ಸೆಪ್ಟೆಂಬರ್ 21ರಿಂದ 'ಬಿಗ್ ಬಾಸ್ 20' ಶುರು ; ಈ ಬಾರಿಯ ಅದೃಷ್ಟವಂತರು ಇವರೇನಾ? ಮನೆಗೆ ಮರಳುತ್ತಾರಾ ಮಾಜಿ ಸ್ಪರ್ಧಿಗಳು?
''ಬಿಗ್ ಬಾಸ್ '' ಅತ್ಯಂತ ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ವರ್ಷಗಳಿಂದ ಆರು ಭಾಷೆಗಳಲ್ಲಿಯೂ ಕೂಡ ''ಬಿಗ್ ಬಾಸ್'' ಪ್ರಸಾರವಾಗುತ್ತಿದೆ. ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕನ್ನಡದಲ್ಲಿ ಈ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೆರಡು ವರ್ಷದಿಂದ ''ಸುದೀಪ್'' ವಹಿಸಿಕೊಂಡಿದ್ದಾರೆ. ತೆಲುಗಿನಲ್ಲಿ ನಾಗಾರ್ಜುನ ನೇತೃತ್ವದಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ವಿಜಯ್ ಸೇತುಪತಿ'' ಅವರಿಗೆ ವಹಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಮರಾಠಿಯಲ್ಲಿ ರಿತೇಶ್ ದೇಶಮುಖ್ ಈ ಕಾರ್ಯಕ್ರಮದ ನೊಗ ಹೊತ್ತಿದ್ದಾರೆ.

ಹಿಂದಿಯಲ್ಲಿ ''ಬಿಗ್ ಬಾಸ್'' ಅಂದರೆ ನೆನಪಾಗುವುದೇ ಸಲ್ಮಾನ್ ಖಾನ್. ಆರಂಭದ ಮೂರು ಸೀಸನ್ ಹೊರತು ಪಡಿಸಿದರೆ ಕಳೆದ 17 ವರ್ಷಗಳಿಂದ ''ಬಿಗ್ ಬಾಸ್'' ಕಾರ್ಯಕ್ರಮ ನಡೆಸಿಕೊಂಡು ಬಂದಿರುವ ಸಲ್ಮಾನ್ ಖಾನ್ ಈ ವರ್ಷ ಕೂಡ ''ಬಿಗ್ ಬಾಸ್'' ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ''ಬಿಗ್ ಬಾಸ್'' ಸೀಸನ್ 20ರ ನಿರೂಪಣೆ ಮಾಡಲಿದ್ದಾರೆ.
ಎಂದಿನಿಂದ ಶುರು ಬಿಗ್ ಬಾಸ್ ..?
ಈಗಾಗಲೇ ಹಿಂದಿ ''ಬಿಗ್ ಬಾಸ್''ನ ಕೆಲಸಗಳು ಶುರುವಾಗಿವೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದ್ದು ಸೆಪ್ಟೆಂಬರ್ 21ರಿಂದ ಈ ಬಾರಿಯ ಹಿಂದಿ ''ಬಿಗ್ ಬಾಸ್'' ಶುರುವಾಗಲಿದೆ ಎಂಬ ಮಾತು ಸದ್ಯ ಬಲವಾಗಿ ಕೇಳಿ ಬರುತ್ತಿದೆ.
ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ
ಪ್ರತಿ ವರ್ಷದಂತೆ ಈ ವರ್ಷ ಕೂಡ ''ಬಿಗ್ ಬಾಸ್'' ಮನೆಗೆ ಯಾರೆಲ್ಲಾ ಹೋಗಲಿದ್ಧಾರೆ ಎನ್ನುವ ಚರ್ಚೆ ಶುರುವಾಗಿದೆ. ಆ ಪ್ರಕಾರ ಕೆಲವರ ಹೆಸರು ಅಂತೆ-ಕಂತೆಯ ಸಂತೆಯಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಪ್ರಸಿದ್ದ ರ್‍ಯಾಪರ್ ಸ್ಯಾಂಟಿ ಶರ್ಮಾ.. ''ಕಚ್ಚಾ ಬಾದಾಮ್'' ಖ್ಯಾತಿಯ ಅಂಜಲಿ ಅರೋರಾ.. ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿ ಫೈಸಲ್ ಶೇಖ್ (ಮಿಸ್ಟರ್ ಫೈಸು ).. ರಿಧಿಮಾ ಗುಪ್ತಾ.. ಜನ್ನತ್ ಜುಬೈರ್.. ತುಷಾರ್ ಕರ್ವಾರ.. ಅರ್ಬಾಜ್ ಪಟೇಲ್.
ಮತ್ತೆ ಮನೆಗೆ ಬರ್ತಾರಾ ಮಾಜಿ ಸ್ಫರ್ಧಿಗಳು ?
