್ರಿಟಿಯಾಗಿ ಭಾಗವಹಿಸಿ ತಮ್ಮ ಬದುಕಿನ ಬುತ್ತಿಯನ್ನು ತೆರೆದಿಟ್ಟು ಸಿಹಿಕಹಿ ಸಂಗತಿಗಳನ್ನು ಎಲ್ಲರೊಂದಿಗೂ ಹಂಚಿಕೊಂಡರು.

ಸಾಮಾನ್ಯವಾಗಿ ಸ್ಟಾರ್ ಎಂದರೆ ಅಭಿಮಾನಿಗಳ ನಿರೀಕ್ಷೆಗಳು, ಕಲ್ಪನೆಗಳು, ಕನಸುಗಳು ಬೆಟ್ಟದಷ್ಟಿರುತ್ತವೆ. ಆದರೆ ಯಶ್ ಅವರು ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು, ಬಲು ಎತ್ತರಕ್ಕೆ ಏರಿದ ಪರಿ ಎಂಥಹವರನ್ನೂ ಚಕಿಗೊಳಿಸುತ್ತದೆ. [ಜೀ ಕನ್ನಡ ಟಿವಿ ಶೋನಲ್ಲಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ]

ಸಾಮಾನ್ಯವಾಗಿ ಈ ಕಾರ್ಯಕ್ರಮಕ್ಕೆ ತಮ್ಮ ವೃತ್ತಿ ಬದುಕಿನ ಯಶಸ್ಸಿನ ಉತ್ತುಂಗದಲ್ಲಿರುವ ಮಧ್ಯವಯಸ್ಸಿನ ವಯೋಮಾನದ ಸೆಲೆಬ್ರಿಟಿಗಳು ಬರುತ್ತಿದ್ದರು. ಹಾಗಾಗಿ ಈ ಬಾರಿಯೂ ಅದೇ ತರಹದ ನಿರೀಕ್ಷೆಗಳಿದ್ದವು. ಆದರೆ ಈ ಶನಿವಾರ ಮತ್ತು ಭಾನುವಾರ (ಆ.23) ರಾಕಿಂಗ್ ಸ್ಟಾರ್ ಯಶ್ (28) ಬಂದದ್ದು ಕೆಲವರನ್ನು ಚಕಿತಗೊಳಿಸಿತು.

ಯಶ್ ಗಾಥೆ ಕೇಳಿ ಎಲ್ಲರ ಕಣ್ಣು ಮಂಜಾಯಿತು

ಈ ಕಾರ್ಯಕ್ರಮದಲ್ಲಿ ನಿರೂಪಕ ರಮೇಶ್ ಅರವಿಂದ್ ಅವರು ಯಶ್ ಅವರು ಸಾಗಿಬಂದ ಹಾದಿಯನ್ನು ತೆರೆದಿಡುತ್ತಿದ್ದಂತೆ ಎಲ್ಲರ ಕಣ್ಣುಗಳೂ ಒಮ್ಮೆ ಮಂಜಾದವು. ಯಶ್ ಬದುಕಿನ ಚಿತ್ರಣ ನಿಜಕ್ಕೂ ಎಷ್ಟೋ ವೀಕ್ಷಕರಿಗೆ ಸ್ಫೂರ್ತಿಯಾಯಿತು. ಬನ್ನಿ ನೋಡೋಣ ಯಶ್ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಹೈಲೈಟ್ಸ್.

