ತಮಿಳು ಹಾಸ್ಯ ನಟ ಯೋಗಿ ಬಾಬು ಜೊತೆ ನಟನೆ ಅನುಭವ ಹೇಗಿತ್ತು? ಏನಂತಾರೆ ರೂಪೇಶ್ ಶೆಟ್ಟಿ?
ತುಳು ಚಿತ್ರರಂಗದ ನಟ ರೂಪೇಶ್ ಶೆಟ್ಟಿ ಇತ್ತೀಚಿಗಷ್ಟೇ ಬಿಗ್ ಬಾಸ್‌ಗೆ ಕಾಲಿಟ್ಟು ಬಹಳಷ್ಟು ಸುದ್ದಿ ಮಾಡಿದ್ದರು. ಹೌದು, ನಟ ರೂಪೇಶ್ ಶೆಟ್ಟಿ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಹೊರ ಹೊಮ್ಮಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ರೂಪೇಶ್ ಶೆಟ್ಟಿ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಿದ್ದು, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು.
ಹೌದು. ಕನ್ನಡದ 'ಮಂಕು ಭಾಯ್ ಫ್ಯಾಕ್ಸಿ ರಾಣಿ' ಹಾಗೂ ತುಳುವಿನ 'ಸರ್ಕಸ್' ಸಿನಿಮಾ ರಿಲೀಸ್ ಆಗಿತ್ತು. 'ಸರ್ಕಸ್' ಸಿನಿಮಾ ಕೋಸ್ಟಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದರ ಜೊತೆಗೆ ತಮಿಳಿನ ಸಿನಿಮಾದಲ್ಲಿ ನಟಿಸುವ ಸಿಹಿ ಸುದ್ದಿಯನ್ನು ಕೂಡಾ ರೂಪೇಶ್ ಶೆಟ್ಟಿ ಹಂಚಿಕೊಂಡಿದ್ದರು. 'ಸನ್ನಿಧಾನಂ' ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿರುವ ನಟ ರೂಪೇಶ್ ಶೆಟ್ಟಿ ಈ ಹೊಸ ಅನುಭವದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸದ್ಯ ಈ ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿಗೆ ಬಂದಿರುವ ನಟ ರೂಪೇಶ್ ಶೆಟ್ಟಿ, ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿ ಬಾಬು ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿ ಕೊಂಡಿದ್ದಾರೆ. ಅಂದ ಹಾಗೆ ಯೋಗಿ ಬಾಬು ಬಹಳಷ್ಟು ತಮಿಳು ಸಿನಿಮಾಗಳಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. 'ಸನ್ನಿಧಾನಂ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯೋಗಿ ಬಾಬು ಅವರದ್ದು ಪ್ರಮುಖ ಪಾತ್ರ. ಸದ್ಯ ಯೋಗಿ ಬಾಬು ಹಾಗೂ ರೂಪೇಶ್ ಶೆಟ್ಟಿ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ.
"ನಾನು ಮೂಲತಃ ಕಾಸರಗೋಡಿನವನಾಗಿರುವುದರಿಂದ ಮಲಯಾಳಂ ನನಗೆ ಚೆನ್ನಾಗಿ ಬರುತ್ತದೆ. ಮ್ಯಾನೇಜ್ ಮಾಡಬಹುದು ಎಂದು ತಿಳಿದಿದ್ದೆ. ಆದರೆ, ಶೂಟಿಂಗ್ ಸಮಯದಲ್ಲಿ ತಮಿಳು ಡೈಲಾಗ್‌ಗಳು ಹೇಳಲು ಕಷ್ಟವಾದ್ದರಿಂದ ಈಗ ಮೊದಲೇ ಸ್ಕ್ರಿಪ್ಟ್‌ಗಳನ್ನು ತೆಗೆದುಕೊಂಡು ಡೈಲಾಗ್ ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ. ತಮಿಳಿನಲ್ಲಿ ಇದು ನನ್ನ ಮೊದಲ ಚಿತ್ರವಾಗಿದ್ದು, ಈ ಬಗ್ಗೆ ನನಗೆ ಬಹಳ ಸಂತೋಷ ಇದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ನಟ ರೂಪೇಶ್ ಶೆಟ್ಟಿ ಹೇಳಿದ್ದಾರೆ .

ಇದರ ಜೊತೆಗೆ "ನಟ ಯೋಗಿ ಬಾಬು ಅವರೊಂದಿಗೆ ನಟಿಸುವುದು ನನ್ನ ಸೌಭಾಗ್ಯ. ಆದರೆ, ಮೊದಲಿಗೆ ನನಗೆ ಸ್ವಲ್ಪ ಹೆದರಿಕೆ ಆಗಿತ್ತು. ಏಕೆಂದರೆ, ಅವರು ಮಹಾ ನಟ ದಿಗ್ಗಜರೊಂದಿಗೆ ನಟಿಸಿರುವ ಕಲಾವಿದ. ಅವರೊಂದಿಗೆ ನನ್ನ ನಟನೆ ಯಾವ ರೀತಿ ಮೂಡಿ ಬರುತ್ತದೆ ಎಂಬ ಭಯ ನನಗಿತ್ತು. ಆದರೆ, ಪ್ರತಿದಿನ ಶೂಟಿಂಗ್‌ನಲ್ಲಿ ನನ್ನನ್ನು ಪ್ರೋತ್ಸಾಹಿಸಿ, ನನಗೊಂದು ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಟ್ಟಿದ್ದಾರೆ. ಆ ಬಗ್ಗೆ ನಾನು ಸದಾ ಋಣಿ" ಎಂದು ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ .
"ಯೋಗಿ ಬಾಬುರಿಗೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಬಹಳ ಒಳ್ಳೆಯ ಸ್ನೇಹಿತರಿದ್ದಾರೆ. ಬೆಂಗಳೂರಿಗೆ ಬಂದ ಪ್ರತಿ ಬಾರಿಯೂ ಅವರು ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿ ಬರುತ್ತಾರೆ. ಪುನೀತ್ ರಾಜಕುಮಾರ್ ಅವರೊಂದಿಗಿನ ತಮ್ಮ ಒಡನಾಟವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರೊಂದಿಗೆ ಕೆಲಸ ಮಾಡಿ ಸಾಕಷ್ಟು ಕಲಿತಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಅವರು ಕನ್ನಡ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯವಾದದ್ದು ದೊಡ್ಮನೆಗೆ ಕಾಲಿಟ್ಟ ಬಳಿಕವೇ. ಬಿಗ್ ಬಾಸ್ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನ ಗೆದ್ದ ರೂಪೇಶ್ ಶೆಟ್ಟಿ, ಇದೀಗ 'ಸನ್ನಿಧಾನಂ' ಎಂಬ ತಮಿಳು ಚಿತ್ರದಲ್ಲಿ ಯಾವ ರೀತಿ ಮೂಡಿ ಬರುತ್ತಾರೆ ಅನ್ನುವ ಕುತೂಹಲವಿದೆ.


Click it and Unblock the Notifications