ಸಾಮಾನ್ಯವಾಗಿ ಹಳೆಯ ಸೀಸನ್‌ನಲ್ಲಿ ಸದ್ದು ಮಾಡಿದ, ಗಮನ ಸೆಳೆದ ಕೆಲ ಸ್ಫರ್ಧಿಗಳಿಗೆ ಮತ್ತೆ ಮಣೆ ಹಾಕಲಾಗುತ್ತೆ. ಕೆಲ ವಾರ ಮನೆಯೊಳಗೆ ಅತಿಥಿಗಳನ್ನಾಗಿ ಕಳಿಸಲಾಗುತ್ತೆ. ಇದಕ್ಕೆ ಹಿಂದೆ ಎಲ್ಲಾ ಭಾಷೆಯಲ್ಲಿ ಹಲವಾರು ಉದಾಹರಣೆಗಳಿವೆ.
ಹಿಂದಿಯಲ್ಲಿ ಈ ವರ್ಷ ಕೂಡ ಈ ಸಂಪ್ರದಾಯ ಮುಂದುವರೆಯಲಿದ್ದು, ಕಳೆದ ವರ್ಷ ಮನೆಯೊಳಗೆ ಹೋಗಿದ್ದ ಆವೇಜ್ ದರ್ಬಾರ್ ಈ ವರ್ಷ ಮತ್ತೆ ಮನೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇವರಲ್ಲದೇ ತನ್ನ ಬಟ್ಟೆಯಿಂದಲೇ ಸದ್ದು ಮಾಡುವ, ಟ್ರೋಲಿಗರಿಗೆ ಆಹಾರವಾಗುವ ಉರ್ಫಿ ಜಾವೇದ್ ಕೂಡ ಈ ಬಾರಿ ಮತ್ತೆ ಮನೆಗೆ ಬರುತ್ತಾರೆ ಎನ್ನುವ ಸುದ್ದಿ ಹಬ್ಬಿದೆ. ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು ಉರ್ಫಿ.
ವಿಶೇಷ - ವಿಭಿನ್ನ
ಇನ್ನು ಈ ಬಾರಿ ಹಿಂದಿಯ ''ಬಿಗ್ ಬಾಸ್''ಗೆ 20ರ ಹರೆಯ. ಹೊಸ ಮೈಲಿಗಲ್ಲು ತಲುಪಿದ ಸಂತಸ ಕಾರ್ಯಕ್ರಮದ ಆಯೋಜಕರಿಗಿದೆ. ಈ ಹಿನ್ನೆಲೆ ಈ ಸಲ ಹೊಸ ಮಾದರಿಯ ಟಾಸ್ಕ್‌ಗಳನ್ನು ಮತ್ತು ವಾರಾಂತ್ಯದ ಆಟಗಳನ್ನು ವಾಹಿನಿ ಮತ್ತು ''ಬಿಗ್ ಬಾಸ್'' ತಂಡ ರೂಪಿಸುತ್ತಿದೆ ಎನ್ನುವ ವರದಿಯನ್ನು ಕೂಡ ನ್ಯೂಸ್ 18 ಮಾಡಿದೆ. ಜನಪ್ರಿಯ ಸೆಲೆಬ್ರಿಟಿಗಳನ್ನು ಕರೆತರಲು ಚಾನೆಲ್ ನಿರ್ಧರಿಸಿದ್ದು ಸಹನೆ, ತಾಳ್ಮೆಯನ್ನು ಈ ಬಾರಿ ಪರೀಕ್ಷೆ ಮಾಡಲಾಗುತ್ತೆ ಎಂದು ಕೂಡ ಹೇಳಲಾಗುತ್ತಿದೆ.
ಒಟ್ನಲ್ಲಿ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಈ ವರ್ಷದ ''ಬಿಗ್ ಬಾಸ್'' ಕಾರ್ಯಕ್ರಮ ಮೂಡಿ ಬರಲಿದ್ದು, 20ನೇ ಸೀಸನ್‌ನ ರಣರಂಗ ಹೇಗಿರಲಿದೆ..? ಯಾರೆಲ್ಲಾ ಈ ಬಾರಿ ಮನೆಯನ್ನು ಪ್ರವೇಶ ಮಾಡಲಿದ್ಧಾರೆ ಎನ್ನುವುದಕ್ಕೆ ಅಧಿಕೃತವಾದ ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ. ಶೀಘ್ರದಲ್ಲಿಯೇ ಸಲ್ಮಾನ್ ಖಾನ್ ಈ ವರ್ಷದ ''ಬಿಗ್ ಬಾಸ್'' ಕಾರ್ಯಕ್ರಮದ ಪ್ರೋಮೊ ಶೂಟ್‌ನಲ್ಲಿ ಭಾಗವಹಿಸಲಿದ್ದಾರೆ.


Click it and Unblock the Notifications