Sathya Serial: 'ಸತ್ಯ' ಧಾರಾವಾಹಿಯ ನಟಿ ಗೌತಮಿ ಜಾಧವ್ ಬಗ್ಗೆ ನಿಮಗೇನು ಗೊತ್ತು?
ಗೌತಮಿ ಜಾಧವ್ ಎನ್ನುವ ಹೆಸರು ಕಂಡರೆ ಅದರಲ್ಲೊಂದು ಪರಭಾಷೆಯ ಜಾಡು ಇದೆ. ಹಾಗಂತ ಇವರು ಕನ್ನಡದವರಲ್ಲ ಎನ್ನಲಾಗದು. ಯಾಕೆಂದರೆ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ.
ಕಾವೇರಿ ವಿದ್ಯಾನಿಕೇತನ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಳಿಕ ವಾಸವಿ ಗರ್ಲ್ಸ್ ಹೈಸ್ಕೂಲ್ ನಲ್ಲಿನ ಓದು, ಬಿಎನ್ಎಮ್‌ನಲ್ಲಿ ಪಿಯು ಮುಗಿಸಿದ ಬಳಿಕ ಬಿಕಾಂ ಮಾಡಿದ್ದು ಜಯನಗರದ ಪ್ರತಿಷ್ಠಿತ ನ್ಯಾಷನಲ್ ಕಾಲೇಜ್‌ನಲ್ಲಿ.
ಸದ್ಯ ಕಿರುತೆರೆಯ ನಂ.1 ಸೀರಿಯಲ್ 'ಸತ್ಯ' ಇದರಲ್ಲಿ ಸತ್ಯ ಪಾತ್ರ ಮಾಡಿರುವುದು ಗೌತಮಿ ಜಾಧವ್ಗೆ ಕಿರುತೆರೆ ಸಿನಿಮಾ ಹೊಸತಲ್ಲ. 2021ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಗೌತಮಿ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಶೈನ್ ಆಗುತ್ತಿರುವ ಗೌತಮಿ
ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡಿಯಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಈಗ 'ಸತ್ಯ' ಸೀರಿಯಲ್‌ನ ಟಾಮ್ ಬಾಯ್ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ. ಅಂದ್ಹಾಗೆ ಇವರದ್ದು, ಪಕ್ಕಾ ಟಾಮ್ ಬಾಯ್ ಪಾತ್ರ. ಬಾಯ್ ಕಟ್ ಮಾಡಿಕೊಂಡು ಟೀ ಶರ್ಟ್ ಮೇಲೊಂದು ಅಂಗಿ ತೊಟ್ಟು ಬೈಕ್ ಏರಿ ಪಕ್ಕಾ ರೌಡಿ ಸ್ಟೈಲ್ ನಲ್ಲಿ ಎಂಟ್ರಿ ಕೊಡುವ ಸತ್ಯ ಇಡೀ ಕನ್ನಡ ಸೀರಿಯಲ್‌ನಲ್ಲಿ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದೆಲ್ಲ ಸೀರಿಯಲ್ ಹುಡುಗಿಯರು ಬಕೆಟ್ ಗಟ್ಟಲೆ ಕಣ್ಣೀರು ಸುರಿಸಿಕೊಂಡು, ಸಿಕ್ಕಾಪಟ್ಟೆ ಒಳ್ಳೆಯವರಾಗಿ ಕಾಣಿಸಿಕೊಂಡರೆ, ಈಕೆ ಮಾತ್ರ ರಗಡ್. ಆತ್ಮ ವಂಚನೆ ಮಾಡಿಕೊಳ್ಳದೆ ನೇರವಾಗಿ ಅನಿಸಿದ್ದನ್ನು ಮಾಡೋಳು. ಅದೇ ಅಳುಮಂಜಿಯ ಪಾತ್ರ, ಅತಿ ಒಳ್ಳೆತನದ ಹೀರೊಯಿನ್‌ಗಳನ್ನು ನೋಡಿ ಸಾಕಾಗಿರುವ ಕಿರುತೆರೆ ಪ್ರೇಕ್ಷಕರು ಇದೀಗ 'ಸತ್ಯ'ಗೆ ವಿಷಲ್ ಹೊಡೀತಿದ್ದಾರೆ.

