'ಯುಗಾದಿ ಸ್ವರ ಸಂಭ್ರಮ' - ಬೇವು ಬೆಲ್ಲದ ಜೊತೆಗೆ ಸರಿಗಮಪ
'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ..' ಅನ್ನುವ ಸಾಲು ನಿಜವೆಂಬತೆ ಈ ಬಾರಿಯ ಯುಗಾದಿ ಹಬ್ಬವನ್ನು ಮತ್ತಷ್ಟು ಹುರುಪಿನಿಂದ,ಹುರುಷದಿಂದ ಹಾಗೂ ಹೊಸತನದಿಂದ ಆಚರಿಸಲು ಜೀ ಕನ್ನಡ ವಾಹಿನಿ ಎಲ್ಲಾ ಸಿದ್ದತೆಯನ್ನು ನಡೆಸಿದೆ.
ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮದ ಮೂಲಕ ಯುಗಾದಿ ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಲು ಸರಿಗಮಪ ಗಾನ ಕೋಗಿಲೆಗಳು ನಿಮ್ಮ ಮನೆಗೆ ಬರುತ್ತಿದ್ದಾರೆ. ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8:00 ಗಂಟೆಯಿಂದ 11:00 ಗಂಟೆಯವರೆಗೂ ಹಬ್ಬದ ಆಚರೆಣೆಯ ಜೊತೆಗೆ ಸಂಗೀತ ಸಂಜೆಯಲ್ಲಿ ಮಿಂದೇಳಲು ನೀವೆಲ್ಲಾ ತಯಾರಾಗಿ.
ಅಂದಹಾಗೆ, ಸರಿಗಮಪ ಕಾರ್ಯಕ್ರಮದ ಯುಗಾದಿ ಹಬ್ಬಕ್ಕೆ ಮತ್ತಷ್ಟು ವಿಶೇಷತೆಗಳ ಜೊತೆಗೆ ಬಂದಿದೆ. ಮುಂದೆ ಓದಿ...

ಯುಗಾದಿ ಸ್ವರ ಸಂಭ್ರಮ
ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ಮಹಾ ಗುರುಗಳಾದ ಹಂಸಲೇಖ ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮಕ್ಕೆ ಮತ್ತಷ್ಟು ಸಿಹಿಯನ್ನು ತುಂಬಲಿದ್ದಾರೆ. ಕಾರ್ಯಕ್ರಮ ಅನುಶ್ರೀ ಅವರ ಅದ್ಭುತ ನಿರೂಪಣೆಯಲ್ಲಿ ಮೂಡಿಬರಲಿದ್ದು, ಕಾರ್ಯಕ್ರಮದಲ್ಲಿ ಸರಿಗಮಪ ಸೀಸನ್ 16 ರ ಪುಟಾಣಿಗಳು ಭಾಗವಹಿಸಲಿರುವುದು ವಿಶೇಷ.

ಹಳೆಯ ಸ್ಪರ್ಧಿಗಳ ಹಾಡುಗಳು
ಇನ್ನುಳಿದಂತೆ, ಸರಿಗಮಪ ಸೀಸನ್ 15ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಮೋಡಿ ಮಾಡಿದ ಕೀರ್ತನ್ ಹೊಳ್ಳ, ನಿಹಾಲ್ ತಾವ್ರೋ, ವಿಜೇತ್, ಹನುಮಂತ ಹಾಗೂ ಹಳೆಯ ಸ್ಪರ್ಧಿಗಳಾದ ಚೆನ್ನಪ್ಪ, ಸುನೀಲ್ ಹಾಗೂ ಇನ್ನಿತರು ಸಹ ತಮ್ಮ ಸುಮಧುರ ಗಾಯನದ ಮೂಲಕ ಎಲ್ಲರಿಗೂ ಭರಪೂರ ಮನರಂಜನೆ ನೀಡಲಿದ್ದಾರೆ. ಇನ್ನೂ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಕೇವಲ ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅವರು ಸಹ ತಮ್ಮ ವಿಶೇಷ ಹಾಡುಗಳ ಮೂಲಕ ಗಾನ ಸುಧೆಯನ್ನು ಹರಿಸಿಲಿದ್ದಾರೆ.

ಅನುಶ್ರೀ ನೃತ್ಯ ಪ್ರದರ್ಶನ
ಅನುಶ್ರೀ ಅವರ ನೃತ್ಯ ಪ್ರದರ್ಶನ ಸಹ ಮತ್ತಷ್ಟು ಮನರಂಜನೆ ನೀಡಲಿದೆ. ಇನ್ನು ಸರಿಗಮಪ ಸೀಸನ್ 15ರ ರನ್ನರ್ ಅಪ್ ಆಗಿದ್ದ ಹನುಮಂತ ಅವರು ಈ ಬಾರಿಯ ಎಲೆಕ್ಷನ್ ಕಮಿಷನ್ ರಾಯಭಾರಿಯಾಗಿ ನೇಮಕಗೊಂಡಿದ್ದು ಹಾವೇರಿ ಜಿಲ್ಲೆಯಲ್ಲಿ ಎಲ್ಲರಿಗೂ ಮತದಾನದ ಬಗ್ಗೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಾರ್ಯಕ್ರಮದಲ್ಲಿ ದೊರೆಯಲಿದೆ.

ಇದೇ ಶನಿವಾರ ಹಾಗೂ ಭಾನುವಾರ
ಇಷ್ಟೆಲ್ಲಾ ವಿಶೇಷತೆಗಳನ್ನು ಹೊತ್ತಿರುವ ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ನಡೆದಿದ್ದು, ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8:00ಗಂಟೆಗೆ ನಿಮ್ಮ ನೆಚ್ಚಿನ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











