Sathya: ಮಗನ ಮಾತಿಗೆ ಕರಗಿದ ಸೀತಾ: ಕೊನೆಗೂ ಸೊಸೆ ಸತ್ಯಳ ಆಸೆಗೆ ಒಪ್ಪಿಗೆ ನೀಡಿದ ಅತ್ತೆ
ಸತ್ಯ ಧಾರಾವಾಹಿಯಲ್ಲಿ ಬಿಡುವು ಮಾಡಿಕೊಂಡ ಲಕ್ಷ್ಮಣ, ರಿತು ಬಳಿ ಮಾತನಾಡಲು ಹೋಗುತ್ತಾನೆ. ರಿತುಗೆ ತನ್ನ ತಂದೆ ಬಿಡುವಾಗಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.
ನೀನು ನನ್ನ ಮುದ್ದಿನ ಮಗಳು ರಿತು. ನೀನೆಂದರೆ ನನಗೆ ಬಹಳ ಇಷ್ಟ ಎಂದು ಹೇಳುತ್ತಾನೆ. ಆಗ ರಿತು ಸುಮ್ಮನಿರದೇ, ಅಪ್ಪ ನಿಮಗೆ ನಾನೊಬ್ಬಳೇ ಮಗಳು ತಾನೇ ಎಂದು ಪ್ರಶ್ನಿಸುತ್ತಾಳೆ.
ಈ ಪ್ರಶ್ನೆ ಲಕ್ಷ್ಮಣನನ್ನು ದಂಗಾಗುವಂತೆ ಮಾಡುತ್ತದೆ. ರಿತು ಕೇಳಿದ ಪ್ರಶ್ನೆಗೆ ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಬಳಿಕ ಸಂದರ್ಭವನ್ನು ನಿಭಾಯಿಸುತ್ತಾನೆ.

ಮದುವೆಯಾಗಿರುವುದನ್ನೂ ಮರೆತ ದಿವ್ಯಾ
ಇತ್ತ ದಿವ್ಯಾ ಮೊದಲ ದಿನವೇ ಸ್ಟೈಲಿಶ್ ಆಗಿ ಆಫೀಸಿಗೆ ಹೋಗಿರುತ್ತಾಳೆ. ಅಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಕಂಪನಿಯ ಓನರ್ ದಿವ್ಯಾಳನ್ನು ಇಷ್ಟಪಡುತ್ತಾನೆ. ಮದುವೆಯಾಗಿರುವುದನ್ನೂ ಮರೆತ ದಿವ್ಯಾ ಮನದಲ್ಲೇ ಸಾವಿರಾರು ರೀತಿಯ ಲೆಕ್ಕಾಚಾರವನ್ನು ಹಾಕುತ್ತಾಳೆ. ದೊಡ್ಡ ಶ್ರೀಮಂತನಾಗಿರುವ ಇವನ ಜೊತೆಗಿದ್ದರೆ, ತನ್ನ ಕನಸುಗಳೆಲ್ಲವೂ ನನಸಾಗುತ್ತದೆ. ಅಲ್ಲದೇ, ತನಗೆ ಹೇಗೆ ಬೇಕೋ ಹಾಗೆ ಬದುಕಬಹುದು ಎಂದು ಆಲೋಚಿಸುತ್ತಾಳೆ.
ಬಾಸ್‌ನಿಂದಲೇ ಮನೆಯ ಬಳಿಗೂ ಡ್ರಾಪ್ ಪಡೆಯುತ್ತಾಳೆ. ದಾರಿಯಲ್ಲಿ ಬಾಲ, ದಿವ್ಯಾ ಗುಡ್ಡೆ ತರಕಾರಿ ಪೋಸ್ಟರನ್ನು ನೋಡಿ ಕೋಪ ಮಾಡಿಕೊಳ್ಳುತ್ತಾಳೆ. ಮನೆಗೆ ಬಂದವಳೇ ಬಾಲನ ಮೇಲೆ ಕೂಗಾಡುತ್ತಾಳೆ. ಆದರೆ, ಅವಳಿಗೆ ಬಾಲ ಮೌನವಾಗಿಯೇ ಸರಿಯಾದ ಉತ್ತರ ಕೊಡುತ್ತಾನೆ. ದಿವ್ಯಾ, ಬಾಲನ ಕೋಪಕ್ಕೆ ಏನೂ ಮಾತನಾಡದೆಯೇ ಸುಮ್ಮನಾಗುತ್ತಾಳೆ. ದಿವ್ಯಾ ಯಾಕೆ ಹೀಗೆ ನಡೆದುಕೊಂಡಳು, ಆಫೀಸಿನಲ್ಲಿ ಏನಾಯ್ತು ಎಂಬುದು ಮಾತ್ರ ಮನೆಯವರಿಗೆ ಅರ್ಥವಾಗುವುದಿಲ್ಲ.
ಸತ್ಯಳಿಗೋಸ್ಕರ ಮಿಡಿದ ಮನೆಯವರು
ಸೀತಮ್ಮ, ಸತ್ಯ ಪೊಲೀಸ್ ಪರೀಕ್ಷೆಯನ್ನು ಬರೆಯುವುದು ಬೇಡ ಎಂದಿದ್ದಕ್ಕೆ ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ತನ್ನ ಕನಸು ನನಸಾಗಲಿಲ್ಲವಲ್ಲ ಎಂದು ಮುಖ ಬಾಡಿಸಿಕೊಂಡಿರುತ್ತಾಳೆ. ಮನೆಯವರೆಲ್ಲಾ ಸತ್ಯಳನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾರೆ. ಅಲ್ಲದೇ, ಕಾರ್ತಿಕ್ ಅಂತೂ ಸತ್ಯ ಮನಸ್ಸಿಗೆ ಖುಷಿಯಾಗಿಸಲು ಎಷ್ಟೆಷ್ಟೋ ಪ್ರಯತ್ನಪಟ್ಟರೂ ಕೂಡ ಸಾಧ್ಯವಾಗುವುದಿಲ್ಲ. ಸತ್ಯ ತನ್ನ ಕನಸು ಕಮರಿ ಹೋಯ್ತು ಎಂದು ತುಂಬಾನೇ ಸಂಕಟವನ್ನು ಒಳಗೊಳಗೆ ಅನುಭವಿಸುತ್ತಿರುತ್ತಾಳೆ. ಕಾರ್ತಿಕ್‌ಗೆ ತನ್ನ ಹೆಂಡತಿಯ ಸಂಕಟವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯವರೆಲ್ಲಾ ಸೀತಾ ಬಳಿ ಈ ವಿಚಾರವಾಗಿ ಮಾತನಾಡಲು ನಿರ್ಧರಿಸುತ್ತಾರೆ.

