Sathya: ಲಕ್ಷ್ಮಣ ಹಾಗೂ ಪದ್ಮಾ ಬಗ್ಗೆ ಸತ್ಯ ಅರಿತ ಸೀತಮ್ಮ
ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಹಣದ ವಾಸನೆ ಹಿಡಿದು ಹೊರಟಿದ್ದಾಳೆ. ತಾನು ಜೀವನದಲ್ಲಿ ಮಾಡಿದ ಯಾವ ತಪ್ಪಿನ ಬಗ್ಗೆಯೂ ಕೊಂಚವೂ ಪಶ್ಚಾತಾಪವಿಲ್ಲದವಳಂತೆ ನಡೆದುಕೊಳ್ಳುತ್ತಿದ್ದಾಳೆ.
ದಿವ್ಯಾ ಈಗ ಯಾರೋ ಹೊಸ ಹುಡುಗ ಸಿಕ್ಕಿದ್ದಾನೆ ಎಂಬ ಕಾರಣಕ್ಕೆ, ಪ್ರೀತಿಸಿ ಮದುವೆಯಾದ ಬಾಲನನ್ನು ಕೂಡ ದೂರ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾಳೆ.
ಬಾಲ, ದಿವ್ಯಾಳನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾನೆ. ದಿವ್ಯಾ ಮಾತ್ರ ಬಾಲನಿಗೆ ಸ್ವಲ್ಪವೂ ಮರ್ಯಾದೆ ಕೊಡುತ್ತಿಲ್ಲ.

ಅಣ್ಣನ ಎದುರು ತಪ್ಪೊಪ್ಪಿಕೊಂಡ ಲಕ್ಷ್ಮಣ
ಇನ್ನು ಸತ್ಯ ಮನೆಯಲ್ಲಿ ನಿತ್ಯ ಟ್ವಿಸ್ಟ್ ನಡೆಯುತ್ತಿದೆ. ಒಂದು ಕಡೆ ಕಾರ್ತಿಕ್, ಸತ್ಯಳಿಗೆ ಹೆಚ್ಚೆಚ್ಚು ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾನೆ. ಆದರೆ, ಮನೆಯಲ್ಲಿ ಲಕ್ಷ್ಮಣ ಮಾಡಿಕೊಂಡಿರುವ ಎಡವಟ್ಟು ತಲೆನೋವಾಗಿದೆ. ಪದ್ಮಾಳನ್ನು ಮದುವೆಯಾಗಿದ್ದು, ನಚಿಕೇತ್ ಎಂಬ ಮಗನೂ ಇದ್ದಾನೆ. ಈ ವಿಚಾರವನ್ನು ಲಕ್ಷ್ಮಣ ಎಲ್ಲರಿಂದ ಮುಚ್ಚಿಟ್ಟಿದ್ದ. ಆದರೆ, ಅದು ಹೇಗೋ ಸತ್ಯ ಈ ವಿಚಾರವನ್ನು ತಿಳಿದಿದ್ದಳು. ಬಳಿಕ ರಾಮಚಂದ್ರ ರಾಯರಿಗೂ ತಿಳಿದ ಮೇಲೆ ಕೋಟೆ ಮನೆತನದಿಂದ ಯಾವ ಹೆಣ್ಣು ಮಕ್ಕಳಿಗೂ ಮೋಸ ಆಗಬಾರದು ಎಂಬ ಕಾರಣಕ್ಕೆ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇಷ್ಟು ದಿನ ಲಕ್ಷ್ಮಣನಿಗೆ ಪದ್ಮಾ ತಮ್ಮ ಮನೆಗೆ ಬಂದಿರುವ ಕಾರಣ ಗೊತ್ತಿರಲಿಲ್ಲ. ಆದರೆ ಈಗ ಸತ್ಯ ಗೊತ್ತಾಗಿದೆ. ಹೀಗಾಗಿ ರಾಮಚಂದ್ರ ರಾಯರ ಬಳಿ ಹೋಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಅಪ್ಪನ ಬಗ್ಗೆ ಹೇಳಿದ ನಚಿಕೇತ್
ಕೀರ್ತನಾಳಿಗೆ ಈ ಬಗ್ಗೆ ಅನುಮಾನ ಮೂಡಿದ್ದರಿಂದ ನಚಿಕೇತನ್ ಬಳಿ ಪದೇ ಪದೇ ನಿಮ್ಮ ಅಪ್ಪ ಯಾರು ಎಂದು ಪ್ರಶ್ನೆ ಮಾಡುತ್ತಲೇ ಇದ್ದಳು. ಆದರೆ, ಕೀರ್ತನಾಳಿಗೆ ನಚಿಕೇತನ್ ಕೊಡುತ್ತಿದ್ದ ಉತ್ತರಗಳು ಅರ್ಥವಾಗುತ್ತಿರಲಿಲ್ಲ. ಇದೀಗ ನಿನ್ನ ತಂದೆಯ ಚಿತ್ರ ಬಿಡಿಸು ಎಂದು ಹೇಳಿದ್ದಕ್ಕೆ, ನಚಿಕೇತನ್, ಲಕ್ಷ್ಮಣನ ಚಿತ್ರವನ್ನು ಬಿಡಿಸಿದ್ದಾನೆ. ಇದನ್ನು ನೋಡಿದ ಸುಹಾಸ್ ಶಾಕ್ ಆಗಿದ್ದಾನೆ. ಕೀರ್ತನಾ ಈ ವಿಚಾರವನ್ನು ಮನೆಯಲ್ಲಿ ಹೇಳಿದರೆ, ಒಪ್ಪುವುದಿಲ್ಲ ಎಂದು ಸುಹಾಸ್, ಸೀತಾಳಿಗೆ ಹೇಳಲು ಮುಂದಾಗಿದ್ದಾನೆ.