ಮೈಯಲ್ಲಾ ಕಿವಿಯಾದ ವೀಕ್ಷಕ ವರ್ಗ

ತನ್ನ ಕನಸಿನ ಬೆನ್ನೇರಿ ಹೊರಟ ಯುವಕ ಅದೇಗೆ ಯಶಸ್ಸಿನ ಉತ್ತುಂಗ ತಲುಪಿದ ಎಂಬುದು ಕಾರ್ಯಕ್ರಮದಲ್ಲಿ ಹಂತಹಂತವಾಗಿ ಅನಾವರಣಗೊಳ್ಳುತ್ತಿದ್ದಂತೆ ವೀಕ್ಷಕರು ಕುಳಿತಲ್ಲೇ ಪುಳಕಿತರಾದರು. "ಯಶಸ್ಸಿಗೆ ಹೆಸರುವಾಸಿ, ಹತ್ತು ವರ್ಷಗಳ ಹಿಂದೆ ತನ್ನ ತಂಗಿ ಸ್ಕೂಲ್ ಫೀ ಕಟ್ಟಕ್ಕೆ ಒದ್ದಾಡುತ್ತಿದ್ದಂತಹ ಇವರು ಈ ಹೊತ್ತು 20 ಕೋಟಿ ರುಪಾಯಿ ಬಿಜಿನೆಸ್ ಮಾಡುವಷ್ಟರ ಮಟ್ಟಕ್ಕೆ ಬೆಳೆದಿದ್ದಾರೆ" ಎಂದು ರಮೇಶ್ ವಿವರ ನೀಡುತ್ತಿದ್ದರೆ ವೀಕ್ಷಕ ವರ್ಗ ಮೈಯಲ್ಲಾ ಕಿವಿಯಾಗಿ ಕೇಳುತ್ತಿತ್ತು.

ಯಶ್ ಅವರ ತಂದೆ ಬಿಎಂಟಿಸಿ ಡ್ರೈವರ್

ಇಡೀ ಕರ್ನಾಟಕ ಹೆಮ್ಮೆ ಪಡುವ ರಾಕಿಂಗ್ ಸ್ಟಾರ್ ಯಶ್ ಅವರ ತಂದೆ ಬಿಎಂಟಿಸಿ ಬಸ್ ಡ್ರೈವರ್. ಕೆಳಮಧ್ಯಮವರ್ಗದಲ್ಲಿ ಹುಟ್ಟಿಬೆಳೆದ ಯಶ್ ಬೆಳೆದ ಎತ್ತರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಯಶ್ ಮೂಲ ಹೆಸರು ನವೀನ್ ಕುಮಾರ್ ಗೌಡ. ಹುಟ್ಟಿದ್ದು ಹಾಸನ ಜಿಲ್ಲೆಯ ಭುವನ ಹಳ್ಳಿಯಲ್ಲಿ. ತಂದೆ ಅರುಣ್ ಕುಮಾರ್ ಜೆ ತಾಯಿ ಪುಷ್ಪ ಎಂದು ವಿವರ ನೀಡಿದರು ರಮೇಶ್.

ಕನ್ನಡದ ಮೋಸ್ಟ್ ಬ್ಯಾಂಕಬಲ್ ಸ್ಟಾರ್

ಕನ್ನಡದ ಮೋಸ್ಟ್ ಬ್ಯಾಂಕಬಲ್ ಸ್ಟಾರ್ ಎಂದು ಕರೆದ ರಮೇಶ್, ಅವರ ತಂದೆಗೆ ಆಗ ಹದಿನಾಲ್ಕು ರುಪಾಯಿ ಸಂಬಳ ಎಂದು ರಮೇಶ್ ಹೇಳುತ್ತಿದ್ದಂತೆ ವೇದಿಕೆಗೆ ಅರುಣ್ ಕುಮಾರ್, ಮತ್ತು ಪುಷ್ಪ ಅವರು ಬಂದರು. ತಂದೆತಾಯಿ ಕಾಲಿಗೆ ಎರಗಿ ನಮಸ್ಕರಿಸಿದ ಯಶ್ ಬಳಿಕ ತಮ್ಮ ಬದುಕಿನ ಪಯಣವನ್ನು ವೀಕ್ಷಕರ ಜೊತೆ ಹಂಚಿಕೊಂಡರು.

ಅಪ್ಪನ ಕೈಯಲ್ಲಿ ಒದೆತಿಂದ ಘಟನೆ

ಅವರ ತಂದೆಯವರು ಮಾತನಾಡುತ್ತಾ, ಅವನನ್ನು ಒಂದು ಅಧಿಕಾರಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಅವನಿಗೆ ಚಿಕ್ಕಂದಿನಿಂದಲೂ ಹೀರೋ ಆಗಬೇಕು ಎಂಬ ಆಸೆ, ಕನಸು ಎರಡೂ ಇತ್ತು ಎಂದರು. ಚಿಕ್ಕಂದಿನಲ್ಲಿ ಗೋಲಿಯಾಡುವಾಗ ಲಾಠಿಯಲ್ಲಿ ಅವರ ತಂದೆ ಹೊಡೆದದ್ದನ್ನು ನೆನಪಿಸಿಕೊಂಡ ಥ್ರಿಲ್ ಆದರು ಯಶ್.

