ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ
''ಇದು ರಿಯಾಲಿಟಿ ಶೋ ಅಲ್ಲ.. ಇದೇ ರಿಯಲ್ಲಾದ ಶೋ'' ಎಂಬ ಟ್ಯಾಗ್ ಲೈನ್ ಇಟ್ಟುಕೊಂಡು ಪ್ರತಿ ವಾರ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ 'ಸದಾ ನಿಮ್ಮೊಂದಿಗೆ'.
ಒಂದೊಳ್ಳೆ ಉದ್ದೇಶ ಹೊಂದಿರುವ ಈ ಕಾರ್ಯಕ್ರಮದಿಂದ ಈಗಾಗಲೇ ಹಲವರಿಗೆ ಸಹಾಯ ಆಗಿದೆ. ಜನಸಾಮಾನ್ಯರಿಗೆ ಸಹಾಯ ಮಾಡಲು ತಾರೆಯರು ಕೂಡ ಒಂದು ದಿನದ ಮಟ್ಟಿಗೆ ಜನಸಾಮಾನ್ಯರಂತೆ ದುಡಿದು ಕಷ್ಟದಲ್ಲಿ ಇದ್ದವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.
ಧ್ರುವ ಸರ್ಜಾ, ಉಪೇಂದ್ರ, ವಿಜಯ್ ರಾಘವೇಂದ್ರ, ಶ್ರೀಮುರಳಿ, ರಾಗಿಣಿ ದ್ವಿವೇದಿ, ಮಾನ್ವಿತಾ ಹರೀಶ್, ಪ್ರಿಯಾಮಣಿ, ಶರಣ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ತಾರೆಯರು ಈಗಾಗಲೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ ನಟಿ ಹರಿಪ್ರಿಯಾ ಸರದಿ. ಮುಂದೆ ಓದಿರಿ...

ಈ ವಾರದ ಅತಿಥಿ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ವಾರದ ಸಂಚಿಕೆಯಲ್ಲಿ ಪ್ರಜ್ವಲ್ ದೇವರಾಜ್ ಅವರು ಭಾಗವಹಿಸಿ ಒಂದೂವರೆ ವರ್ಷದ ಮಗುವಿಗಾಗಿ ಬಾದಾಮಿ ಹಾಲು ಮಾರಿ ಜೊತೆಗೆ 35000 ರೂಪಾಯಿಗಳನ್ನು ನೀಡಿದ್ದರು. ಅದೇ ರೀತಿ ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿರುವವರು 'ನೀರ್ ದೋಸೆ' ಬೆಡಗಿ ಹರಿಪ್ರಿಯಾ.

ರೈತ ಕುಟುಂಬಕ್ಕೆ ಸಹಾಯ
ರೈತ ಕುಟುಂಬವೊಂದಕ್ಕೆ ಸಹಾಯ ಮಾಡಲು ನಟಿ ಹರಿಪ್ರಿಯಾ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ
ಮಾಲತೇಶ್ ಎಂಬ ರೈತ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತನ ಹೆಂಡತಿ ಗಾಯಿತ್ರಿ ಕಷ್ಟಗಳನ್ನ ಎದುರಿಸುತ್ತಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಮನೆಯ ಸಂಪೂರ್ಣ ಜವಾಬ್ದಾರಿ ಗಾಯಿತ್ರಿ ಮೇಲಿದೆ. ಹೀಗಾಗಿ ಅವರಿಗೆ ಆರ್ಥಿಕ ಸಹಾಯ ಬೇಕಾಗಿದೆ.

ಫ್ರೂಟ್ ಸಲಾಡ್ ಮಾರಿದ ಹರಿಪ್ರಿಯಾ
ಗಾಯಿತ್ರಿ ಕುಟುಂಬಕ್ಕೆ ಸಹಾಯ ಮಾಡಲು ನಟಿ ಹರಿಪ್ರಿಯಾ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಫ್ರೂಟ್ ಸಲಾಡ್ ಮಾರಿದ್ದಾರೆ. ಅದರಿಂದ ಬಂದ ಹಣದಿಂದ ಗಾಯಿತ್ರಿಯವರಿಗೆ ಹರಿಪ್ರಿಯಾ ಸಹಾಯ ಮಾಡಿದ್ದಾರೆ.

ಪ್ರಸಾರ ಯಾವಾಗ.?
ಫ್ರೂಟ್ ಸಲಾಡ್ ಮಾರಿ ಹರಿಪ್ರಿಯಾ ಸಂಗ್ರಹಿಸಿದ ಹಣವೆಷ್ಟು ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











