ಕಡಲತೀರದಲ್ಲಿ 'ಕರಿಮಣಿ' ಮಾಲೀಕನ ಕನಸಿಲ ಅಲೆ; ಬಲವಾಗುವುದೇ ಕರ್ಣ- ಸಾಹಿತ್ಯ ಬಂಧ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದೆ. 'ಕರಿಮಣಿ' ಧಾರಾವಾಹಿಯ ನಾಯಕ ಕರ್ಣ ಹಾಗೂ ನಾಯಕಿ ಸಾಹಿತ್ಯ ಜೋಡಿ ಮಾಡುತ್ತಿರುವ ಮೋಡಿ ಧಾರಾವಾಹಿ ಪ್ರಿಯರ ಮನ ಗೆದ್ದಿದೆ. ಆದರೂ ಮೊದಲಿನಿಂದಲೂ ಒಂದಲ್ಲದಿದ್ದರೆ ಇನ್ನೊಂದು ಕಷ್ಟ ಇವರಿಬ್ಬರ ಪ್ರೀತಿಗೆ ತಡೆಯಾಗುತ್ತಲೇ ಇದೆ. ಸದ್ಯಕ್ಕಂತೂ ಧಾರಾವಾಹಿ ರೋಚಕ ತಿರುವನ್ನು ಪಡೆಯುವ ಹಂತಕ್ಕೆ ಬಂದು ನಿಂತಿದೆ.
ಹೌದು, 'ಕರಿಮಣಿ' ಧಾರಾವಾಹಿಯಲ್ಲೀಗ ಕರಿಮಣಿ ಏರುವ ಗಳಿಗೆ ಅಂದರೆ ಮದುವೆಯ ದೃಶ್ಯಕ್ಕೆ ಬಂದು ನಿಂತಿದೆ. ಆದರೆ ಇಲ್ಲೀಗ ಕರ್ಣ ಮತ್ತು ಸಾಹಿತ್ಯರ ಮದುವೆಯಾಗುತ್ತಿಲ್ಲ. ಬದಲಾಗಿ ಕರ್ಣನನ್ನು ಪ್ರೀತಿಸಿರುವ ಹುಡುಗಿ ಸಿಂಚನಾ ಜೊತೆಗೆ ಕರ್ಣ ಮದುವೆಯಾಗಲು ಹೊರಟಿದ್ದಾನೆ. ಇನ್ನು ಸಾಹಿತ್ಯಾ ಮದುವೆ ರಿಷಿ ಜೊತೆಗೆ ನಡೆಯುತ್ತಿದೆ.

ಧಾರಾವಾಹಿ ಆರಂಭವಾದಾಗ ಕರ್ಣ ಸಾಹಿತ್ಯಳನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಅವಳ ಮದುವೆಗೆ ತಡೆಯಾಗಿ ನಿಂತಿದ್ದ. ತಾನು ಮಾಡಿದ್ದು ತಪ್ಪು ಎಂದು ಯಾವಾಗ ಕರ್ಣನಿಗೆ ತಿಳಿಯಿತೋ, ಆ ಕ್ಷಣದಿಂದ ಆತ ಸಾಹಿತ್ಯಳ ಕಾವಲಿಗೆ ನಿಂತಿದ್ದಾನೆ. ಏನೇ ಕಷ್ಟ ಬಂದರೂ ಸಾಹಿತ್ಯಾ ಜೊತೆಗೆ ಇದ್ದು ಸಹಕರಿಸುತ್ತಾನೆ ಕರ್ಣ.
