Gauthami Jadav: 'ಸತ್ಯ' ನಟಿ ಗೌತಮಿ ಖಾಸಗಿ ಜೀವನ ನಿಮಗೆಷ್ಟು ಗೊತ್ತು? ನಟಿಯ ಪತಿ ಯಾರು?
'ಸತ್ಯ' ಧಾರಾವಾಹಿ ಈಗ ಕನ್ನಡದ ಟಾಪ್ 5 ಸೀರಿಯಲ್ ಗಳಲ್ಲಿ ಒಂದು. ಇದರಲ್ಲಿ 'ಸತ್ಯ' ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಹರಸಿದ್ದಾರೆ. ಪಕ್ಕಾ ಟಾಮ್ ಬಾಯ್ ವೇಷದಲ್ಲಿ ಮನೆ ಮಾತಾಗಿರುವ 'ಸತ್ಯ' ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಗೌತಮಿ ಜಾಧವ್. ತೆರೆ ಮೇಲೆ ಸತ್ಯ ಆಗಿ ಗೌತಮಿ ಅವರನ್ನು ನೋಡೋದಕ್ಕೂ, ತೆರೆ ಹಿಂದೆ ನೋಡೋದಕ್ಕೂ ತುಂಬಾನೇ ವ್ಯತ್ಯಾಸವಿದೆ.
ರಗಡ್ ಲುಕ್ ಮೂಲಕ ಜನಪ್ರಿಯತೆ ಪಡೆದಿರುವ ಗೌತಮಿ ಜಾಧವ್ ಅಭಿನಯಕ್ಕೆ ಮನಸೋಲದವರಿಲ್ಲ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸತ್ಯ ಎಲ್ಲರ ನೆಚ್ಚಿನ ಪಾತ್ರ. ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿರುವ ಗೌತಮಿ ಜಾಧವ್ ನಾಗಪಂಚಮಿ ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದರ್ಪಣೆ ಮಾಡಿದರು.
ಗೌತಮಿ ಜಾಧವ್ ಅವರು ಕೇವಲ ಕಿರುತೆರೆ ಅಷ್ಟೇ ಅಲ್ಲದೇ, ಬೆಳ್ಳೆ ತೆರೆಯಲ್ಲೂ ಬಣ್ಣ ಹಚ್ಚಿದ್ದಾರೆ. ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಗೌತಮಿ ಅವರು ಸತ್ಯ ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹಾಗಾದರೆ, ಗೌತಮಿ ಅವರ ರಿಯಲ್ ಲೈಫ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ಕೊಡುತ್ತೇವೆ.. ಮುಂದೆ ಓದಿ..

ಗೌತಮಿ ಪತಿ ಕೂಡ ಬಣ್ಣದ ಲೋಕದವರೇ
ಗೌತಮಿ ಜಾಧವ್ ಅವರಿಗೆ ಮದುವೆಯಾಗಿದೆ. ಅವರು ಮದುವೆಯಾಗಿರುವುದು ಸಿನಿಮಾ ಲೋಕದಲ್ಲಿರುವವರನ್ನೇ. ಆದರೆ ಗೌತಮಿ ಜಾಧವ್ ಪತಿ ನಟರಲ್ಲ. ಬದಲಿಗೆ ಅವರು ಸಿನಿಮಾಟೋಗ್ರಫರ್. ಹೌದು.. ಸಿನಿಮಾಟೋಗ್ರಫರ್ ಅಭಿಷೇಕ್ ಕಾಸರಗೂಡು ಎಂಬುವರನ್ನೇ ಗೌತಮಿ ವಿವಾಹವಾಗಿದ್ದಾರೆ. ಅಭಿಷೇಕ್ 'ಮಾಯಾ ಬಜಾರ್', 'ಅನಂತು ವರ್ಸಸ್ ನುಸ್ರತ್', 'ಆಪರೇಷನ್ ಅಲಮೇಲಮ್ಮ' ಸೇರಿದಂತೆ ಹಲವು ಸಿನಿಮಾಗಳಿಗೆ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಈಗ ಅಭಿಷೇಕ್ ಕೈಯಲ್ಲಿ ಹಲವು ಚಿತ್ರಗಳಿವೆ. ಗೌತಮಿ ಹಾಗೂ ಅಭಿಷೇಕ್ ಇಬ್ಬರೂ ಸಿನಿಮಾ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ.

