ರಿಯಾಲಿಟಿ ಶೋ ವೇದಿಕೆ ಮೇಲೆ ಕಣ್ಣೀರು ಹಾಕಿದ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್ ತಮ್ಮ ಬಿಂದಾಸ್ ವ್ಯಕ್ತಿತ್ವಕ್ಕೆ, ರೌಡಿ ವರ್ತನೆಗೆ ಹೆಚ್ಚು (ಕು)ಖ್ಯಾತರು. ಅವರು ನಡೆಸಿಕೊಡುವ ರಿಯಾಲಿಟಿ ಶೋನಲ್ಲಿಯೂ ಸಹ ಸಲ್ಮಾನ್ ಖಾನ್ ಸ್ಪರ್ಧಿಗಳ ಮೇಲೆ ಜಗಳ ಮಾಡುವುದನ್ನೇ ಅಭಿಮಾನಿಗಳು ಹೆಚ್ಚು ನೋಡಿದ್ದಾರೆ.
ನಿಜ ಜೀವನದಲ್ಲಿಯೂ ಸಲ್ಮಾನ್ ಇಮೇಜು ರೌಡಿ ಮಾದರಿಯಾಗಿಯೇ ಇದೆ. ಐಶ್ವರ್ಯಾ ರೈ ಮನೆ ಮುಂದೆ ಜಗಳ, ನಟ ವಿವೇಕ್ ಒಬೆರಾಯ್ ಜೀವ ಬೆದರಿಕೆ, ಗಾಯಕ ಅರಿಜಿತ್‌ಗೆ ಬೆದರಿಕೆ. ಸಲ್ಮಾನ್ ಕಂಡು ವೇದಿಕೆಯಿಂದ ಓಡಿ ಹೋದ ಅರಿಜಿತ್ ಇವೆಲ್ಲವೂ ಸಲ್ಮಾನ್‌ಗೆ ರೌಡಿ ಇಮೇಜು ನೀಡಿದೆ. ಅವರ ದೇಹಭಾಷೆಯೂ ಈ ರೌಡಿ ಇಮೇಜಿಗೆ ಚೆನ್ನಾಗಿ ಸೂಟ್ ಆಗುತ್ತದೆ.
ಆದರೆ ಸಲ್ಮಾನ್ ಅಲ್ಲಿ ಒಂದು ಮಾನವೀಯತೆಯುಳ್ಳ ವ್ಯಕ್ತಿಯೂ ಇದ್ದಾನೆ. ಮುಗ್ಧ ಬಾಲಕನಂತ ಮನಸ್ಸೊಂದನ್ನು ಸಲ್ಮಾನ್ ಹೊಂದಿದ್ದಾರೆ. ಸಲ್ಮಾನ್ ಮುಗ್ಧತೆ ಬಗ್ಗೆ ಆಗಾಗ್ಗೆ ಅವರ ಆಪ್ತ ಗೆಳೆಯರು ಹೇಳುತ್ತಿರುತ್ತಾರೆ. ಆದರೆ ಇದೀಗ ಸಾಕ್ಷಿಯೊಂದು ಸಲ್ಮಾನ್ ನಡೆಸಿಕೊಡುವ ರಿಯಾಲಿಟಿ ಶೋನಲ್ಲಿ ದೊರಕಿದೆ.

ನಟ ಸಿದ್ಧಾರ್ಥ್ ಶುಲ್ಕ ಹಿಂದಿಯ ಜನಪ್ರಿಯ ಕಿರುತೆರೆ ನಟರಾಗಿದ್ದರು ಜೊತೆಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆಲುವು ಸಹ ಸಾಧಿಸಿದ್ದರು. ಆದರೆ ಸಿದ್ಧಾರ್ಥ್ ಶುಕ್ಲ 2021ರ ಸೆಪ್ಟೆಂಬರ್ ತಿಂಗಳಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಇದೀಗ ಸಲ್ಮಾನ್ ನಡೆಸಿಕೊಡುವ ರಿಯಾಲಿಟಿ ಶೋನ 15ನೇ ಸೀಸನ್‌ನ ಫಿನಾಲೆ ನಡೆಯುತ್ತಿದ್ದು, ಫಿಲಾನೆಯಲ್ಲಿ ಸಿದ್ಧಾರ್ಥ್ ಶುಕ್ಲರ ಗರ್ಲ್‌ಫ್ರೆಂಡ್ ಆಗಿದ್ದ ಶೆಹನಾಜ್ ಗಿಲ್ ನೃತ್ಯ ಮಾಡಿದ್ದಾರೆ. ಈ ಸಮಯ ಸಲ್ಮಾನ್ ಖಾನ್, ಶೆಹನಾಜ್ ಗಿಲ್ ಜೊತೆಗೆ ಮಾತನಾಡುತ್ತಾ ಸಿದ್ಧಾರ್ಥ್ ಶುಕ್ಲ ಅನ್ನು ನೆನಪು ಮಾಡಿಕೊಂಡು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಶೆಹಜಾಜ್ ಗಿಲ್ ಸಹ ಸಲ್ಮಾನ್ ಖಾನ್ ಅನ್ನು ತಬ್ಬಿಕೊಂಡು ಅತ್ತಿದ್ದಾರೆ.
