ನೆಗೆಟಿವ್ ರೋಲ್ ಮೂಲಕವೇ ಫೇಮಸ್: ಬಯಸಿದ್ದು ಲವ್ ಮ್ಯಾರೇಜ್
ಕಳೆದ ಎರಡೂವರೆ ದಶಕಗಳಿಂದ ಕನ್ನಡದ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ ಮುನಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು ಬಹಳ ಕಡಿಮೆಯೇ. ರಂಗಭೂಮಿಯಲ್ಲಿ ಮೊದಲಿನಿಂದಲೂ ಕಾಣಿಸಿಕೊಂಡ ಮುನಿರಾಜು ಅವರು ಹಲವು ತಂಡಗಳ ಜೊತೆಗೆ ಕೆಲಸ ಮಾಡಿದ್ದಾರೆ. ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯ ಅಭಿನಯ ತರಂಗ, ನಟರಂಗ, ಸ್ನೇಹಿತ ತರಂಗ, ಸ್ಪಂದನ ಸೇರಿದಂತೆ ಹಲವು ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಮಾಂಗಲ್ಯ' ಧಾರಾಹಿಯಲ್ಲಿ ನಟ ಮುನಿರಾಜು ಬರೋಬ್ಬರಿ 9 ವರ್ಷಗಳ ಕಾಲ ನಟಿಸಿದ್ದರು. ಅದರಲ್ಲೂ ನರಸಿಂಹನ ಪಾತ್ರದಿಂದಲೇ ಚಿರಪರಿಚಿತರಾಗಿದ್ದರು.

ಅಷ್ಟಕ್ಕೂ ನಟ ಮುನಿರಾಜು ಅವರು ಬಣ್ಣದ ಲೋಕದ ಪಯಣ ಆರಂಭಿಸಿದ್ದೇ 'ಸುಮತಿ' ಧಾರಾವಾಹಿಯ ಮೂಲಕ. ಈ ಧಾರಾವಾಹಿ ಈಗಲೂ ಹಲವರಿಗೆ ನೆನಪಿದೆ.
ನೆಗೆಟಿವ್ ರೋಲ್‌ನಿಂದ ಫೇಮಸ್
'ಸುಮತಿ' ಧಾರಾವಾಹಿಯನ್ನು ನೋಡುತ್ತಲೇ ಊಟ ಮಾಡುತ್ತಿದ್ದ ಕಾಲವದು. ಅಲ್ಲಿಂದ ನಟ ಮುನಿರಾಜು ಕಿರುತೆರೆ ಪಯಣವನ್ನು ಆರಂಭಿಸಿದರು. ಬಳಿಕ 'ಮಾಂಗಲ್ಯ', 'ಜನನಿ', 'ನಾಗಿಣಿ' ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದುವರೆಗೂ ನಟ ಮುನಿ ಅವರು ಎಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಎಂಬುದು ಅವರಿಗೆ ಗೊತ್ತಿರಲು ಸಾಧ್ಯವಿಲ್ಲ. ನಟ ಮುನಿ ಲುಕ್ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಈಗಾಗಲೇ ನಟಿಸಿರುವ ಧಾರಾವಾಹಿ ಹಾಗೂ ಸಿನಿಮಾಗಳಲ್ಲೂ ಕೂಡ ನಟ ಮುನಿ ಅವರು ವಿಲನ್ ಪಾತ್ರಗಳು ಇಲ್ಲವೇ ಖಡಕ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾಗಳಲ್ಲಿ ನಟನೆ
ಇನ್ನು ನಟ ಮುನಿರಾಜು ಅವರು 'ಯಶವಂತ್' ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು. ಕಳೆದ 25 ವರ್ಷಗಳಲ್ಲಿ ನಟ ಮುನಿರಾಜು ಅವರು ಬರೋಬ್ಬರಿ 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲೇ ನಟಿಸಿದರೂ ಕೂಡ ಮುನಿ ಅವರ ಪಾತ್ರಗಳು ಎಲ್ಲರ ಮನದಲ್ಲೂ ಉಳಿಯುವಂತಹದ್ದು. 'ಯಶವಂತ' ಸಿನಿಮಾ ಬಳಿಕ 'ವಿಷ್ಣುವರ್ಧನ', 'ಸಾರಥಿ', 'ರಾಜರಾಜೇಂದ್ರ' ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ, 'ಕೆಜಿಎಫ್' ಸಿನಿಮಾದಲ್ಲೂ ಕೂಡ ನಟ ಮುನಿರಾಜು ಪೊಲೀಸ್ ಆಫೀಸರ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. 'ಮಡಮಕ್ಕಿ', 'ಸೈನೇಡ್', 'ಚತುರ', 'ಮಾದೇಶ', 'ಪ್ರೊಡಕ್ಷನ್ ನಂ.1', 'ಕೋರ', 'ಮತ್ಸ್ಯಗಂಧ' ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ಲವ್ ಮ್ಯಾರೇಜ್?
ಖಳನಾಯಕ ಇಲ್ಲವೇ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನಟ ಮುನಿರಾಜು ಸದ್ಯ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಶಿವರಾಮೇಗೌಡ ಎಂಬ ಊರಿನ ಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಮುನಿರಾಜು ಅವರಿಗೂ ಲವ್ ಮ್ಯಾರೇಜ್ ಆಗಬೇಕು ಎಂಬ ಆಸೆ ಚಿಕ್ಕವಯಸ್ಸಿನಿಂದಲೂ ಇತ್ತಂತೆ. ಆದರೆ ಇವರ ತಂದೆ ಬಹಳ ಸ್ಟ್ರಿಕ್ಟ್ ಆಗಿದ್ದರಿಂದ ಅವರು ಹೇಳಿದ ಹುಡುಗಿಯ ಕುತ್ತಿಗೆಗೆ ತಾಳಿ ಕಟ್ಟಿದರಂತೆ.
ಕುಟುಂಬ ಎಂದರೆ ಪ್ರೀತಿ
ಬೇರೆ ಯಾರೂ ಅಲ್ಲ. ತಮ್ಮ ಅಕ್ಕನ ಮಗಳನ್ನೇ ಮುನಿರಾಜು ಮದುವೆಯಾಗಿದ್ದಾರೆ. ಹೆಂಡತಿ ಬಹಳ ಸಪೋರ್ಟಿವ್ ಆಗಿದ್ದು, ಸಂಸಾರ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಮುನಿರಾಜು ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಇಂಜಿನಿಯರ್ ಮುಗಿಸಿ ಈಗ ಹೆಚ್ಚಿನ ಓದಿಗಾಗಿ ವಿದೇಶಕ್ಕೆ ಹಾರಲು ಸಿದ್ಧನಾಗಿದ್ದಾನಂತೆ. ತಮ್ಮ ಕುಟುಂಬದ ಬಗ್ಗೆ ಬಹಳ ಸಂತಸದಿಂದ ಹೇಳಿಕೊಳ್ಳುವ ನಟ ಮನಿರಾಜು ಅವರು ಅವರ ಮಕ್ಕಳು ಮತ್ತು ಹೆಂಡತಿಯ ಹೆಸರಾಗಲಿ ಫೋಟೋಗಳನ್ನಾಗಲೀ ಎಲ್ಲಲೂ ಬಹಿರಂಗಪಡಿಸಿಲ್ಲ.


Click it and Unblock the Notifications











