ಬಾಲನಟಿಯಾಗಿ ಮಿಂಚಿದ್ದ ಈ ನಟಿ ಕಿರುತೆರೆಯಲ್ಲೂ ಫೇಮಸ್? ಸಂಗೀತಾ ನಟಿಸಿದ ಧಾರಾವಾಹಿಗಳು ಲಿಸ್ಟ್ ದೊಡ್ಡದಿದೆ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಸೇವಂತಿ'ಯೂ ಕೂಡಾ ಒಂದು. 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್‌ನ ಅಮ್ಮನಾಗಿ ನಟಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆಯ ಹೆಸರು ಸಂಗೀತಾ ಅನಿಲ್. ಅಂದ ಹಾಗೇ ಸಂಗೀತಾ ಅನಿಲ್ ಅಚರ ನಟನಾ ಪಯಣಕ್ಕೆ ಮುನ್ನುಡಿ ಬರೆದುದು ಹಿರಿತೆರೆ. ಹೌದು, ಬಾಲನಟಿಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸಂಗೀತಾ ಅನಿಲ್ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
'ನೀ ನನ್ನ ಗೆಲ್ಲಲಾರೆ', 'ನಾಗ ಕಾಳಭೈರವ' ಸಿನಿಮಾದಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿರುವ ಸಂಗೀತಾ ಅವರು ಮೊದಲು ನಾಯಕಿಯಾಗಿ ನಟಿಸಿದ್ದು 'ಕಾವೇರಿ ತೀರದಲ್ಲಿ' ಸಿನಿಮಾದಲ್ಲಿ. ಅಂದ ಹಾಗೇ ಸಂಗೀತಾ ಅವರು ಮೊದಲ ಬಾರಿ ನಾಯಕಿಯಾಗಿ ನಟಿಸಿದಾಗ ಆಕೆಗೆ ಬರೀ ಹದಿನೈದು ವರ್ಷ. ನಂತರ ಒಂದೆರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಈಕೆ ನಂತರ ನಟನೆಯಿಂದ ದೂರ ಉಳಿದಿದ್ದರು.

ಸದ್ಯ ಪೋಷಕ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಸಂಗೀತಾ ಅನಿಲ್ ಅವರ ಕಿರುತೆರೆ ಪಯಣ ಶುರುವಾಗಿದ್ದು ಜನನಿ ಧಾರಾವಾಹಿಯ ಮೂಲಕ. ಆರ್. ಎನ್. ಜಯಗೋಪಾಲ್ ನಿರ್ದೇಶನದ 'ಜನನಿ' ಧಾರಾವಾಹಿಯಲ್ಲಿ ಹೇಮಾಳಾಗಿ ಕಾಣಿಸಿಕೊಂಡಿದ್ದ ಈಕೆ ನಂತರ ನಟಿಸಿದ್ದು ಸುಧಾಕರ ಭಂಡಾರಿ ಅವರ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ.
ಮುಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗತ್ತಿದ್ದ 'ಬದುಕು' ಧಾರಾವಾಹಿಯಲ್ಲಿ ನಟಿಸಿದ ಈಕೆ ಬರೋಬ್ಬರಿ ಮೂರು ವರ್ಷಗಳ ಕಾಲ ಆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ನಂತರ 'ದಂಡಪಿಂಡಗಳು', 'ಭಾಗೀರಥಿ', 'ಜಗಳಗಂಟಿಯರು' ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಸಂಗೀತಾ ಅನಿಲ್ ಮದುವೆ, ಮಕ್ಕಳು, ಸಂಸಾರದ ಸಲುವಾಗಿ ಕಿರುತೆರೆಯಿಂದ ದೂರವಿದ್ದರು.

ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಂತಿ ನಿಮ್ಮ ಆಶಾ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿರುವ ಈಕೆ ಟೈಟಲ್ ಪಾತ್ರದಲ್ಲಿ ನಟಿಸಿದ್ದು ವಿಶೇಷ. ನಂತರ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಟಿಸಿದ ಈಕೆ 'ಸೇವಂತಿ' ಧಾರಾವಾಹಿಯಲ್ಲಿ ನಾಯಕನ ಅಮ್ಮನಾಗಿ ಮೋಡಿ ಮಾಡುತ್ತಿದ್ದಾರೆ.
ಇದರ ಜೊತೆಗೆ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ನಾಯಕನ ಅಮ್ಮ ದೇವಯಾನಿಯಾಗಿ ಈಕೆ ಬಣ್ಣ ಹಚ್ಚಿದ್ದರು. ಧಾರಾವಾಹಿ ಆರಂಭವಾದಾಗ ಸ್ಪರ್ಶ ರೇಖಾ ಅವರು ದೇವಯಾನಿಯಾಗಿ ಕಾಣಿಸಿಕೊಂಡಿದ್ದರು. ನಂತರ ಕಾರಣಾಂತರಗಳಿಂದ ಅವರು ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಸಂಗೀತಾ ಅನಿಲ್ ಕಾಲಿಟ್ಟಿದ್ದರು.
ಇನ್ನು 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿಯೂ ಅಷ್ಟೇ. ನಾಯಕನ ಅಮ್ಮ ಶಾಂತಲಾ ಆಗಿ ಅಭಿನಯಿಸುತ್ತಿದ್ದ ಅಭಿನಯ ಅವರು ಇದ್ದಕ್ಕಿದ್ದಂತೆ ಪಾತ್ರಕ್ಕೆ ವಿದಾಯ ಹೇಳಿದ ಕಾರಣ ಆ ಜಾಗಕ್ಕೂ ಸಂಗೀತಾ ಅನಿಲ್ ಬಂದರು. ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸಂಗೀತಾ ಅನಿಲ್ ಅವರ ಕಲಾ ಪಯಣ ಎಲ್ಲೂ ನಿಲ್ಲದೆ ಸಾಗುತ್ತಿದೆ.


Click it and Unblock the Notifications