ಅಮ್ಮನ ಬಳಿ ಮಾತನಾಡಿದ ಕಾರ್ತಿಕ್
ಊರ್ಮಿಳಾ, ರಿತು, ರಾಯರು, ಪದ್ಮಾ ಕೂಡ ಮೊದಲೇ ಸೀತಾ ಬಳಿ ಸತ್ಯ ಓದಲಿ ಎಂದು ಸಪೋರ್ಟ್ ಮಾಡಿ ಮಾತನಾಡಿರುತ್ತಾರೆ. ಆದರೆ, ಇದರಿಂದ ಸೀತಾ ಯಾರ ಮಾತಿಗೂ ಸೊಪ್ಪು ಹಾಕಿರುವುದಿಲ್ಲ. ಈಗ ಕಾರ್ತಿಕ್‌ನ ಸರದಿ. ಕಾರ್ತಿಕ್ ಅಮ್ಮನ ಬಳಿ ಬಂದು ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕು ಎಂದು ಮಾತು ಶುರು ಮಾಡುತ್ತಾನೆ. ಮೊದಲು ಸೀತಾ ಒಪ್ಪುವುದೇ ಇಲ್ಲ. ಆದರೆ ಕಾರ್ತಿಕ್, ಅತ್ತೆಗೋಸ್ಕರ ನಿಮ್ಮ ಸೊಸೆ ಎಲ್ಲಾ ತ್ಯಾಗ ಮಾಡಿದ್ದಾಳೆ. ಹೀಗಿರುವಾಗ ಈಗ ಅತ್ತೆಯ ಸರದಿ. ಸತ್ಯ ಓದುವುದು ಸರಿ ಇಲ್ಲ ತಪ್ಪು ಎಂಬ ನಿರ್ಧಾರವನ್ನು ನೀವೇ ಮಾಡಿ ಎನ್ನುತ್ತಾನೆ.
ಸೊಸೆಯ ಪರೀಕ್ಷೆಗೆ ಒಪ್ಪಿದ ಅತ್ತೆ
ಆಗ ಸತ್ಯಳನ್ನು ಕರೆದು ಮಾತನಾಡುವ ಸೀತಾ. ನನಗೆ ನನ್ನ ಸೊಸೆಯನ್ನು ಒಂದು ಕ್ಷಣವೂ ಬಿಟ್ಟಿರುವುದಕ್ಕೆ ಆಗುವುದಿಲ್ಲ. ಪೊಲೀಸ್ ಕೆಲಸ ಎಂದರೆ ಅವಳು ಟ್ರೈನಿಂಗ್, ಟ್ರಾನ್ಸ್ಫರ್ ಅಂತ ನನ್ನ ಬಿಟ್ಟು ದೂರ ಹೋಗಬೇಕು. ಅದಕ್ಕೆ ನನಗೆ ಅವಳು ಪರೀಕ್ಷೆ ಬರೆಯುವುದು ಇಷ್ಟವಿಲ್ಲ ಎನ್ನುತ್ತಾಳೆ. ಬಳಿಕ ಸತ್ಯಳಿಗೆ ನೀನು ಪರೀಕ್ಷೆ ಬರೆಯುವುದು ತಪ್ಪೇನು ಇಲ್ಲ. ನನ್ನ ಸ್ವಾರ್ಥಕ್ಕೆ ನಾನು ನಿನ್ನನ್ನು ತಡೆಯಬೇಕಾಯ್ತು ಎಂದು ಹೇಳುತ್ತಾಳೆ. ಕೊನೆಗೂ ಸತ್ಯಳ ಕನಸಿಗೆ ಸೀತಾ ಕೈ ಜೋಡಿಸಿದ್ದಾಳೆ.


Click it and Unblock the Notifications