ತಂದೆ ಡ್ರೈವರ್ ಎಂಬ ಕೀಳರಿಮೆ ತನಗಿಲ್ಲ

ಚಿಕ್ಕಂದಿನಲ್ಲಿ ಆ ರೀತಿ ಇದ್ದ ತಮ್ಮ ತಂದೆ ತಾನು ಪಿಯುಸಿಗೆ ಬಂದಾಗ ಗೆಳೆಯನಂತೆ ನೋಡುತ್ತಿದ್ದರು. ಇನ್ನೂ ಬಿಎಂಟಿಸಿ ಬಸ್ ಡ್ರೈವರ್ ಆಗಿರುವ ಯಶ್ ಅವರ ತಂದೆ ಈಗಲೂ ಸೇವೆಯಲ್ಲಿದ್ದಾರೆ. ತಮ್ಮ ತಂದೆ ಡ್ರೈವರ್ ಎಂದು ಯಾ ಹೊತ್ತೂ ತಾವು ಕೀಳರಿಮೆಯಿಂದ ಇರಲಿಲ್ಲ ಎಂದರು.

ಡ್ರೈವರ್ ಆಗಿಯೇ ಕೆಲಸ ಮಾಡುತ್ತಿರುವ ಯಶ್ ತಂದೆ

ಇನ್ನೂ ತಮಗೆ ಮೂರು ವರ್ಷ ಸರ್ವೀಸ್ ಇದೆ ಎಂದು ಹೇಳಿದ ಯಶ್ ಅವರ ತಂದೆ, ಈ ವೃತ್ತಿಯೇ ನಮ್ಮನ್ನೆಲ್ಲಾ ಸಾಕಿ ಸಲುಹಿದ್ದು. ನನ್ನ ಮಗ ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಈ ಡ್ರೈವರ್ ಕೆಲಸವೇ ಕಾರಣ. ಹಾಗಾಗಿ ನನ್ನ ಸರ್ವಿಸ್ ಇರುವಷ್ಟು ದಿನ ಈ ಕೆಲಸ ಮಾಡುತ್ತೇನೆ ಎಂದರು.

ತಂದೆ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ

ಅವರಿಗೆ ಇನ್ನೂ ಎರಡು ಮೂರು ವರ್ಷ ಸರ್ವೀಸ್ ಇದೆ. ತುಂಬಾ ಸಲ ಹೇಳಿದ್ದೇನೆ. ಈ ಕೆಲಸ ಸಾಕು ಎಂದು ಹೇಳಿದ್ದೇನೆ. ಎಲ್ಲೇ ಹೋದರೂ ನಾನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಮ್ಮ ತಂದೆ ಬಿಎಂಟಿಸಿ ಡ್ರೈವರ್ ಎಂದು. ಇದರಲ್ಲಿ ಯಾವುದೇ ಮುಜುಗರ, ಕೀಳರಿಮೆ ನನಗಿಲ್ಲ ಎಂದರು ಯಶ್.

ತಂದೆ ತಾಯಿ ಕೆಲಸದ ಬಗ್ಗೆ ಕೀಳರಿಮೆ ಬೇಡ

ಯಾರೇ ಆಗಲಿ ನಿಮ್ಮ ತಂದೆತಾಯಿ ಯಾವುದೇ ಕೆಲಸ ಮಾಡುತ್ತಿರಲಿ. ಅದಕ್ಕೆ ಗೌರವ ಕೊಡಿ. ಅಯ್ಯೋ ಅವರು ಮಾಡುತ್ತಿರುವ ಕೆಲಸ ಹೇಳಿದರೆ ಏನೆಂದುಕೊಳ್ಳುತ್ತಾರೋ ಏನೋ ಎಂಬ ಕೀಳರಿಮೆಯಿಂದ ಇರಬೇಡಿ ಎಂದು ಸಲಹೆ ಕೊಟ್ಟರು ಯಶ್.

