Muddulakshmi Serial: ಮುದ್ದುಲಕ್ಷ್ಮಿಯ ಮುದ್ದುಮಣಿ ದೃಷ್ಟಿಗೆ ಅಪ್ಪು ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಇಂಟ್ರೆಸ್ಟಿಂಗ್
ಮುದ್ದು ಲಕ್ಷ್ಮೀಯ ಮುದ್ದುಮಣಿಗಳು ಸೀರಿಯಲ್ ಟ್ವಿಸ್ಟ್ ಮೇಲೆ ಟ್ಟಿಸ್ಟ್ ಸಿಗುತ್ತಿದೆ. ಇನ್ನೇನು ದೃಷ್ಟಿ ಪ್ರೀತಿ ಕೈ ತಪ್ಪಿ ಹೋಗುತ್ತೆ. ಇಷ್ಟವಿಲ್ಲದ ಶ್ರವಣ್ ಜೊತೆ ದೃಷ್ಟಿ ಮದುವೆಯಾಗಿ ಬಿಡುತ್ತಾಳೆ ಅನ್ನೋ ಬೇಸರ ಧಾರಾವಾಹಿ ಪ್ರಿಯರಲ್ಲಿ ಕಾಡುತ್ತಿತ್ತು. ಆದರೆ ಆ ಸಮಯ ಕೊಂಚ ಉಲ್ಟಾ ಆಗಿದೆ. ವಿಧಿ ನಿಯಮದಂತೆ ಬಯಸಿದ ಪ್ರೀತಿಯೇ ದೃಷ್ಟಿಯನ್ನು ಹುಡುಕಿಕೊಂಡು ಬಂದಿದೆ.
ಅದ್ದೂರಿ ಸೆಟ್ ನಲ್ಲಿ ದೃಷ್ಟಿ ಹಾಗೂ ಶಿವು ಮದುವೆ ನಡೆದಿದೆ. ಇನ್ನೇನಿದ್ರೂ ಹೊಸ ಬಾಳಿನ ಹೊಸಿಲಿನಲ್ಲಿ ಹೊಸದೊಂದು ಜೀವನ ನಡೆಸುವ ಉತ್ಸುಕದಲ್ಲಿದ್ದಾರೆ. ಆದರೆ ಈ ನಡುವೆ ದೃಷ್ಟಿಯ ಬಗ್ಗೆ ಹೊಸ ವಿಚಾರವೊಂದು ತಿಳಿದು ಬಂದಿದೆ. ದೃಷ್ಟಿ ಅಲಿಯಾಸ್ ಸಮೀಕ್ಷಾ ಅಪ್ಪು ನಟನೆಯ ಕೊನೆಯ ಸಿನಿಮಾ 'ಜೇಮ್ಸ್'ನಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

'ಜೇಮ್ಸ್' ಚಿತ್ರದ ಸಮೀಕ್ಷಾ
'ಜೇಮ್ಸ್' ಸಿನಿಮಾವನ್ನು ಈಗಾಗಲೇ ನೀವೆಲ್ಲರೂ ನೋಡಿಯೇ ಇದ್ದೀರಾ. ಆ ಸಿನಿಮಾದಲ್ಲಿ ಅಪ್ಪುಗೆ ನಾಲ್ವರು ಸ್ನೇಹಿತರು. ಅದರಲ್ಲಿ ಶೈನ್ ಶೆಟ್ಟಿ ಕೂಡ ಒಬ್ಬರು. ಶೈನ್ ಶೆಟ್ಟಿ ಮದುವೆಗೆಂದು ಎಲ್ಲರೂ ಪಾಂಡಿಚೇರಿಗೆ ಹೋಗುತ್ತಾರೆ. ಅಲ್ಲಿನ ಮಧುಮಗಳೇ ಈ ಸಮೀಕ್ಷಾ. ಇಬ್ಬರ ಮದುವೆ ಅದ್ದೂರಿಯಾಗಿ ಸಾಗುತ್ತೆ. ಆದರೇ ಸಮೀಕ್ಷಾ ಮದುವೆಯ ದಿನವೇ ಗುಂಡಿನ ದಾಳಿಗೆ ಬಲಿಯಾಗುತ್ತಾರೆ. ಸಮೀಕ್ಷಾ ಮಾತ್ರವಲ್ಲ ಅಲ್ಲಿದ್ದವರೆಲ್ಲಾ ಬಲಿಯಾಗುತ್ತಾರೆ. ಸಮೀಕ್ಷಾ ಬರೀ 5 ನಿಮಿಷ ಬಂದು ಹೋದರೂ ಎಲ್ಲರ ಮನಸ್ಸಲೂ ಉಳಿದುಕೊಳ್ಳುತ್ತಾರೆ.

