ಮಗಳಿಗೆ ಕಣ್ಣಿಲ್ಲವೆಂದು ಅಪ್ಪ ಆತ್ಮಹತ್ಯೆ: ಛಲ ಬಿಡದೆ ಸಾಧಿಸಿ ತೋರಿಸಿದ ಮಗಳು
'ರಾಗ' ಸಿನಿಮಾದಲ್ಲಿ ಒಂದು ಸಂಭಾಷಣೆ ಇದೆ. ''ದೃಷ್ಟಿ ಇಲ್ಲದೆ ಇರುವವರು ಕುರುಡರಲ್ಲ. ದೂರ ದೃಷ್ಟಿ ಇಲ್ಲದೆ ಇರುವವರು ಕುರುಡರು'' ಅಂತ ಆ ಮಾತನ್ನು ನಿಜ ಮಾಡಿ ತೋರಿಸಿದ್ದಾಳೆ ಸಂಗೀತ ಎನ್ನುವ ಪುಟ್ಟ ಹುಡುಗಿ.
ಅಂದಹಾಗೆ, ನಾವು ಹೇಳುತ್ತಿರುವುದು ಯಾವ ಸಂಗೀತ ಬಗ್ಗೆ ಎಂದು ಯೋಚನೆ ಮಾಡುತ್ತಿದ್ದೀರ?, ಸಂಗೀತ 'ಸರಿಗಪಮ' ಕಾರ್ಯಕ್ರಮದ ಸೀಸನ್ 16ಕ್ಕೆ ಆಯ್ಕೆ ಆಗಿರುವ ಸ್ಪರ್ಧಿ. ಕಾರ್ಯಕ್ರಮದ ಮೆಗಾ ಆಡಿಷನ್ ನ ಮೂರನೇ ಸ್ಪರ್ಧಿಯಾಗಿ ಬಂದ ಸಂಗೀತ ತನ್ನ ಹಾಡಿನ ಮೂಲಕ ಮೂರೂ ತೀರ್ಪುಗಾರರಿಂದ ಗ್ರೀನ್ ಸಿಗ್ನಲ್ ಪಡೆದರು.
ಎರಡೂ ಕಣ್ಣುಗಳು ಇಲ್ಲದೆ, ತಂದೆಯನ್ನೂ ಕಳೆದುಕೊಂಡ ಈ ಹುಡುಗಿಯ ಉತ್ಸಾಹ ನೋಡಿದರೆ ನಿಜಕ್ಕೂ ಖುಷಿ ಆಗುತ್ತದೆ. ಮುಂದೆ ಓದಿ...

ಗದಗದ ಹುಡುಗಿ ಸಂಗೀತ
ಗದಗ ಜಿಲ್ಲೆಯ ಸಂಗೀತ ಎಂಬ ಹುಡುಗಿ ಈಗ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಪ್ಸ್ ಸೀಸನ್ 16ಕ್ಕೆ ಆಯ್ಕೆ ಆಗಿದ್ದಾರೆ. 7ನೇ ತರಗತಿ ಓದುತ್ತಿರುವ ಈ ಹುಡುಗಿಗೆ ಎರಡು ಕಣ್ಣು ಕಾಣುವುದಿಲ್ಲ ಎನ್ನುವುದು ದುಃಖದ ಸಂಗತಿ.

ವಿಷ ಕುಡಿದು ತಂದೆ ಆತ್ಮಹತ್ಯೆ
ಸಂಗೀತ ತಂದೆಗೆ ಮೂರು ಜನ ಹೆಣ್ಣು ಮಕ್ಕಳು. ತನಗೆ ಮೂರೂ ಜನ ಹೆಣ್ಣು ಮಕ್ಕಳು ಹುಟ್ಟಿದರು, ಮೂರನೇ ಮಗಳು ಸಂಗೀತಗೆ ಕಣ್ಣು ಕಾಣುವುದಿಲ್ಲ ಎನ್ನುವ ಕಾರಣಕ್ಕೆ ಆತ ವಿಷ ಕುಡುದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮೂರು ಹೆಣ್ಣು ಮಕ್ಕಳನ್ನು ಕೈ ಬಿಟ್ಟು ದೂರ ಹೋಗುತ್ತಾನೆ.

ಛಲ ಬಿಡಲಿಲ್ಲ ಸಂಗೀತ
ತಂದೆಯನ್ನು ಕಳೆದುಕೊಂಡ ಸಂಗೀತ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಾಳೆ. ಜೀವನದ ದಾರಿಯಲ್ಲಿ ತಾನೇ ನಡೆಯಲು ಕಣ್ಣುಗಳು ಇಲ್ಲ, ಕೈ ಹಿಡಿದು ಕರೆದುಕೊಂಡು ಹೋಗಲು ತಂದೆ ಇಲ್ಲ. ಆದರೂ, ಸಂಗೀತ ತನ್ನ ಛಲ ಬಿಡಲಿಲ್ಲ. ಎಲ್ಲ ಕಷ್ಟಗಳನ್ನು ಎದುರಿಸಿದ ಈ ಹುಡುಗಿ ಈಗ ಕರ್ನಾಟಕದ ಜನಪ್ರಿಯ ಶೋಗೆ ಆಯ್ಕೆ ಆಗಿ ಅಚ್ಚರಿ ಮೂಡಿಸಿದ್ದಾಳೆ.

ಸಂಗೀತ ಜೀವನೋತ್ಸಹಕ್ಕೆ ಸಲಾಮ್
ತಂದೆಯೂ ಇಲ್ಲ.. ಕಣ್ಣುಗಳು ಇಲ್ಲ... ಆದರೂ ಈ ಹುಡುಗಿ ಯಾವುದಕ್ಕೂ ದುಃಖ ಪಡುವುದಿಲ್ಲ. ಜೀವನವನ್ನು ಆಕೆ ಸ್ವೀಕರಿಸಿರುವ ರೀತಿ, ಆಕೆಯ ಜೀವನೋತ್ಸಹ ನಿಜಕ್ಕೂ ಅದ್ಭುತ. ಸರಿಗಮಪ ಕಾರ್ಯಕ್ರಮದಲ್ಲಿ 'ಪವಮಾನ ಪವಮಾನ...' ಹಾಡಿನ ಮೂಲಕ ತನ್ನ ಸಂಗೀತ ಸ್ವರ ಸಿಂಚನ ಶುರು ಮಾಡಿರುವ ಈ ಹುಡುಗಿಗೆ ಯಶಸ್ಸು ಸಿಗಲಿ.


Click it and Unblock the Notifications