ಮಗ ಆಡಿ ಕಾರಲ್ಲಿ, ತಂದೆ ಬಸ್ ನಲ್ಲಿ ಎನ್ನುತ್ತಾರೆ

ಮಗ ಆಡಿ ಕಾರಲ್ಲಿ ಓಡಾಡ್ತಾನೆ, ಅಪ್ಪ ಬಸ್ ಡ್ರೈವರ್ ಎಂದು ಹೇಳುತ್ತಾರೆ. ಇದ್ಯಾವುದಕ್ಕೂ ನಾವು ತಲೆಕೆಡಿಸಿಕೊಂಡಿಲ್ಲ. ನಮ್ಮನ್ನೆಲ್ಲಾ ಅವರು ಇಷ್ಟು ದಿನ ಸಾಕಿ ಸಲುಹಿದ್ದಾರೆ. ಇನ್ನಾದರೂ ಅವರು ಹಾಯಾಗಿರಲಿ ಎಂದು ಅವರನ್ನು ಕೆಲಸ ಬಿಡಲು ಹೇಳಿದ್ದೆ. ಆದರೆ ಅವರು ಸರ್ವಿಸ್ ಇರುವಷ್ಟು ದಿನ ಕೆಲಸ ಮಾಡುತ್ತೇನೆ ಎಂದರು. ಹಾಗಾಗಿ ಅವರ ಇಷ್ಟದಂತೆ ಕೆಲಸ ಮಾಡಲು ಬಿಟ್ಟಿದ್ದೇವೆ ಎಂದರು.

ಹದಿನೇಳು ವರ್ಷಕ್ಕೆ ಜವಾಬ್ದಾರಿ ಹೊತ್ತ ಯಶ್

ಎಲ್ ಕೆಜಿಯಿಂದ ಕಾಲೇಜುವರೆಗೂ ಮೈಸೂರಿನ ಮಹಾವೀರ್ ಕಾಲೇಜಿನಲ್ಲಿ ಓದಿದ್ದು. ಚಿಕ್ಕಂದಿನಲ್ಲಿ ತಂಗಿ ಜೊತೆಗಿನ ಆಟ ಪಾಠ ಎಲ್ಲವನ್ನೂ ಹಂಚಿಕೊಂಡರು. ಅವನು ಹದಿನೇಳು ವರ್ಷಕ್ಕೆ ಕೆಲಸ ಮಾಡುತ್ತಿದ್ದ, ಇಡೀ ಕುಟುಂಬಕ್ಕೆ ಜೀವನಾಧಾರ ಆದ ಎಂದು ಯಶ್ ಅವರ ತಾಯಿ ಪುಷ್ಪ ಅವರು ಹೇಳಿದರು.

ಪ್ರಾವಿಜನ್ ಸ್ಟೋರ್ ನಲ್ಲಿ ದುಡಿದ ಘಟನೆ

ತಮ್ಮದೇ ಆದಂತಹ "ನವೀನ್ ಪ್ರಾವಿಜನ್ ಸ್ಟೋರ್"ನಲ್ಲಿ ಕೆಲಸ ಮಾಡುತ್ತಿದ್ದ ದಿನಗಳು, ರೇಷನ್ ಮಾರ್ತಿತ್ತಿದ್ದದ್ದು ಎಲ್ಲವನ್ನೂ ಹೇಳಿಕೊಂಡರು. ಬಳಿಕ ಅವರು ಕಪ್ ಒಂದನ್ನು ಕೊಂಡುಕೊಂಡು ಗೆದ್ದಿದ್ದಾಗಿ ತಾಯಿಗೆ ಸುಳ್ಳು ಹೇಳಿದ್ದ ಘಟನೆಯನ್ನು ರಮೇಶ್ ಹೇಳಿದಾಗ, ಅಯ್ಯೋ ಸೆಲೆಬ್ರಿಟಿ ಎಂದು ಇಲ್ಲಿ ಕರೆದು ನನ್ನ ಮಾನ ಮರ್ಯಾದೆ ಎಲ್ಲಾ ತೆಗೆಯುತ್ತಿದ್ದಾರೆ ಎಂದು ಒಮ್ಮೆ ತಮಾಷೆಯಾಗಿ ಹೇಳಿದರು.