ಅದಾದ ನಂತರ ನಡೆದ ಹಲವಾರು ಘಟನೆಗಳು ಅವರ ನಡುವೆ ಉತ್ತಮ ಸಂಬಂಧ ಬೆಳೆಯಲು ಕಾರಣವಾಯಿತು. ದಿನ ಕಳೆದಂತೆ ಕರ್ಣನಿಗೆ ಸಾಹಿತ್ಯಾಳ ಮೇಲೆ ಒಲವು ಮೂಡಿತು. ಆದರೂ ವನ್ ವೇ ಲವ್ ಸ್ಟೋರಿ ಎಂಬಂತೆ ಈ ಜೋಡಿ ಇನ್ನೂ ಒಂದಾಗಿಲ್ಲ. ನಾಯಕಿ ಹಾಗೂ ನಾಯಕ ಇಬ್ಬರ ಆಲೋಚನೆಗಳು ಡಿಫರೆಂಟ್ ಆಗಿದ್ದು, ಹೇಗೆ ಒಂದಾಗುತ್ತಾರೆ ಎಂಬ ಕುತೂಹಲವಿದೆ.
ಇದೆಲ್ಲದರ ನಡುವೆ ಸಾಹಿತ್ಯಾ ಮತ್ತು ಕರ್ಣನ ಒಂದಾಗುವಿಕೆಗೆ ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಟ್ಟಿರುವ ಪ್ರೋಮೋ ನೋಡಿ ಧಾರಾವಾಹಿ ವೀಕ್ಷಕರು ಖುಷಿಯಾಗಿದ್ದಾರೆ. ಕರ್ಣ ಮತ್ತು ಸಾಹಿತ್ಯರ ಪ್ರೀತಿಯ ದೃಶ್ಯವನ್ನೊಳಗೊಂಡ ಪ್ರೋಮೋವನ್ನು ಕಡಲ ಕಿನಾರೆಯಲ್ಲಿ ಚಿತ್ರಿಸಲಾಗಿದೆ.
ಏನೇ ಅಡೆತಡೆ ಬಂದರೂ ಪ್ರೀತಿಯೇ ಕೊನೆಗೆ ಗೆಲ್ಲಬೇಕೆಂದು ವೀಕ್ಷಕರ ಅಭಿಪ್ರಾಯವೂ ಹೌದು. ಕಷ್ಟಗಳೇನೇ ಇದ್ದರೂ, ಏನಂದರೂ ನೀ ನಂಗೇ ಅಲ್ಲವಾ ಎಂಬ ಪ್ರೋಮೋದಲ್ಲಿರುವ ಹಾಡಿನಂತೆ ಕರ್ಣ ಸಾಹಿತ್ಯ ಕೂಡ ಸರಿ ಹೋಗಬೇಕು, ಅವರಿಬ್ಬರೂ ಒಂದಾಗಬೇಕು ಎಂದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇವರಿಬ್ಬರೂ ಪ್ರೀತಿಯ ಅಗ್ನಿ ಪರೀಕ್ಷೆಯನ್ನು ಎದುರಿಸಿ ಮದುವೆಯಾಗಲಿದ್ದಾರೆಯೇ, ಕೊನೆಗೂ ಸಾಹಿತ್ಯಾ ಕರ್ಣ ಒಂದಾಗುತ್ತಾರಾ ಎಂಬುದನ್ನು ಧಾರಾವಾಹಿ ನೋಡಿಯೇ ತಿಳಿಯಬೇಕಿದೆ.
'ಕರಿಮಣಿ' ಧಾರಾವಾಹಿಯ ನಾಯಕ ಕರ್ಣ ಆಗಿ ಅಶ್ವಿನ್ ಯಾದವ್ ಹಾಗೂ ನಾಯಕಿ ಸಾಹಿತ್ಯಾಳಾಗಿ ಸ್ಪಂದನಾ ಸೋಮಣ್ಣ ಅಭಿನಯಿಸುತ್ತಿದ್ದಾರೆ. ಹಾಗೆಯೇ ಇದರ ಹೊರತಾಗಿ ಮೇಕಪ್ ರಾಮಕೃಷ್ಣ, ಶ್ರೀಕಾಂತ್ ಹೆಬ್ಳೀಕರ್, ಅನುಷಾ ರಾವ್, ಹೇಮಾ ಪ್ರಭಾತ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.


Click it and Unblock the Notifications











