ಕೊಡದಿದ್ದರೆ ಕಥೆ ಖತಂ ; ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ, 10 ಕೋಟಿಗೆ ಬೇಡಿಕೆ - ಬೆಚ್ಚಿ ಬಿದ್ದ ಬಣ್ಣದ ಲೋಕ
ಹೆಸರು, ಹಣ, ಕೀರ್ತಿ ಜೊತೆ ಅಪಾಯ ಕೂಡ ಉಚಿತವಾಗಿ ಬರುತ್ತೆ. ಅದರಲ್ಲಿಯೂ ಮನರಂಜನಾ ಕ್ಷೇತ್ರದ ಹೊಳಪು, ಒನಪು, ವಯ್ಯಾರ ಭೂಗತ ಲೋಕವನ್ನು ಬಹುಬೇಗ ಆಕರ್ಷಿಸುತ್ತೆ. ನೇಮು, ಫೇಮು ಗಳಿಸಿದವರ ಮೇಲೆ ಅಂಡರ್ ವರ್ಲ್ಡ್‌ನ ಕಣ್ಣು ಬಹುಬೇಗ ಬೀಳುತ್ತೆ. ಇದಕ್ಕೆ ಉದಾಹರಣೆ ಎನ್ನುವಂತೆ ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿದೆ. ದೀಪಿಕಾ ಪಡುಕೋಣೆಯ ಪತಿ ರಣವೀರ್ ಸಿಂಗ್ ಅವರಿಗೆ ಬೆದರಿಕೆಯನ್ನು ಕೂಡ ಹಾಕಲಾಗಿದೆ. ಈಗ ಹಿಮಾಂಶಿ ಖುರಾನಾ ಸರದಿ.
ಹೌದು, ಹಿಮಾಂಶಿ ಖುರಾನಾ, ಮಿಸ್ ಲೂಧಿಯಾನ. ಪಂಜಾಬ್‌ನ ಖ್ಯಾತ ಸ್ಟಾರ್. ''ಸಡ್ಡಾ ಹಖ್''.. ''ಲೆದರ್ ಲೈಫ್''..''2 ಬೋಲ್''.. ''ಅಫ್ಸರ್''.. ಇವರ ಕೆಲ ಪ್ರಮುಖ ಚಿತ್ರಗಳು. ಇನ್ನು ಸಲ್ಮಾನ್ ಖಾನ್ ಸಾರಥ್ಯದ ''ಬಿಗ್ ಬಾಸ್'' 13ನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ಹಿಮಾಂಶಿ ಖುರಾನಾ 36 ದಿನಗಳ ಕಾಲ ಮನೆಯಲ್ಲಿ ಉಳಿದಿದ್ದರು. ಪಂಜಾಬ್‌ನ ಐಶ್ವರ್ಯ ರೈ ಎಂದೇ ಇವರನ್ನು ಕರೆಯಲಾಗುತ್ತೆ.

ಇಂಥಾ ಹಿಮಾಂಶಿಗೆ ಈಗ ಪ್ರಾಣ ಬೆದರಿಕೆಯನ್ನು ಹಾಕಲಾಗಿದೆ. ಒಂದಲ್ಲ.. ಎರಡಲಲ್.. ಬರೋಬ್ಬರಿ ಹತ್ತು ಕೋಟಿಯ ಬೇಡಿಕೆಯನ್ನಿಡಲಾಗಿದೆ. ವಾಯ್ಸ್ ನೋಟ್ ಮೂಲಕ ಹಿಮಾಂಶಿ ಖುರಾನ ಅವರನ್ನು ಬೆದರಿಸಲಾಗಿದ್ದು, ಪಂಜಾಬ್ ಚಿತ್ರರಂಗದಲ್ಲಿ ಈ ಪ್ರಕರಣ ಸದ್ಯ ಸಂಚಲನ ಸೃಷ್ಟಿಸಿದೆ. ಭಯದ ವಾತಾವರಣ ಕೂಡ ಇದರಿಂದ ನಿರ್ಮಾಣವಾಗಿದೆ.
ಬೇಡಿಕೆಯನ್ನು ಈಡೇರಿಸದಿದ್ದರೆ, ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂದು ಹ್ಯಾರಿ ಬಾಕ್ಸರ್ ಬೆದರಿಕೆಯನ್ನು ಹಾಕಿದ್ದು, ಮೊಹಾಲಿ ಹಿರಿಯ ಪೊಲೀಸ್ ಅಧೀಕ್ಷಕ ಹರ್ಮನ್‌ದೀಪ್ ಹನ್ಸ್, ಹಿಮಾಂಶಿ ಅವರಿಗೆ ಬೆದರಿಕೆ ಕರೆ ಬಂದಿರುವುದನ್ನು ದೃಢಪಡಿಸಿದ್ದಾರೆ. ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.
