Sathya serial: ಗೂಂಡಾಗಳನ್ನು ಕರೆಸಿದ ದಿವ್ಯಾಳ ಬಗ್ಗೆ ಸತ್ಯ ಅರಿತ ಬಾಲ
ಸತ್ಯ ಧಾರಾವಾಹಿಯಲ್ಲಿ ಮನೆಗೆ ನಚಿಕೇತನ್ ಮತ್ತು ಪದ್ಮಾ ಬಂದಿರುವುದಕ್ಕೆ ಲಕ್ಷ್ಮಣನಿಗೆ ಕೋಪದ ಜೊತೆಗೆ ಎಲ್ಲಿ ಎಲ್ಲರಿಗೂ ಸತ್ಯ ಗೊತ್ತಾಗುತ್ತದೆಯೋ ಎಂಬ ಟೆನ್ಷನ್ ಕೂಡ ಇದೆ.
ಪದ್ಮಾಳಿಗೆ ಕೊನೆಗೂ ತಾನು ತನ್ನ ಗಂಡನ ಮನೆಯನ್ನು ಸೇರಿದ್ದಾಯ್ತು ಎಂಬ ನೆಮ್ಮದಿಯಲ್ಲಿದ್ದಾಳೆ. ಅವಳಿಗೆ ತನಗಿಂತಲೂ ತನ್ನ ಮಗನಿಗೆ ಆಶ್ರಯ ಸಿಕ್ಕಿದೆ ಎಂಬ ಖುಷಿ ಇದೆ.

ಇನ್ನು ಮನೆಯಲ್ಲಿ ಎಲ್ಲರೂ ಕೂಡ ಪದ್ಮಾ ಹಾಗೂ ನಚಿಕೇತನ್‌ನನ್ನು ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲೂ ಮುಜುಗರವಾಗದಂತೆ ನಡೆದುಕೊಳ್ಳುತ್ತಿದ್ದಾರೆ.
ನಚಿಕೇತನ್ ಬಗ್ಗೆ ಪ್ರಶ್ನಿಸಿದ ಸತ್ಯ
ಲಕ್ಷ್ಮಣ ನೀರಿನಿಂದ ಹೊರಗೆ ಬಿದ್ದ ಮೀನಿನಂತಾಗಿದ್ದಾನೆ. ನಚಿಕೇತನ್‌ನನ್ನು ನೋಡಿಯೂ ಮಾತನಾಡಿಸದಂತಹ ಪರಿಸ್ಥಿತಿ ಅವನದ್ದು. ಹೀಗಾಗಿ ನಚಿಕೇತನ್ ಒಬ್ಬನೇ ರೂಮಿನಲ್ಲಿ ಆಡಿಕೊಳ್ಳುವಾಗ ಲಕ್ಷ್ಮಣ ಹೋಗಿ ರೂಮ್ ಬಾಗಿಲನ್ನು ಹಾಕಿ ಮಗನ ಜೊತೆಗೆ ಮಾತನಾಡುತ್ತಾನೆ. ಇದನ್ನು ಗಮನಿಸುವ ಸತ್ಯ, ಲಕ್ಷ್ಮಣನನ್ನು ಪ್ರಶ್ನೆ ಮಾಡುತ್ತಾಳೆ. ನಚಿಕೇತನ್ ನಿಮಗೆ ಮೊದಲೇ ಗೊತ್ತಾ.? ಅವನ ರೂಮಿಗೆ ಯಾಕೆ ಹೋಗಿದ್ದು ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ. ಇದು ಲಕ್ಷ್ಮಣನಿಗೆ ಮುಜುಗರವನ್ನುಂಟು ಮಾಡುತ್ತದೆ. ಬಳಿಕ ಸತ್ಯ ಮೇಲೆ ಕೂಗಾಡುತ್ತಾನೆ.
ಹೊಸ ವ್ಯಾಪಾರಕ್ಕೆ ಕೈ ಹಾಕಿದ ಬಾಲ
ಇತ್ತ ಬಾಲ ಬೋಂಡಾ ಅಂಗಡಿ ಲಾಭದಲ್ಲಿ ನಡೆಯುತ್ತಿದೆ. ಸಂಜೆ ಮೇಲೆ ಬೋಂಡಾ ಅಂಗಡಿ ಇಟ್ಟಿರುವ ಬಾಲನಿಗೆ ಬೆಳಗ್ಗೆ ಹೊತ್ತು ಏನೂ ಕೆಲಸವಿಲ್ಲ. ಹೀಗಾಗಿ ಬಾಲ ಬೆಳಗ್ಗೆ ತರಕಾರಿ ಮಾರಾಟ ಮಾಡಿ ಹಣ ಸಂಪಾದಿಸಬೇಕು ಎಂದುಕೊಂಡಿದ್ದಾನೆ. ಈ ಬಗ್ಗೆ ಮನೆಯವರ ಬಳಿಯೂ ಮಾತನಾಡುತ್ತಾರೆ. ಮಾರ್ಕೆಟ್ ಎಲ್ಲಾ ತಿರುಗಾಡಿ ತರಕಾರಿಗಳನ್ನು ಎಲ್ಲಿ ಖರೀದಿಸುವುದು, ವ್ಯಾಪಾರ ಹೇಗೆ ಶುರು ಮಾಡುವುದು ಎಂಬ ಮಾಹಿತಿ ಪಡೆಯುತ್ತಾನೆ. ಬಾಲನ ಏಳಿಗೆಯನ್ನು ಕಂಡು ಜಾನಕಿ ಮತ್ತು ಗಿರಿಜಾ ಇಬ್ಬರೂ ಖುಷಿ ಪಡುತ್ತಾರೆ. ಇಬ್ಬರೂ ಕೂಡ ಚಾಮುಂಡಿ ಬೆಟ್ಟಕ್ಕೆಂದು ಹೊರಡುತ್ತಾರೆ.