ಉಪೇಂದ್ರ ಅವರೇ ನನಗೆ ಸ್ಫೂರ್ತಿ

ಮೈಸೂರಲ್ಲಿ ಆಕ್ರೆಸ್ಟ್ರಾದಲ್ಲಿ ಡಾನ್ಸ್ ಮಾಡಬೇಕಾದರೆ ಉಪೇಂದ್ರ ಆವರು ತಮ್ಮನ್ನು ತುಂಬಾ ಹೊಗಳಿದ್ದರು. ಅವರೇ ನಮಗೆ ಸ್ಫೂರ್ತಿ ಎಂದರು. ಕನಸು ಕಾಣಬೇಕಾದರೆ ಬೇಲಿ ಹಾಕ್ಕೋಬೇಕು. ಯಾರು ಬೇಕಾದರೂ ಏನು ಬೇಕಾದರೂ ಆಗಬಹುದು, ಸಾಧಿಸಬಹುದು ಎಂದರು.

'ಅಣ್ಣತಮ್ಮ' ಪದ ಬಂದದ್ದೇ ಗೆಳೆಯರ ಮೂಲಕ

ಗೆಳೆಯರ ಜೊತೆ "ಏನ್ ಅಣ್ಣತಮ್ಮ" ಎಂದು ಮಾತನಾಡಿಕೊಳ್ಳುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಆ ಅಣ್ಣತಮ್ಮ ಪದವೇ ಇಂದು ಜನಪ್ರಿಯವಾಗಿದೆ. ಅದು ತಮ್ಮ ಗೆಳೆಯರ ಮೂಲಕವೇ ಶುರುವಾಗಿದ್ದು. ಈಗ ಇಡೀ ಕರ್ನಾಟಕವೇ ಅಣ್ಣತಮ್ಮ ಎಂಬ ಪದವನ್ನು ಬಳಸುತ್ತಿದೆ. ಇದಕ್ಕೆ ಕಾರಣ ತಮ್ಮ ಪ್ರಾಣಸ್ನೇಹಿತರು ಎಂದರು.

ಪಿಯುಸಿಗೆ ಗುಡ್ ಬೈ ಹೇಳಿದ ಯಶ್

ಅನಿವಾರ್ಯ ಕಾರಣಗಳಿಂದ ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಬಗ್ಗೆ ಯಶ್ ಹೇಳಿದರು. ತನಗೆ ವಿದ್ಯಾಭ್ಯಾಸಕ್ಕಿಂತ ಬೇರೆ ಅವಶ್ಯಕತೆ ಜಾಸ್ತಿ ಇತ್ತು. ಹಾಗಾಗಿ ತಾವು ಪಿಯಿಸಿಗೆ ವಿದ್ಯಾಭ್ಯಾಸ ಬಿಡಬೇಕಾಯಿತು ಎಂದರು. ತನ್ನ ತಂಗಿ ಜೊತೆಗಿನ ಒಡನಾಟವನ್ನು ನೆನೆದರು ಖುಷಿಪಟ್ಟರು.

ತಂಗಿ ಜೊತೆಗಿನ ಒಡನಾಟ, ತುಂಟಾಟ

ಚಿಕ್ಕಂದಿನಲ್ಲಿ ಎಲ್ಲಾ ತರಲೆಗಳಿಗೆ ಜೊತೆಯಾಗಿರುತ್ತಿದ್ದದ್ದು ನನ್ನ ತಂಗಿ ನಂದಿನಿ. ಟ್ಯೂಶನ್, ಸ್ಕೂಲ್ ಗೆ ಬಂಕ್ ಹೊಡೆಯುತ್ತಿದ್ದದ್ದು, ಮನೆಯಲ್ಲಿ ಹಣ ಕದ್ದು ಇಬ್ಬರೂ ಬೇಕರಿಯಲ್ಲಿ ತಿಂದದ್ದು, ಅಮ್ಮನ ಕೈಗೆ ಸಿಕ್ಕಿಬಿದ್ದು ಒದೆ ತಿಂದದ್ದು ಎಲ್ಲವನ್ನೂ ಹೇಳಿಕೊಂಡರು. ತಮ್ಮ ಬದುಕಿನ ಬುತ್ತಿಯನ್ನು ಎಲ್ಲರೊಂದಿಗೆ ಹಂಚಿಕೊಂಡರು ವೀಕ್ಷಕ ವರ್ಗಕ್ಕೆ ಒಂದು ವಿಭಿನ್ನ ಅನುಭವ ಕೊಟ್ಟರು.

English summary
Rocking Star Yash Success story revealed in Weekend with Ramesh, talk show by Ramesh Aravind on Zee Kannada. Yash was born in Bhuvana Halli, Hassan, Karnataka, India as Naveen Kumar Gowda, after which his name was changed to Yash.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada