ದಿಢೀರ್ ಅಂತ ಯೋಗರಾಜ್ ಭಟ್ರು ಐಸ್ ಕ್ರೀಮ್ ಮಾರಿದ್ದು ಯಾಕೆ.?
'ಮುಂಗಾರು ಮಳೆ' ಅಂತಹ ಸೂಪರ್ ಹಿಟ್ ಚಿತ್ರವನ್ನ ಸ್ಯಾಂಡಲ್ ವುಡ್ ಗೆ ನೀಡಿದ ಯೋಗರಾಜ್ ಭಟ್ ದಿಢೀರ್ ಅಂತ ಬೀದಿಬದಿಯಲ್ಲಿ ಕೋನ್ ಐಸ್ ಮಾರಾಟ ಮಾಡಿದ್ದಾರೆ.
ಅರೇ.. ಸದಾ ಡೈರೆಕ್ಟರ್ ಕ್ಯಾಪ್ ತೊಡುವ ಭಟ್ರು, ನಟನೆ ಏನಾದರೂ ಮಾಡ್ತಿದ್ದಾರಾ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ, ಇದು 'ರೀಲ್' ನ್ಯೂಸ್ ಅಲ್ಲ.. 'ರಿಯಾಲಿಟಿ' ನ್ಯೂಸ್.!
'ಪಂಚತಂತ್ರ' ಚಿತ್ರದ ನಟ ವಿಹಾನ್ ಗೌಡ ಜೊತೆಗೆ ಸೇರಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ಯೋಗರಾಜ್ ಭಟ್ ಐಸ್ ಕ್ರೀಮ್ ಮಾರಾಟ ಮಾಡಿದ್ದಾರೆ. ಕ್ರೀಡಾಪಟುವಿಗೆ ಸಹಾಯ ಮಾಡಲು ಯೋಗರಾಜ್ ಭಟ್ ಮತ್ತು 'ಪಂಚತಂತ್ರ' ಹೀರೋ ಮುಂದಾಗಿದ್ದಾರೆ. ಮುಂದೆ ಓದಿರಿ...

ಈ ವಾರದ ಅತಿಥಿ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಲೂಸ್ ಮಾದ ಯೋಗಿ, ಸಚಿನ್ ಅವರಿಗೋಸ್ಕರ ಬಲೂನ್ ಮಾರಿ ಸಹಾಯ ಮಾಡಿದ್ದರು.
ಈ ವಾರದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿರುವವರು ಹೆಸರಾಂತ ನಿರ್ದೇಶಕ, ವಿಕಟ ಕವಿ ಯೋಗರಾಜ್ ಭಟ್.

ಯಾರಿಗಾಗಿ ಯೋಗರಾಜ್ ಭಟ್ ಸಹಾಯ.?
ಶಿವಕುಮಾರ್ ಎಂಬ ಕ್ರೀಡಾಪಟುವಿಗಾಗಿ ಐಸ್ ಕ್ರೀಮ್ ಮಾರಿ ಸಹಾಯ ಮಾಡಿದ್ದಾರೆ ಯೋಗರಾಜ್ ಭಟ್. ಹಾಗೆ ಇವರ ಜೊತೆ 'ಪಂಚತಂತ್ರ' ಚಿತ್ರದ ನಾಯಕ ವಿಹಾನ್ ಗೌಡ ಕೂಡ ಕೈ ಜೋಡಿಸಿದ್ದಾರೆ.

ಹೂವಿನ ವ್ಯಾಪಾರ ಮಾಡುತ್ತಿರುವ ಶಿವಕುಮಾರ್
ಶಿವಕುಮಾರ್ 'ಖೋ ಖೋ' ಕ್ರೀಡಾಪಟುವಾಗಿದ್ದು, ಮನೆಯಲ್ಲಿನ ತೊಂದರೆಗಾಗಿ ತಮ್ಮ ಆಟವನ್ನು ಬದಿಗೊತ್ತಿ ಕೆಲಸವನ್ನು ಮಾಡುತ್ತಿದ್ದಾರೆ. ಶಿವಕುಮಾರವರಿಗೆ ಇಬ್ಬರು ಅಕ್ಕಂದಿರು, ಅವರ ಮದುವೆಗಾಗಿ ತಂದೆ ಮಾಡಿದ ಸಾಲ ತೀರಿಸೋಕೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ.

ಯಾರೀ ಶಿವಕುಮಾರ್.?
ಶಿವಕುಮಾರ್.. 2017ರ ಅಂತರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಪ್ರಥಮ ಸ್ಥಾನ ಪಡೆಯುವ ಮುಖಾಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇಂಥ ಪ್ರತಿಭೆ ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗದಿರಲು ಅಕ್ಕಂದಿರ ಮದುವೆಯ ಸಾಲ ಅಡ್ಡಿಯಾಗಿದೆ.

ಪ್ರಸಾರ ಯಾವಾಗ.?
ಯೋಗರಾಜ್ ಭಟ್ರು ಹಾಗೂ ವಿಹಾನ್ ಅವರು ಶಿವಕುಮಾರ್ ಗಾಗಿ ಸಂಗ್ರಹಿಸಿದ ಹಣವೆಷ್ಟು ಎಂಬುದು ಈ ವಾರದ ಸಂಚಿಕೆಯಲ್ಲಿ ಗೊತ್ತಾಗಲಿದೆ. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