ಗೂಂಡಾಗಳನ್ನು ಕರೆಸಿದ ದಿವ್ಯಾ
ಬಾಲ ಬೊಂಡಾ ಅಂಗಡಿಯನ್ನು ಇಟ್ಟಿರುವುದೇ ದಿವ್ಯಾಳಿಗೆ ಇಷ್ಟವಿರುವುದಿಲ್ಲ. ಅಂತಹದರಲ್ಲಿ ಈಗ ಬಾಲ ತರಕಾರಿ ವ್ಯಾಪಾರ ಬೇರೆ ಶುರು ಮಾಡಲು ಮುಂದಾಗಿದ್ದಾನೆ. ದಿವ್ಯಾ ಇದಕ್ಕೆ ಬೈದಿರುತ್ತಾಳೆ. ಜೊತೆಗೆ ದಿವ್ಯಾ ಯಾರಿಗೂ ಹೇಳದೆಯೇ ಗೂಂಡಾಗಳನ್ನು ಕರೆಸಿ ರಾತ್ರಿ ಬೋಂಡಾ ಅಂಗಡಿಯನ್ನು ಸುಡಲು ಪ್ಲಾನ್ ಮಾಡಿರುತ್ತಾಳೆ. ದಿವ್ಯಾ ಮಧ್ಯರಾತ್ರಿಯಲ್ಲಿ ಆಚೆ ಎದ್ದು ಹೋದಾಗ ಬಾಲನಿಗೆ ಸತ್ಯ ಗೊತ್ತಾಗುತ್ತದೆ. ಗೂಂಡಾಗಳ ಜೊತೆಗೆ ಬಾಲ ಹೋರಾಡಿ ತನ್ನ ಅಂಗಡಿಯನ್ನು ಉಳಿಸಿಕೊಳ್ಳುತ್ತಾನೆ. ಆದರೆ, ದಿವ್ಯಾನೇ ಗೂಂಡಾಗಳನ್ನು ಕರೆಸಿದ್ದು, ಎಂದು ತಿಳಿದು ಅವನಿಗೆ ಬಹಳ ಬೇಸರವಾಗುತ್ತದೆ.
ದಿವ್ಯಾಳ ಮೇಲಿನ ನಂಬಿಕೆ ಕಳೆದುಕೊಂಡ ಬಾಲ
ಮನೆಗೆ ಬಂದಾಗ ದಿವ್ಯಾ ತನಗೇನು ಗೊತ್ತಿಲ್ಲದಂತೆ ನಟಿಸುತ್ತಾಳೆ. ಆದರೆ, ಬಾಲ ಮನೆಯಲ್ಲಿ ಅಜ್ಜಿ-ಅಮ್ಮ ಇದ್ದಿದ್ದರೆ, ನಿನ್ನ ಈಗಲೇ ಹೊರಗೆ ಕಳಿಸಿರೋರು. ನನ್ನ ಕನಸಿನ ಅಂಗಡಿಯನ್ನ ಸುಡೋದಕ್ಕೆ ರೌಡಿಗಳನ್ನು ಕರೆಸಿದ್ದೀಯಾ. ಅವರ ಬಳಿ ನನಗೆ ಹೊಡೆಯಲು ಹೇಳಿಕೊಡುತ್ತೀಯಾ. ನಿನ್ನ ಮೇಲಿದ್ದ ಪ್ರೀತಿಯೆಲ್ಲವೂ ಇಂದಿಗೆ ನಾಶವಾಯ್ತು. ನಿನ್ನ ಮೇಲೆ ನಾನಿಟ್ಟಿದ್ದ ನಂಬಿಕೆ ಎಲ್ಲಾ ಸುಳ್ಳಾಗಿ ಹೋಯ್ತು ಎಂದು ಬೈಯುತ್ತಾನೆ.
ದಿವ್ಯಾಳಿಗೆ ಶುರುವಾಯಿತು ಚಿಂತೆ
ಬಾಲನಿಗೆ ದಿವ್ಯಾ ನಡವಳಿಕೆ ಬಹಳ ಬೇಸರವನ್ನು ಉಂಟು ಮಾಡಿರುತ್ತದೆ. ಹೀಗಾಗಿ ದಿವ್ಯಾಳಿಗೆ ಬೈಯುತ್ತಾನೆ. ಈಗ ದಿವ್ಯಾಳಿಗೆ ಈ ವಿಚಾರ ಅಮ್ಮನಿಗೆ ಗೊತ್ತಾದರೆ, ತನ್ನನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ.


Click it and Unblock the Notifications











