2ನೇ ಮದುವೆಯಾದ ಸಮಂತಾ- ರಾಜ್ ವಯಸ್ಸಿನ ಅಂತರ ಎಷ್ಟು? ಲವ್ ಸ್ಟೋರಿ ಶುರುವಾಗಿದ್ದೇಗೆ?
ಇರೋದು ಒಂದೇ ಜೀವನ. ಇದ್ದಷ್ಟು ದಿನ ನೆಮ್ಮದಿಯಾಗಿರಬೇಕು ಎನ್ನುವುದು ಈ ಜಮಾನದ ಜನರ ಅಭಿಪ್ರಾಯ. ಇಷ್ಟವಿಲ್ಲದವರ ಜೊತೆಗಿದ್ದು ನೋವು ಅನುಭವಿಸುವುದಕ್ಕಿಂತ ಸಂಬಂಧ ಕಡಿದುಕೊಂಡು ಹೊರಬರಬೇಕು. ಮತ್ತೆ ಲವ್ವಾದರೆ ಮಗದೊಮ್ಮೆ ಮದುವೆ ಆಗುವುದರಲ್ಲಿ ತಪ್ಪೇನಿದೆ. ತೆಲುಗು ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡುಮೊರು ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಬ್ಬರಿಗೂ ಇದು ಎರಡನೇ ಮದುವೆ. ಈಗಾಗಲೇ ಒಮ್ಮೆ ಮದುವೆಯಾಗಿ ಭಿನ್ನಾಭಿಪ್ರಾಯಗಳಿಂದ ಸಂಬಂಧ ಕಡಿದುಕೊಂಡಿದ್ದರು. ಪರಸ್ಪರ ಪ್ರೀತಿಸಿ ಇದೀಗ ಮತ್ತೆ ಮದುವೆಯಾಗಿದ್ದಾರೆ. ಕೋಯಂಬತ್ತೂರಿನ ಇಶಾ ಫೌಂಡೇಶನ್ ದೇವಸ್ಥಾನದಲ್ಲಿ ಸಮಂತಾ- ರಾಜ್ ಮದುವೆ ನಡಿದಿದೆ. ಕೇವಲ 30 ಜನರ ಸಮ್ಮುಖದಲ್ಲಿ ಸರಳವಾಗಿ ಜೋಡಿ ಒಂದಾಗಿದೆ. ಈಗಾಗಲೇ ಸಮಂತಾಗೆ ಡಿವೋರ್ಸ್ ಕೊಟ್ಟು ದೂರಾಗಿದ್ದ ನಟ ನಾಗಚೈತನ್ಯಾ 2ನೇ ಮದುವೆ ಆಗಿರುವುದು ಗೊತ್ತೇಯಿದೆ.

'ಎ ಮಾಯ ಚೆಸಾವೆ' ಚಿತ್ರದಲ್ಲಿ ನಾಗಚೈತನ್ಯ ಹಾಗೂ ಸಮಂತಾ ಮೊದಲ ಬಾರಿ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಶುರುವಾದ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಹಸಮೆಣೆ ಏರಿದ್ದರು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಸಮಂತಾ ಕ್ರಿಶ್ಚಿಯನ್. ಚೈತು ಹಿಂದೂ. ಹಾಗಾಗಿ ಎರಡೂ ಸಂಪ್ರದಾಯಗಳಂತೆ ಮದುವೆ ನೆರವೇರಿತ್ತು.
2017ರಲ್ಲಿ ಚೈತು- ಸ್ಯಾಮ್ ಮದುವೆ ನಡೆದಿತ್ತು. 4 ವರ್ಷಗಳ ಬಳಿಕ ಇಬ್ಬರೂ ದೂರಾಗಲು ಬಯಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಳಿಕ ನೇರವಾಗಿ ಈ ಬಗ್ಗೆ ಇಬ್ಬರೂ ಮಾತನಾಡದಿದ್ದರೂ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಇನ್ನು ಸಮಂತಾ 2ನೇ ಮದುವೆ ಆಗುವ ಬಗ್ಗೆ ಹಿಂದೆಯೇ ಸುಳಿವು ಕೊಟ್ಟಿದ್ದರು. ಮತ್ತೆ ಪ್ರೀತಿ, ಮದುವೆ ಆದರೆ ತಪ್ಪೇನಿದೆ ಎನ್ನುವಂತೆ ಮಾತನಾಡಿದ್ದರು.