ಅಪ್ಪು ಜೊತೆ ಪೋಟೊ ತೆಗಿಸಿಕೊಂಡಿಲ್ಲ
ಈ ಸಿನಿಮಾದ ಬಗ್ಗೆ ಸಂತಸ ಹಂಚಿಕೊಂಡಿರುವ ಸಮೀಕ್ಷಾ ಬೇಸರ ಕೂಡ ಹೊರ ಹಾಕಿದ್ದಾರೆ. ಇವತ್ತು ತುಂಬಾ ಬೇಜಾರು ಆಗುತ್ತಿದೆ. ನಾನು ಶೂಟಿಂಗ್ ಮಾಡುವಾಗ ಯಾವಾಗಲೂ ಅಪ್ಪು ಸರ್ ಜೊತೆಯಲ್ಲೇ ಇರುತ್ತಾ ಇದ್ದರು. ನನಗೆ ಸ್ವಲ್ಪ ಭಯವೂ ಕಾಡುತ್ತಿತ್ತು. ಅವರು ಅಷ್ಟು ದೊಡ್ಡ ಆಕ್ಟರ್ ನಮ್ಮನ್ನೆಲ್ಲಾ ಮಾತಾಡಿಸುತ್ತಾರಾ ಇಲ್ಲವಾ ಎಂದಿತ್ತು. ಆದರೆ ಎಲ್ಲರನ್ನೂ ತುಂಬಾ ಚೆನ್ನಾಗಿ ಮಾತಾಡಿಸುತ್ತಿದ್ರು. ಅವರ ಮೇಲೆ ಹೆಚ್ಚು ಗೌರವ ಇದ್ದಿದ್ದರಿಂದ ನಾವೂ ಹೆಚ್ಚಾಗಿ ಅವರನ್ನು ಡಿಸ್ಟರ್ಬ್ ಮಾಡುತ್ತಿರಲಿಲ್ಲ. ನಮ್ಮ ಸೀನ್ ಮುಗಿಸಿದ ಕೂಡಲೇ ಹಿಂದೆ ನಿಂತು ಬಿಡುತ್ತಿದ್ದೆವು. ಆದರೆ ಅವರೇ ನಮ್ಮನ್ನೆಲ್ಲಾ ಹೆಚ್ಚು ಮಾತಾಡಿಸಿದ್ದಾರೆ. ಎಲ್ಲಿಯವರು, ಏನು ಅಂತೆಲ್ಲಾ ನಮ್ಮನ್ನು ಮಾತಾಡಿಸ್ತಾ ಇದ್ದರು. ಆದರೆ ಒಂದು ಬೇಸರ ಅಂದರೆ ಅವರ ಜೊತೆಗೆ ಫೋಟೊ ಆಗಲಿ, ವಿಡಿಯೋಸ್ ಆಗಲಿ ತೆಗೆದುಕೊಳ್ಳೋ ಅವಕಾಶ ಸಿಗಲೇ ಇಲ್ಲ. ಒಂದೇ ಸಿನಿಮಾದಲ್ಲಿ ನಟಿಸಿದ್ದರೂ ಇದನ್ನು ಮಿಸ್ ಮಾಡಿಕೊಂಡೆವು.

ಜೀವನ ಕೊಟ್ಟು ಹೋದರು
ನಮಗೆ ಯಾರಿಗೂ ಈ ದುರಂತದ ಊಹೆ ಕೂಡ ಇರಲಿಲ್ಲ. 'ಜೇಮ್ಸ್' ಸಿನಿಮಾದಲ್ಲಿ ನಾನೂ ಸೇರಿದಂತೆ ಹಲವಾರು ಜನ ಹೊಸಬರಿದ್ದಾರೆ. ಎಲ್ಲರಿಗೂ ಜೇಮ್ಸ್ ಸಿನಿಮಾ ಒಂದು ಲೈಫ್ ಕೊಟ್ಟಿದೆ ಅನ್ನೋದಂತು ಸತ್ಯ. ಎಲ್ಲರನ್ನು ಗುರುತಿಸುವಂತೆ ಮಾಡಿ ಅಪ್ಪು ಹೋದರಲ್ಲ ಅನ್ನೋ ನೋವಿದೆ. ನೀವೂ ನಮ್ಮ ಜೊತೆಗೆ ಇರದೆ ಇದ್ದರೂ ನಿಮ್ಮ ಆಶೀರ್ವಾದ ನಮ್ಮ ಮೇಲೆ ಯಾವಾಗಲೂ ಇರುತ್ತೆ ಅಂತ ಭಾವಿಸುತ್ತೇವೆ. ಇದು ನನ್ನ ಅದೃಷ್ಟ ಕೂಡ. ಅವರ ಕೊನೆ ಸಿನಿಮಾ ಅನ್ನೋ ನೋವಿನ ಜೊತೆಗೆ ಜೀವನ ಪರ್ಯಂತ ನೆನಪಿಸೋ ಸಿನಿಮಾವಿದು ಅಂದರೆ ತಪ್ಪಾಗಲ್ಲ.

'ಜೇಮ್ಸ್' ಅಪ್ಪು ಕೊನೆ ಸಿನಿಮಾ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆಯಾಗಿ ಎರಡನೇ ವಾರದತ್ತ ಮುನ್ನುಗುತ್ತಿದೆ. ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. RRR ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪೈಪೋಟಿ ನಡುವೆಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