'ಸತ್ಯ' ಪಾತ್ರಕ್ಕೆ ಮೆಚ್ಚುಗೆಯ ಮಹಾಪೂರ
ಹೊರಗಿನಿಂದ ಸಖತ್ ಖಡಕ್ ಅನಿಸೋ ಈ ಸತ್ಯ ಒಳಗಿನಿಂದ ಬೆಣ್ಣೆಗಿಂತ ಹೆಚ್ಚು ಮೃದು ಅನ್ನೋದನ್ನು ಮನಸಾರೆ ಒಪ್ಪಿಕೊಂಡಿದ್ದಾರೆ. ಒಟ್ಟಾರೆ, ಅತಿಯಾದ ಸ್ವೀಟ್‌ನ ನಡುವೆ ಅಪರೂಪಕ್ಕೆ ಬರುವ ಖಾರದ ಹಾಗೆ ಈ ಸತ್ಯ ಎಂಟ್ರಿಯಾಗಿದೆ. ಇಷ್ಟೆಲ್ಲ ರಗಡ್ ಆಗಿರೋ ಸತ್ಯಾ ರಿಯಲ್ ನಲ್ಲೂ ಹೀಗೇನಾ ಅಂದ್ರೆ, 'ನಾನು ಕಂಪ್ಲೀಟ್ ಉಲ್ಟಾ' ಅಂತಾರೆ ಗೌತಮಿ. ರಿಯಲ್‌ನಲ್ಲಿ ಇವರು ಸಖತ್ ಗರ್ಲಿಶ್ ಆಗಿರೋರು. ಸತ್ಯ ಪಾತ್ರಕ್ಕೆ ವಿರುದ್ಧವಾಗಿ ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ. ಯಾರನ್ನೂ ಬೈದು ಅಭ್ಯಾಸ ಇಲ್ಲ. ಜೋರಾಗಿ ಮಾತಾಡಿಯೂ ಗೊತ್ತಿಲ್ಲದ ಹುಡುಗಿ. ಶುರು ಶುರುವಿನಲ್ಲಿ ಈ ಪಾತ್ರ ನಿಭಾಯಿಸಲು ಗೌತಮಿ ಒಂಚೂರು ಕಷ್ಟಪಡಬೇಕಾಯ್ತು. ಆದರೆ ನಟನೆ ಅಂದ್ರೆ ನೀರು ಕುಡಿದಷ್ಟೇ ಸಲೀಸಾಗಿ ನಟಿಸುವ ಈಕೆ ಕ್ರಮೇಣ ಸತ್ಯ ಪಾತ್ರಕ್ಕೆ ಹೊಂದಿಕೊಳ್ಳುತ್ತಾ ಹೋದರು.

ಗೌತಮಿ ಮನೆಯಲ್ಲಿ ಮುದ್ದಾದ ಶ್ವಾನವಿದೆ
ಗೌತಮಿ ಮನೆಯಲ್ಲಿ ಚೆಂದದ ನಾಯಿಯೊಂದಿದೆ. ಅದರ ಬರ್ತ್ ಡೇ ಸೆಲೆಬ್ರೆಶನ್ ಮಾಡೋದ್ರಿಂದ ಹಿಡಿದು ಅದರ ಜೊತೆಗೆ ಆಡೋದು, ಓಡೋದು, ಸ್ನಾನ ಮಾಡಿಸೋದು ಇವೆಲ್ಲ ಗೌತಮಿ ಬಹಳ ಇಷ್ಟ. ಗೌತಮಿ ಇನ್‌ಸ್ಟಾಗ್ರಾಂ ಅಕೌಂಟ್ ನೋಡಿದರೆ ಇವರಿಗೆ ತಾವು ಸಾಕಿದ ನಾಯಿ ಎಷ್ಟು ಮುದ್ದು ಅನ್ನೋದು ಗೊತ್ತಾಗುತ್ತೆ. ಜೊತೆಗೆ ಬಾಯ್ ಕಟ್ ನಲ್ಲೇ ಗೌತಮಿಯನ್ನು ನೋಡಿದವರಿಗೆ ಫುಲ್ ಹೇರ್‌ನಲ್ಲಿ ಹೇಗೆ ಕಾಣ್ತಾರೆ ಅನ್ನೋದೂ ತಿಳಿಯುತ್ತೆ. ಇದೆಲ್ಲಕ್ಕಿಂತ ಮುಖ್ಯ ವಿಷಯ ಅಂದ್ರೆ ಸೀರಿಯಲ್‌ನಲ್ಲಿ ಇನ್ನೂ ಮದ್ವೆಯಾಗದ ಚಿಕ್ಕ ಹುಡುಗಿ ಥರ ಕಾಣ್ತಾರೆ ಗೌತಮಿ. ತುಂಬು ಅಂತಃಕರಣದ ಈಕೆಯನ್ನು ಸೀರಿಯಲ್ ನೋಡಿದ ಹುಡುದರೂ ಬಹಳ ಇಷ್ಟಪಡ್ತಿದ್ದಾರೆ. ಆದರೆ, ಲೈನ್ ಹೊಡೆಯೋ ಹಾಗಿಲ್ಲ. ಏಕಂದ್ರೆ ಈಕೆ ವಿವಾಹಿತೆ. ಗೌತಮಿ ಪತಿ ಕೂಡ ಸಿನಿಮಾ ಇಂಡಸ್ಟ್ರಿಯವರೇ.

ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಪುತ್ರ
ಗೌತಮಿ ಪತಿ ಕನ್ನಡ ಚಿತ್ರರಂಗದ ಛಾಯಾಗ್ರಾಹಕ. ಹೆಸರು ಅಭಿಷೇಕ್ ಕಾಸರಗೋಡು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಪುತ್ರ. ಪುನೀತ್ ರಾಜ್‌ಕುಮಾರ್ ಬ್ಯಾನರ್‌ನಲ್ಲಿ ಬಂದ 'ಮಾಯಾಬಜಾರ್'ನ ಛಾಯಾಗ್ರಾಹಕ ಇವರೇ. 'ಆಪರೇಶನ್ ಅಲುಮೇಲಮ್ಮ' ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿಕೊಟ್ಟ ಪ್ರತಿಭಾವಂತ. 'ಅನಂತ್ ವರ್ಸಸ್ ನುಸ್ರತ್' ಇವರ ಛಾಯಾಗ್ರಹಣದ ಮತ್ತೊಂದು ಸಿನಿಮಾ. ಪತ್ನಿಯನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿರುವ ಅಭಿಷೇಕ್, ಗೌತಮಿ ನಿದ್ದೆಯಲ್ಲಿ ಮುಗುಳು ನಗೋದು, ನಾಯಿ ಜೊತೆಗೆ ಆಟ ಆಡೋದು ಇತ್ಯಾದಿ ಆಪ್ತ ಸನ್ನಿವೇಶಗಳನ್ನು ಚೆಂದಕ್ಕೆ ಸೆರೆ ಹಿಡಿದಿದ್ದಾರೆ. ಸದ್ಯ ಸೀರಿಯಲ್ ಜಗತ್ತಿನಲ್ಲಿ ಸತ್ಯ ಆಗಿ ಅಬ್ಬರಿಸುತ್ತಿರುವ ಪತ್ನಿಯ ಫುಲ್ ಸಪೋರ್ಟ್‌ಗೆ ನಿಂತಿದ್ದಾರೆ.


Click it and Unblock the Notifications











