ಫಾಜಿಲ್ ಜೊತೆ ಫೋಟೋ: 'ನಮ್ಮನ್ನು ಆ ಗುಂಪಿಗೆ ಸೇರಿಸುವುದು ಸರಿಯಲ್ಲ'- ರಕ್ಷ್
'ಟಿವಿಗಳಲ್ಲಿ ಸುದ್ದಿ ನೋಡಿದ್ಮೇಲೆ ಈ ಶೇಖ್ ಫಾಜಿಲ್ ಯಾರು ಅಂತ ಇನ್ಸ್ಟಾಗ್ರಾಂನಲ್ಲಿ ಹುಡುಕಿದ್ದೀನಿ. ಶ್ರೀಲಂಕಾ ಪ್ರಧಾನಿ, ದೊಡ್ಡ ದೊಡ್ಡ ರಾಜಕಾರಣಿಗಳು, ಸಲ್ಮಾನ್ ಖಾನ್, ಶಾರೂಖ್ ಖಾನ್ ಹೀಗೆ ತುಂಬಾ ಜನರ ಜೊತೆ ಆತನ ಫೋಟೋ ಇದೆ. ಅವರಿಗೆಲ್ಲ ಅವನು ಡ್ರಗ್ಸ್ ಪೆಡ್ಲರ್ ಅಂತ ಗೊತ್ತಿತ್ತಾ, ಅವರೆಲ್ಲರನ್ನು ಪ್ರಶ್ನೆ ಮಾಡುವೀರಾ?'
'ಜೊತೆಯಲ್ಲಿ ಫೋಟೋ ಇದ್ದ ಮಾತ್ರಕ್ಕೆ ಅವರೆಲ್ಲರೂ ಡ್ರಗ್ಸ್ ತೆಗೆದುಕೊಳ್ತಾರೆ ಎನ್ನುವಂತೆ ಬಿಂಬಿಸುವುದು ಎಷ್ಟು ಸರಿ?' ಎಂದು 'ಗಟ್ಟಿಮಳ' ಖ್ಯಾತಿಯ ರಕ್ಷ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡುವಾಗ ಪ್ರಶ್ನಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಶೇಖ್ ಫಾಜಿಲ್ ಜೊತೆ ಕನ್ನಡ ಕಿರುತೆರೆಯ ಕಲಾವಿದರು ಕಾಣಿಸಿಕೊಂಡಿರುವ ಫೋಟೋ ಚರ್ಚೆಗೆ ಕಾರಣವಾಗಿತ್ತು. 'ಗಟ್ಟಿಮೇಳ' ಖ್ಯಾತಿಯ ರಕ್ಷ್, 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ, 'ರಾಧಾರಮಣ' ಖ್ಯಾತಿಯ ಶ್ವೇತಾ ಪ್ರಸಾದ್ ಸಹ ಇದ್ದರು. ಡ್ರಗ್ಸ್ ಪೆಡ್ಲರ್ ಜೊತೆ ಕಿರುತೆರೆ ನಟರು ಪಾರ್ಟಿ ಮಾಡಿದ್ದರು ಎಂಬ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ನಟ ರಕ್ಷ್ ಸ್ಪಷ್ಟನೆ ನೀಡಿದ್ದು, ಕೆಲವು ಪ್ರಶ್ನೆಗಳನ್ನು ಸಹ ಮುಂದಿಟ್ಟಿದ್ದಾರೆ. ಮುಂದೆ ಓದಿ....

ತಪ್ಪು ಅಂತಾ ಸಾಬೀತು ಪಡಿಸಿದ್ರೆ ಜೀತಕ್ಕೆ ಕೆಲಸ ಮಾಡ್ತೀನಿ
''ನನ್ನ ದೇಹದಲ್ಲಿ ಡ್ರಗ್ಸ್ ಬೇಡ ಗಾಂಜಾ ಸೇವಿಸಿರುವ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿರೂ ನಾನು ಇಂಡಸ್ಟ್ರಿ ಬಿಡ್ತೀನಿ. ಸಿಸಿಬಿ ಅಥವಾ ನಾರ್ಕೋಟಿಕ್ಸ್ ಅಧಿಕಾರಿಗಳು ಯಾರೇ ಬಂದು, ಎಂತಹ ಪರೀಕ್ಷೆಗೆ ಬೇಕಾದರೂ ನನ್ನನ್ನು ಒಳಪಡಿಸಲಿ, ನಾನು ಸಿದ್ಧನಿದ್ದೇನೆ. ನಾನು ಡ್ರಗ್ಸ್ ಅಥವಾ ಗಾಂಜಾ ಸೇವಿಸಿದ್ದೇನೆ ಅಂತ ಸಾಬೀತು ಪಡಿಸಿದರೆ ಅವರ ಮನೆಯಲ್ಲಿ ಜೀತಕ್ಕೆ ಕೆಲಸ ಮಾಡ್ತೀನಿ'' ಎಂದು ಪ್ರತಿಕ್ರಿಯಿಸಿದ್ದಾರೆ.