ಹಿಮಾಂಶಿ ಖುರಾನಾ ಅವರ ಸುತ್ತ ಮುತ್ತ ಸದ್ಯ ಖಾಕಿ ಸರ್ಪಗಾವಲು ಇದ್ದು, ಈ ಪ್ರಕರಣದ ತನಿಖೆಯ ವೇಳೆ ಜೀಶನ್ ಅಖ್ತರ್ ಎಂಬ ಇನ್ನೊಬ್ಬ ವ್ಯಕ್ತಿಯ ಹೆಸರೂ ಕೂಡ ಕೇಳಿಬಂದಿದೆ. ಮೊಹಾಲಿ ಪೊಲೀಸರ ಟೆಕ್ನಿಕಲ್ ತಂಡ ಈ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಪ್ರಯತ್ನವನ್ನು ಮಾಡುತ್ತಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಇನ್ನು ಹಿಮಾಂಶಿ ಖುರಾನಾ ಕೇವಲ ಪಂಜಾಬ್‌ನಲ್ಲಿ ಮಾತ್ರ ಹೆಸರು ಮಾಡಿಲ್ಲ. ಬದಲಿಗೆ ಇವರಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಸದ್ಯ ತಮ್ಮ ನೆಚ್ಚಿನ ನಾಯಕಿಗೆ ಬೆದರಿಕೆ ಕರೆ ಬಂದ ವಿಷಯ ಕೇಳಿ ಇವರ ಅಭಿಮಾನಿಗಳು ಆತಂಕಕ್ಕೀಡಾಗಿದ್ದು ಹಿಮಾಂಶಿಗೆ ಸೋಶಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುತ್ತಿದ್ದಾರೆ. ಪೊಲೀಸರ ಬಳಿ ಸುರಕ್ಷತೆಗಾಗಿ ಆಗ್ರಹಿಸುತ್ತಿದ್ದಾರೆ. ಈ 10 ಕೋಟಿ ರೂಪಾಯಿ ಸುಲಿಗೆ ಸಂಚನ್ನು ಎದುರಿಸಲು ಈಗ ಹಿಮಾಂಶಿ ಧೈರ್ಯವನ್ನು ಪ್ರದರ್ಶಿಸಬೇಕಿದ್ದು, ಇದೆಲ್ಲದರಿಂದ ಕ್ಯಾಮೆರಾದಿಂದ ಹಿಂದೆ ಸರಿದು ಈಗ ಬುಲೆಟ್ ಪ್ರೂಫ್ ಗ್ಲಾಸ್ ಮತ್ತು ಭದ್ರತಾ ಸಿಬ್ಬಂದಿ ಪಡೆಯ ಕಾವಲಿನಲ್ಲಿ ಹಿಮಾಂಶಿ ಈಗ ಬದುಕುವಂತಾಗಿದೆ.

ಅಂದ್ಹಾಗೇ ಮೊದಲಾದರೆ ಈ ಬಿಷ್ಣೋಯ್ ಗ್ಯಾಂಗ್ ಕೇವಲ ಸಲ್ಮಾನ್ ಖಾನ್ ಮಾತ್ರ ಬಿದ್ದಿತ್ತು. ಸಲ್ಮಾನ್ ಖಾನ್ ಜೀವ ತೆಗೆಯುವ ಶಪಥ ಮಾಡಿತ್ತು. ಅದಕ್ಕೆ ಈ ಗ್ಯಾಂಗ್ ಬಳಿ ಕಾರಣವೂ ಇದೆ. ಆದರೆ..ಈಗ ಬಿಷ್ಣೋಯ್ ಗ್ಯಾಂಗ್ ಇಡೀ ಬಾಲಿವುಡ್‌ನ ಬೆನ್ನು ಹತ್ತಿದೆಯಾ ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರಲ್ಲಿ ಮನೆ ಮಾಡಿದೆ. ಈ ಹಿಂದೆ ನಾಲ್ಕು ತಿಂಗಳಿನಲ್ಲಿ ಮೂರು ಬಾರಿ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದ ಈ ಗ್ಯಾಂಗ್‌ನ ಕೈವಾಡ ರೋಹಿತ್ ಶೆಟ್ಟಿ ಮನೆ ಮೇಲೆ ನಡೆದ ದಾಳಿ ಹಿಂದೆ ಇದೆಯಾ..? ರಣ್ವೀರ್ ಸಿಂಗ್‌ಗೆ ಬಂದ ಬೆದರಿಕೆಯ ಸಂದೇಶದ ಹಿಂದೆಯೂ ಇದೇ ಗ್ಯಾಂಗ್ ಕೈವಾಡ ಇತ್ತು.? ಈಗ ಹಿಮಾಂಶಿ ಖುರಾನಾಗೆ ಬಂದ ಬೆದರಿಕೆಯ ಕರೆ ಮಾಡಿದ ಹ್ಯಾರಿ ಬಾಕ್ಸರ್ ಕೂಡ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಲಾಗುತ್ತಿದೆ. ಮುಂದೆ ಭೂಗತ ಲೋಕದ ಈ ಹಿಟ್ ಲಿಸ್ಟ್‌ನಲ್ಲಿ ಯಾರಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications









