ಸುಧಾರಾಣಿಗೆ ಸ್ತ್ರೀ ಪ್ರಶಸ್ತಿ: 'ಮನೆ ಮೆಚ್ಚಿದ ನಾಯಕಿ'ಯಾದ ಎವರ್ ಗ್ರೀನ್ ತಾರೆ ಸುಧಾರಾಣಿ
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋ ಗಳ ಮೂಲಕ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ ಜೀ ವಾಹಿನಿ. ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ 'ಸ್ತ್ರೀ ಅವಾರ್ಡ್ಸ್ 2024' ನಡೆದಿದ್ದು, ಅದು ಇದೇ ಭಾನುವಾರ ಪ್ರಸಾರವಾಗಿದೆ. ಈ ಕಾರ್ಯಕ್ರಮದಲ್ಲಿ ಚಂದನವನದ ಎವರ್ ಗ್ರೀನ್ ತಾರೆ ಸುಧಾರಾಣಿಯವರಿಗೆ 'ಮನೆ ಮೆಚ್ಚಿದ ನಾಯಕಿ' ಗೌರವ ಪ್ರಶಸ್ತಿ ನೀಡಿ ವಾಹಿನಿ ಸನ್ಮಾನಿಸಿದೆ. ಪ್ರಶಸ್ತಿ ಸ್ವೀಕರಿಸಿದ ಸುಧಾರಾಣಿ ಭಾವುಕರಾಗಿದ್ದಾರೆ.
"ಮೊದಲನೆಯದಾಗಿ ಜೀ ಕುಟುಂಬಕ್ಕೆ ಅಂದ್ರೆ ನನ್ನ ಈ ಜೀ ಕುಟುಂಬಕ್ಕೆ ಇಂತಹ ಒಳ್ಳೆಯ ಪ್ರಶಸ್ತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಇದು ಮೊದಲನೇ ವರ್ಷ ಈ ಪ್ರಶಸ್ತಿಯನ್ನು ಶುರು ಮಾಡುತ್ತಿದ್ದಾರೆ. ಮೊದಲನೇ ವರ್ಷದಲ್ಲೇ ಇದು ನನಗೆ ಸಿಕ್ಕಿರುವಂತಹ ಒಂದು ಬಂಪರ್ ಬಹುಮಾನ ಅಂತ ಹೇಳ್ಬಹುದು. ಹಾಗಾಗಿ ತುಂಬಾ ಸಂತೋಷವಾಗಿದೆ" ಎಂದು ಹೇಳಿಕೊಂಡಿದ್ದಾರೆ.

"ಈ ಟ್ರೋಫಿಯ ರೆಪ್ರೆಸೆಂಟೇಷನ್ ಕೂಡಾ ತುಂಬಾ ಚೆನ್ನಾಗಿದೆ. ಒಬ್ಬ ಹೆಣ್ಣು ತನ್ನ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಿದ್ದಾಳೆ. ಅದೇ ರೀತಿ ಸಾಧಕರಿಗೆ ಅವರು ಸಾಧನೆ ಮಾಡಿದ್ದನ್ನು ಗುರುತಿಸಿ, ಅವರಿಗೆ ಇನ್ನು ಹೆಚ್ಚು ಬೆಂಬಲ, ಪ್ರೋತ್ಸಾಹ, ಉತ್ತೇಜನ ಕೊಟ್ಟು ನೀವಿನ್ನೂ ಮುಂದುವರಿರಿ ಅಂತ ಜನಗಳು ಪ್ರೀತಿ ವಿಶ್ವಾಸ ಅಭಿಮಾನ ತೋರಿಸುತ್ತಾರಲ್ಲ, ಅದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ. ಯಾರೇ ಸಾಧಕರಿರಲಿ ಅವರ ಸಾಧನೆಯನ್ನು ಗುರುತಿಸಿದಾಗ ಸಿಗುವ ಖುಷಿ ತುಂಬಾ ಮುಖ್ಯ" ಎಂದು ಸುಧಾರಾಣಿ ಹೇಳಿದ್ದಾರೆ.
ಇದರ ಜೊತೆಗೆ "ಎಷ್ಟೋ ಜನ ಮಹಿಳೆಯರಿಗೆ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗುವುದಿಲ್ಲ. ಅಥವಾ ಗುರುತಿಸಿಕೊಳ್ಳುವಂತಹ ಅವಕಾಶಗಳೇ ಜಾಸ್ತಿ ಒದಗಿಬರುವುದಿಲ್ಲ. ಅಂತದ್ರಲ್ಲಿ ಜೀ ಕುಟುಂಬ ಯಾವಾಗ್ಲೂ ವಿಭಿನ್ನವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಒಂದು ಹೊಸತನವನ್ನ ಕಾರ್ಯರೂಪಕ್ಕೆ ತರುತ್ತಾ ಇರುತ್ತಾರೆ. ಆ ನಿಟ್ಟಿನಲ್ಲಿ ಈ ಸ್ತ್ರೀ ಪ್ರಶಸ್ತಿ ನೀಡುತ್ತಿದ್ದಾರೆ. ಸೋ ಹೆಚ್ಚು ಹೆಚ್ಚು ಮಹಿಳೆಯರಿಗೆ ಈ ಪ್ರಶಸ್ತಿ ಸಿಗಲಿ. ಅವರು ಮಾಡುವಂತಹ ಕೆಲಸಕ್ಕೆ ಪ್ರೋತ್ಸಾಹ ಸಿಗಲಿ. ಆ ಸಾಲಿನಲ್ಲಿ ನನ್ನನ್ನು ಸೇರಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು " ಎಂದು ಪ್ರಶಸ್ತಿ ಪಡೆದು ಸುಧಾರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿಯಾಗಿ ನಟಿಸುತ್ತಿರುವ ಚಂದನವನದ ತಾರೆ ಇದೀಗ ಪೂರ್ಣ ಪ್ರಮಾಣದಲ್ಲಿ ಕಿರುತೆರೆ ನಟಿಯಾಗಿ ಮೋಡಿ ಮಾಡುತ್ತಿದ್ದಾರೆ. 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಲಾಯರ್ ಶಕುಂತಲಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಹಾಗೂ 'ಸೇವಂತಿ' ಧಾರಾವಾಹಿಯ ಮಹಾಸಂಗಮದಲ್ಲಿ ಈಕೆ ಅಭಿನಯಿಸಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿಯೂ ಅತಿಥಿ ಪಾತ್ರದ ಮೂಲಕ ಮಿಂಚಿದ್ದರು ನಟಿ ಸುಧಾರಾಣಿ. ಹೌದು, ಧಾರಾವಾಹಿಯಲ್ಲಿ ಅನುರಾಧಾ ಎಂಬ ಪಾತ್ರದಲ್ಲಿ ನಟಿಸಿದ್ದ ಸುಧಾರಾಣಿ ತುಳಸಿ ಪಾತ್ರದ ಮೂಲಕ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ ಸುಧಾರಾಣಿ .


Click it and Unblock the Notifications











