ನನ್ನದೇ ರೀತಿಯಲ್ಲಿ ನಟಿಸಲು ಇಷ್ಟ: ದೀಪಿಕಾ ಪಾತ್ರ ಫೇವರಿಟ್ ಎಂದ ಸಾರಾ ಅಣ್ಣಯ್ಯ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿ ಮುಗಿದು ಈಗಾಗಲೇ ತಿಂಗಳುಗಳು ಕಳೆದಿದೆ. 'ಕನ್ನಡತಿ' ಧಾರಾವಾಹಿಯ ವರೂಧಿನಿ ಆಗಿ ಕರ್ನಾಟಕದಾದ್ಯಂತ ಗುರುತಿಸಿಕೊಂಡಿರುವ ಸಾರಾ ಅಣ್ಶಯ್ಯ ಈಗ ದೀಪಿಕಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.
'ಕನ್ನಡತಿ' ಧಾರಾವಾಹಿ ಹಾಗೂ 'ನಮ್ಮ ಲಚ್ಚಿ' ಧಾರಾವಾಹಿಯ ಪ್ರೊಡಕ್ಷನ್ ಹೌಸ್ ಒಂದೇ . ಹಾಗಾಗಿ 'ನಮ್ಮ ಲಚ್ಚಿ' ಧಾರಾವಾಹಿಯ ದೀಪಿಕಾ ಪಾತ್ರವೂ ಸಿಗುತ್ತಿದ್ದಂತೆಯೇ ಬಹಳ ಖುಷಿಯಿಂದ ಒಪ್ಪಿಕೊಂಡರು ಸಾರಾ ಅಣ್ಣಯ್ಯ. 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ದೀಪಿಕಾ ಪಾತ್ರವೂ ಬಹಳ ಮೃದು ಸ್ವಭಾವದ್ದಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ಆಗಿರುವ ಹುಡುಗಿಯ ಜೀವನದ ಕಥೆಯಿದು. ದೀಪಿಕಾ ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಮನ ಸೆಳೆದಿರುವ ಸಾರಾ ಅಣ್ಣಯ್ಯ ಬೆಸ್ಟ್ ಪರ್ಫಾರ್ಮೆನ್ಸ್ ಅನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ.

ನನ್ನದೇ ರೀತಿಯಲ್ಲಿ ನಟಿಸಲು ಇಷ್ಟಪಡುತ್ತೇನೆ
'ನಮ್ಮ ಲಚ್ಚಿ' ಧಾರಾವಾಹಿ ಬೇರೆ ಭಾಷೆಯದಾಗಿದ್ದು, ಅದನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ. ಸಾರಾ ಅಣ್ಣಯ್ಯ ಮೂಲ ಧಾರಾವಾಹಿಯನ್ನು ನೋಡುವುದಿಲ್ಲ ಎಂದು ನಿರ್ಧರಿಸಿ ಬಿಟ್ಟಿದ್ದಾರೆ. ಯಾಕೆಂದರೆ, ಸಾರಾ ಅವರಿಗೆ ಅವರ ತರದಲ್ಲೇ ಈ ಪಾತ್ರವನ್ನು ನಿಭಾಯಿಸಲು ಇಷ್ಟಪಟ್ಟಿದ್ದಾರೆ. ಬೇರೆಯವರು ಈ ಪಾತ್ರಕ್ಕೆ ನಟಿಸಿರುವುದನ್ನು ನೋಡಿದಾಗ ನಮಗೆ ಗೊತ್ತಾಗದಂತೆ ಅವರ ನಟನಾಶೈಲಿಯನ್ನು ಅಳವಡಿಸಿಕೊಳ್ಳುವ ಅಥವಾ ಇಫ್ಲ್ಯುಯೆನ್ಸ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಸಾರಾ ಅವರ ಅಂಬೋಣ.
ಮಕ್ಕಳಿಂದ ಕಲಿಯುವುದು ಬಹಳಷ್ಟಿದೆ
ದೀಪಿಕಾ ಪಾತ್ರದಲ್ಲಿ ಅಭಿನಯಿಸುವ ಸಮಯದಲ್ಲಿ ಮಕ್ಕಳೊಡನೆ ಒಡನಾಟ ಹೆಚ್ಚಾಗಿದ್ದು ಅದು ಸಾರಾ ಅವರ ಮನಸ್ಸಿಗೆ ಖುಷಿಯನ್ನು ತಂದಿದೆ. ಮಕ್ಕಳೊಡನೆ ನಟಿಸುವಾಗ ಬಹಳಷ್ಟು ತಾಳ್ಮೆ ಇರಬೇಕಾಗುತ್ತದೆ. ಎಷ್ಟೋ ಬಾರಿ ಅವರಿಂದಲೂ ಕಲಿಯುವಂತದ್ದು ಬಹಳಷ್ಟಿರುತ್ತದೆ ಎಂಬುದು ಸಾರಾ ಅಣ್ಣಯ್ಯ ಅವರ ಅನುಭವದ ಮಾತು.
ದೀಪಿಕಾ ಪಾತ್ರ ಖುಷಿ ತಂದಿದೆ ಎಂದ ಸಾರಾ
ಮಕ್ಕಳ ಮುಗ್ಧತೆ ಎಲ್ಲಾ ನೋವುಗಳನ್ನು ಮರೆಸುತ್ತದೆ. ಸೆಟ್‌ನಲ್ಲಿ ಮಕ್ಕಳು ಅತ್ತಿತ್ತ ಆಡಿಕೊಂಡು ಇರುವಾಗ ಎಲ್ಲರ ಮನಸ್ಸು ತಿಳಿಯಾಗುತ್ತದೆ. ಮಕ್ಕಳೊಡನೆ ಬಾಂಧವ್ಯ ಹೆಚ್ಚುತ್ತದೆ . ಧಾರಾವಾಹಿಯಲ್ಲಿ ದೀಪಿಕಾ ಪಾತ್ರಧಾರಿ ತನ್ನ ಮಗಳನ್ನು ತುಂಬಾನೇ ಪ್ರೀತಿಸುತ್ತಾಳೆ. ಅದೇ ಕಾರಣದಿಂದಲೋ ಏನೋ ಈ ಪಾತ್ರ ತುಂಬಾ ಹಿಡಿಸಿತು ಎನ್ನುತ್ತಾರೆ ಸಾರಾ ಅಣ್ಣಯ್ಯ.

'ನಮ್ಮ ಲಚ್ಚಿ' ಧಾರಾವಾಹಿಯ ಎಲ್ಲಾ ಕಲಾವಿದರೂ ಬಹಳ ಆತ್ಮೀಯರಾಗಿದ್ದಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸುವಾಗ ಸಾರಾ ಅವರಿಗೆ ಕಲಾವಿದರೊಂದಿಗೆ ಹೊಂದಿಕೊಳ್ಳುವುದು ಮೊದಮೊದಲಿಗೆ ಸ್ವಲ್ಪ ಕಷ್ಟವಾಗಿತ್ತು, ಆದರೆ ಇಲ್ಲಿ ಹಾಗಾಗಲಿಲ್ಲ ಎನ್ನುತ್ತಾರೆ ಸಾರಾ.


Click it and Unblock the Notifications