ಸುನೀಲ್ ಗವಾಸ್ಕರ್ ಜೊತೆ ಫೋಟೋ ಅದು
''ಟೈಮ್ಸ್ ಆಫ್ ಇಂಡಿಯಾ' ಎಂಬ ರಾಷ್ಟ್ರೀಯ ಸುದ್ದಿ ಮಾಧ್ಯಮ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ರು, ಹೋಗಿದ್ವಿ. ಅಲ್ಲೇ ಪಕ್ಕದಲ್ಲಿ ಬೇರೆ ಯಾವುದೋ ಕಾರ್ಯಕ್ರಮಕ್ಕೆ ಸುನೀಲ್ ಗವಾಸ್ಕರ್ ಬಂದಿದ್ದಾರೆ ಅಂತ ತಿಳಿತು. ಫೋಟೋ ತಗೊಳ್ಳೋಣ ಅಂತ ನಾವು ಹೋದ್ವಿ. ಅಲ್ಲಿ 15 ನಿಮಿಷ ಮಾತ್ರ ಇದ್ವಿ. ನಾವು ಆ ಫೋಟೋ ತಗೊಂಡಿರುವುದು ಸುನೀಲ್ ಗವಾಸ್ಕರ್ ಇದ್ದರು ಅಂತ, ಶೇಖ್ ಫಾಜಿಲ್ ಯಾರೂ ಅಂತಾನೇ ಗೊತ್ತಿಲ್ಲ. ಫೋಟೋ ಇತ್ತು ಎಂದ ಮಾತ್ರಕ್ಕೆ ನಮ್ಮನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಎಷ್ಟು ಸರಿ?'' ಎಂದು ಪ್ರಶ್ನಿಸಿದ್ದಾರೆ.

ತಪ್ಪು ಮಾಡಿಲ್ಲ ಅಂದ್ಮೇಲೆ ಹಿಂಜರಿಕೆ ಏಕೆ?
''ಹೌದು, ಡ್ರಗ್ಸ್ ವಿರುದ್ಧ ನಾನು ಮಾತಾಡಿದೆ, ಇಂಡಸ್ಟ್ರಿ ಮೇಲೆ ಡ್ರಗ್ಸ್ ಆರೋಪ ಬಂದಾಗ ಧೈರ್ಯವಾಗಿ ಮುಂದೆ ಬಂದು ಪ್ರತಿಕ್ರಿಯೆ ಕೊಟ್ಟೆ. ಏಕಂದ್ರೆ, ನಾನು ತಪ್ಪು ಮಾಡಿಲ್ಲ, ನನಗೆ ಯಾವ ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕ ಇಲ್ಲ, ಅದರ ಬಗ್ಗೆ ಗೊತ್ತಿಲ್ಲ. ಹಾಗಿದ್ಮೇಲೆ ಹಿಂಜರಿಕೆ ಏಕೆ?'' ಎಂದು ಕೇಳಿದ್ದಾರೆ.

ಆ ಫಾಜಿಲ್ ಯಾರೂ ಅಂತಾನೇ ಗೊತ್ತಿಲ್ಲ
'ಟಿವಿಗಳಲ್ಲಿ ಸುದ್ದಿ ನೋಡಿದ್ಮೇಲೆ ಈ ಶೇಖ್ ಫಾಜಿಲ್ ಯಾರು ಅಂತ ಹುಡುಕಿದ್ದೀನಿ. ಶ್ರೀಲಂಕಾ ಪ್ರಧಾನಿ, ಕರ್ನಾಟಕದ ದೊಡ್ಡ ದೊಡ್ಡ ರಾಜಕಾರಣಿಗಳು, ಸಲ್ಮಾನ್ ಖಾನ್, ಶಾರೂಖ್ ಖಾನ್ ಹೀಗೆ ತುಂಬಾ ಜನರ ಜೊತೆ ಆತನ ಫೋಟೋ ಇದೆ. ಅವರಿಗೆಲ್ಲ ಅವನು ಡ್ರಗ್ಸ್ ಪೆಡ್ಲರ್ ಗೊತ್ತಿತ್ತಾ, ಅವರೆಲ್ಲರನ್ನು ಪ್ರಶ್ನೆ ಮಾಡುವೀರಾ?'

ಜನರ ನಂಬಿಕೆ ಕಳೆದುಕೊಳ್ಳಲ್ಲ
''ಬಹಳ ಕಷ್ಟು ಪಟ್ಟು ಈ ಮಟ್ಟಕ್ಕೆ ಬೆಳೆದಿರುತ್ತೇವೆ. ನಮಗೂ ಮನೆ, ತಂದೆ-ತಾಯಿ ಇದ್ದಾರೆ. ಯಾವುದೇ ಆಧಾರವಿಲ್ಲದೇ ಇಂತಹ ಆರೋಪಗಳನ್ನು ಮಾಡಿದಾಗ ಎಲ್ಲರಿಗೂ ನೋವು ಉಂಟಾಗುತ್ತೆ. ನಮ್ಮ ಬಗ್ಗೆ ಜನ ಏನೂ ತಿಳಿದುಕೊಳ್ತಾರೆ? ನಮ್ಮ ಮೇಲೆ ಜನ ನಂಬಿಕೆ ಇಟ್ಟಿರುತ್ತಾರೆ. ಆ ನಂಬಿಕೆಗೆ ದ್ರೋಹ ಮಾಡುವ ವ್ಯಕ್ತಿ ನಾನಲ್ಲ. ಮಾಡೋರು ಇದ್ದರೆ, ನಮ್ಮನ್ನು ಆ ಗುಂಪಿನಲ್ಲಿ ಸೇರಿಸುವುದು ಸರಿಯಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