ಶೆಹನಾಜ್ ಗಿಲ್, ಸಿದ್ಧಾರ್ಥ್ ಶುಕ್ಲ ಗಾಗಿಯೇ ರಿಯಾಲಿಟಿ ಶೋನ ಫಿನಾಲೆಯಲ್ಲಿ ವಿಶೇಷ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಶೆಹನಾಜ್‌ನ ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವರು ಶೆಹನಾಜ್ ಗಿಲ್‌ರ ವಿಡಿಯೋ ನೋಡಿ ಭಾರವಾದ ಮನಸ್ಸಿನಿಂದ ಕಮೆಂಟ್ ಮಾಡಿದ್ದಾರೆ.
ಶೆಹನಾಜ್ ಗಿಲ್ ಅನ್ನು ನಗುತ್ತಲೇ ವೇದಿಕೆಗೆ ಸಲ್ಮಾನ್ ಖಾನ್ ಆಹ್ವಾನಿಸುತ್ತಾರೆ. ಆದರೆ ಸಲ್ಮಾನ್ ಖಾನ್ ಅನ್ನು ನೋಡಿದ ಕೂಡಲೇ ಶೆಹನಾಜ್ ಗಿಲ್ ಭಾವುಕರಾಗಿ ಬಿಡುತ್ತಾರೆ. ಕೂಡಲೇ ಶೆಹನಾಜ್ ಗಿಲ್ ಅನ್ನು ಆಲಂಗಿಸಿಕೊಳ್ಳುವ ಸಲ್ಮಾನ್ ಖಾನ್ ಅವರಿಗೆ ಸಮಾಧಾನ ಹೇಳುತ್ತಾರೆ ಆದರೆ ಕೊನೆಗೆ ತಾವೂ ಭಾವುಕರಾಗಿ ಕಣ್ಣೀರು ಸುರಿಸುತ್ತಾರೆ. ಇವರಿಬ್ಬರ ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿದ್ಧಾರ್ಥ್ ಶುಕ್ಲ ನಿಧನದ ಬಳಿಕ ಮೌನವಾಗಿಬಿಟ್ಟಿದ್ದ ಶೆಹನಾಜ್ ಗಿಲ್ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಸೂಕ್ತ ಚಿಕಿತ್ಸೆ ಪಡೆದುಕೊಂಡು ಈಗಷ್ಟೆ ಅದರಿಂದ ಹೊರಗೆ ಬಂದಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಶೆಹನಾಜ್ ಗಿಲ್ ಬಹಳ ಮಾತುಗಾರ್ತಿಯಾಗಿದ್ದರು. ಮಾತನಾಡದೆ ಸುಮ್ಮನೆ ಇರದ ಹುಡುಗಿಯಾಗಿದ್ದರು. ಆದರೆ ಸಿದ್ಧಾರ್ಥ್ ಶುಕ್ಲ ಅಗಲಿಕೆಯ ಬಳಿಕ ಶೆಹನಾಜ್ ಗಿಲ್ ಬಹಳ ಬದಲಾದಂತೆ ಕಾಣುತ್ತಿದ್ದಾರೆ.
ಸಲ್ಮಾನ್ ಖಾನ್‌ಗೆ ಸಿದ್ಧಾರ್ಥ್ ಶುಕ್ಲ ಬಗ್ಗೆ ಬಹಳ ಪ್ರೀತಿ ಆದರ ಇತ್ತು. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಸಿದ್ಧಾರ್ಥ್ ಶುಕ್ಲ ಕೆಲವು ವೆಬ್ ಸರಣಿ, ಸಿನಿಮಾಗಳಲ್ಲಿಯೂ ನಟಿಸಿದ್ದರು. ಸೆಪ್ಟೆಂಬರ್ 02 ರಂದು ಸಿದ್ಧಾರ್ಥ್ ಶುಕ್ಲ ಹಠಾತ್ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗಿನ್ನೂ 40 ವರ್ಷ ವಯಸ್ಸಾಗಿತ್ತು. ಟಿವಿ ಹಾಗೂ ಸಿನಿಮಾ ಲೋಕ ಸಿದ್ಧಾರ್ಥ್ ಶುಕ್ಲ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿತ್ತು.


Click it and Unblock the Notifications