ರಾಜ್ ನಿಡಿಮೋರು ಮತ್ತು ಕೃಷ್ಣ ದಾಸರಕೋತಪಲ್ಲಿ ಇಬ್ಬರೂ ಸ್ನೇಹಿತರು. ಒಟ್ಟಿಗೆ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡುತ್ತಾ ಬರ್ತಿದ್ದಾರೆ. ಸೂಪರ್ ಹಿಟ್ 'ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್ ಅನ್ನು ಇವರಿಬ್ಬರು ಕಟ್ಟಿಕೊಟ್ಟಿದ್ದಾರೆ. 'ಫ್ಯಾಮಿಲಿಮ್ಯಾನ್'-2 ಸರಣಿಯಲ್ಲಿ ಸಮಂತಾ ನಟಿಸಿದ್ದರು. ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಮಿಂಚಿದ್ದರು. ಇದೇ ಕಾರಣಕ್ಕೆ ಚೈ-ಸ್ಯಾಮ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು.
ಇತ್ತೀಚೆಗೆ ಸಮಂತಾ ಸಿನಿಮಾ ನಿರ್ಮಾಪಕಿಯಾಗಿದ್ದರು. 'ಶುಭಂ' ಎಂಬ ಸಿನಿಮಾ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ಕೂಡ ನಟಿಸಿದ್ದರು. ಈ ವೇಳೆ ರಾಜ್ ಜೊತೆಗಿದ್ದರು. ಸಿನಿಮಾ ಪ್ರೊಡಕ್ಷನ್ ವಿಚಾರದಲ್ಲಿ ಸಮಂತಾಗೆ ಬೆಂಬಲವಾಗಿ ನಿಂತಿದ್ದರು. ಇನ್ನು ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದ್ದರು. ವಿಮಾನದಲ್ಲಿ ಜೊತೆಗೆ ಓಡಾಡಿದ್ದ ಫೋಟೊಗಳನ್ನು ಸ್ವತಃ ಸಮಂತಾ ಹಂಚಿಕೊಂಡಿದ್ದರು. ಅದನ್ನು ನೋಡಿ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಅದು ಈಗ ನಿಜವಾಗಿದೆ.
ಅಂದಹಾಗೆ ಸಮಂತಾಗೆ ಈಗ 38 ವರ್ಷ ವಯಸ್ಸು. ನಿರ್ದೇಶಕ ರಾಜ್ ನಿಡುಮೊರುಗೆ 46 ವರ್ಷ. ಇಬ್ಬರ ನಡುವೆ 8 ವರ್ಷ ವಯಸ್ಸಿನ ಅಂತರವಿದೆ. ಇನ್ನು ಈಗಾಗಲೇ ಶ್ಯಾಮಲಿ ದೇ ಎಂಬುವವರನ್ನು ರಾಜ್ ಮದುವೆಯಾಗಿ ಡಿವೋರ್ಸ್ ಪಡೆದಿದ್ದಾರೆ. ಸ್ಯಾಮ್-ರಾಜ್ ಡೇಟಿಂಗ್ ಹಾಗೂ ಮದುವೆ ವಿಚಾರದ ಬಗ್ಗೆ ಶ್ಯಾಮಲಿ ದೇ ಪರೋಕ್ಷವಾಗಿ ಪ್ರತಿಕ್ರಿಯಿಸುತ್ತಿದ್ದರು.
ಚಿತ್ರರಂಗದಲ್ಲಿ ತಾರೆಯರ ಡೇಟಿಂಗ್, ಮದುವೆ, ಡಿವೋರ್ಸ್ ವಿಚಾರ ಗುಟ್ಟಾಗಿ ಉಳಿಯುವುದಿಲ್ಲ. ಇನ್ನು ಮದುವೆ, ಡಿವೋರ್ಸ್ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಇತ್ತೀಚೆಗೆ 2ನೇ ಮದುವೆ ಅನ್ನುವುದು ತಾರೆಯರ ವಿಚಾರದಲ್ಲಿ ಕಾಮನ್ ಎನ್ನುವಂತಾಗಿದೆ. ಹಾಗಾಗಿ ವದಂತಿಗಳನ್ನು ನಂಬಬೇಕೋ, ನಂಬಬಾರದೋ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಕಾರಣ ತಾರೆಯರ ವಿಚಾರದಲ್ಲಿ ಸಾಕಷ್ಟು ವದಂತಿಗಳು ನಿಜವಾಗುತ್ತಿದೆ.


Click it and Unblock the Notifications