ಸೀತಮ್ಮನಿಗೆ ಸತ್ಯ ತಿಳಿಸಿದ ಸುಹಾಸ್
ನಚಿಕೇತನ್ ಚಿತ್ರ ಬಿಡಿಸಿದ್ದನ್ನು ಸುಹಾಸ್, ಸೀತಾಳಿಗೆ ತೋರಿಸಿದ್ದಾನೆ. ಲಕ್ಷ್ಮಣ ಮಾವನಿಗೆ ಪದ್ಮಾ ಜೊತೆಗೆ ಸಂಬಂಧವಿದೆ. ನಚಿಕೇತನ್ ಲಕ್ಷ್ಮಣನ ಮಗನೇ. ಈ ಸತ್ಯವನ್ನು ಮನೆಯವರಿಂದ ಲಕ್ಷ್ಮಣ ಮಾವ ಮುಚ್ಚಿಟ್ಟಿದ್ದಾರೆ. ಊರ್ಮಿಳಾ ಅತ್ತೆಗೆ ಮೋಸ ಮಾಡಿದ್ದಾರೆ. ಆದರೆ, ಈ ವಿಚಾರ ತಿಳಿದಿರುವ ಸತ್ಯ, ಪದ್ಮಾ ಅವರನ್ನು ಇದೇ ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಮನೆಯ ಮಾನ ಮರ್ಯಾದೆ ಎಲ್ಲವೂ ಹಾಳಾಗಿ ಹೋಗಿದೆ. ಲಕ್ಷ್ಮಣ ಮಾವ ಈ ಮನೆಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಸುಹಾಸ್ ಸೀತಾಳಿಗೆ ಹೇಳಿದ್ದಾನೆ.
ಪದ್ಮಾ ವಿಚಾರ ತಿಳಿದು ಸೀತಮ್ಮ ಫುಲ್ ಶಾಕ್
ಸೀತಾಳಿಗೆ ಸುಹಾಸ್ ಮತ್ತು ಕೀರ್ತನಾ ಮಾತನ್ನು ನಂಬಲು ಇಷ್ಟವಿಲ್ಲ. ಇಬ್ಬರೂ ಸದಾ ಮನೆಯನ್ನು ಒಡೆಯುವ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಸೀತಾ, ಸುಹಾಸ್ ಮಾತನ್ನು ನಂಬದೇ ಸತ್ಯಳನ್ನು ಕರೆದು ಕೇಳುತ್ತಾಳೆ. ಲಕ್ಷ್ಮಣ ನನ್ನ ಮಾತನ್ನು ಮೀರಿ ಇದುವರೆಗೂ ಯಾವ ಕೆಲಸ ಮಾಡಿಲ್ಲ. ಅಂತಹವನಿಗೂ ಪದ್ಮಾಳಿಗೂ ಸುಹಾಸ್ ಸಂಬಂಧ ಕಟ್ಟಿ ಮಾತನಾಡುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಾಳೆ. ಸತ್ಯ ವಿಧಿ ಇಲ್ಲದೇ, ಸುಹಾಸ್ ಮತ್ತು ಕೀರ್ತನಾ ಹೇಳುತ್ತಿರುವುದು ಸತ್ಯ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಸೀತಾಳಿಗೆ ದೊಡ್ಡ ಶಾಕ್ ಆಗಿದೆ.


Click it and Unblock the Notifications