ಪರಿಚಯ ಪ್ರೀತಿಗೆ ತಿರುಗಿ ಹಸೆಮಣೆ ಏರಿದ ಜೋಡಿ
ಗೌತಮಿ ಹಾಗೂ ಅಭಿಷೇಕ್ ಇಬ್ಬರು ಭೇಟಿಯಾಗಿದ್ದು 'ಕಿನಾರೆ' ಸಿನಿಮಾದ ಕಚೇರಿಯಲ್ಲಿ. ಗೌತಮಿಗೆ 'ಕಿನಾರೆ' ಸಿನಿಮಾದಲ್ಲಿ ನಟಿಸುವ ಆಫರ್ ಬಂದಿತ್ತು. ಈ ವಿಚಾರವಾಗಿ ಮಾತನಾಡಲು ಕಚೇರಿಗೆ ಹೋಗಿದ್ದರು. ಅಲ್ಲಿ ಅಭಿಷೇಕ್ ಅವರ ಪರಿಚಯವಾಯ್ತು. ಇದಾದ ನಂತರ 'ಕಿನಾರೆ' ಸಿನಿಮಾ ಕೆಲಸಗಳಿಂದಾಗಿ ನಿತ್ಯ ಇಬ್ಬರೂ ಭೇಟಿಯಾಗುತ್ತಿದ್ದರು. ಅಭಿಷೇಕ್ ಗೆ ಗೌತಮಿ ಮೇಲೆ ಲವ್ ಆಗಿತ್ತು. ಅವರ ಮೊಬೈಲ್ ಸ್ಕ್ರೀನ್ ನಲ್ಲಿ ಗೌತಮಿ ಅವರ ಅರ್ಧ ಮುಖವನ್ನು ವಾಲ್ ಪೇಪರ್ ಗೆ ಹಾಕಿಕೊಂಡಿದ್ದರು. ಇದರ ಬಗ್ಗೆ ತಿಳಿದ ಗೌತಮಿಗೆ ಅದಾಗಲೇ ಕೊಂಚ ಒಲವಾಗಿತ್ತು. ಇಬ್ಬರು ಲವ್ ಪ್ರಪೋಸ್ ಮಾಡುವ ಮುನ್ನವೇ ಮನೆಯಲ್ಲಿ ವಿಷಯ ತಿಳಿಸಿ ಒಪ್ಪಿ ಮದುವೆಯಾದರು. ಸದ್ಯ ಈ ಜೋಡಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಇಬ್ಬರು ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರೆ. ಆಗಾಗ ಜೋಡಿ ಟ್ರಿಪ್ ಗಳಿಗೆ ಹೋಗಿ ಬರುತ್ತಿರುತ್ತಾರೆ.

ಸತ್ಯ ಪಾತ್ರಕ್ಕಾಗಿ ಬೈಕ್ ಕಲಿತ ಜಾಧವ್
ಧಾರಾವಾಹಿಗಳಷ್ಟೇ ಅಲ್ಲದೇ ಗೌತಮಿ ಜಾಧವ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆಪರೇಷನ್ ಅಲಮೇಲಮ್ಮ, ಕಿನಾರೆ, ಲೂಟಿ, ಆದ್ಯ ಮುಂತಾದ ಸಿನಿಮಾಗಳಲ್ಲಿ ಗೌತಮಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸಂತೋಸತ್ತಿಲ್ ಕಲವರಂ ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಕಿರಿತೆರೆಯಲ್ಲಿ ನಟಿಸಲು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಗೌತಮಿಗೆ ಸತ್ಯ ಸೀರಿಯಲ್ ನಿಂದ ಕರೆ ಬಂದಿತ್ತು. ಕಥೆ ಕೇಳಿ ಒಪ್ಪಿಕೊಂಡರು. ಆದರೆ ಪಾತ್ರಕ್ಕಾಗಿ ಗೌತಮಿ ಅವರು ಬೈಕ್ ಓಡಿಸಬೇಕಿತ್ತು. ಆಗ ಹಿಂಜರಿಯದ ಗೌತಮಿ ಅವರು ಬೈಕ್ ಓಡಿಸಲು ಕಲಿತುಕೊಂಡರಂತೆ. ಸತ್ಯ ಧಾರಾವಾಹಿಯಲ್ಲಿ ರೌಡಿ ಬೇಬಿಯಾಗಿ ಕಾಣಿಸಿಕೊಂಡಿರುವ ಗೌತಮಿ ಈಗ ದೊಡ್ಡ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದೇ ಮುಂದಿನ ಕಥೆ.

ಜನಪ್ರಿಯ ಧಾರಾವಾಹಿ
'ಸತ್ಯ' ಧಾರಾವಾಹಿ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಇತರ ಧಾರಾವಾಹಿಗಳಂತೆ ಮಾಮೂಲಿ ಅರ್ಥದ ಮಹಿಳಾ ಪ್ರಧಾನವಾದ ಧಾರಾವಾಹಿ ಇದಲ್ಲ. ಈ ಧಾರಾವಾಹಿ ನಾಯಕಿ, ಇತರ ಧಾರಾವಾಹಿಗಳ ನಾಯಕಿಯರಂತೆ ಕಣ್ಣೀರು ಸುರಿಸುವ, ತ್ಯಾಗಮಯಿ, ಕಾರುಣ್ಯ ಮಯಿ ಪಾತ್ರವಲ್ಲ ಬದಲಿಗೆ ಟಾಮ್ ಬಾಯ್ ರೀತಿ ದುಷ್ಟರ ವಿರುದ್ಧ ಹೊಡೆದಾಟಕ್ಕೆ ನಿಲ್ಲುವ ನಾಯಕಿ. ಈ ಭಿನ್ನತೆಯ ಕಾರಣಕ್ಕೆ ಈ ಧಾರಾವಾಹಿ ಹಲವಾರು ಮಹಿಳೆಯರಿಗೆ, ಯುವತಿಯರಿಗೆ ಇಷ್ಟವಾಗಿದೆ.


Click it and Unblock the Notifications











