ನೆಗೆಟಿವ್ ಪಾತ್ರಗಳಲ್ಲಿ ನಟಿಸೋದು ಅಂದ್ರೆ ಬಲು ಇಷ್ಟ: ಅಷ್ಟಕ್ಕೂ ಈ ನಟಿ ಯಾರು ಗೊತ್ತೇ?
ವಿಭಿನ್ನ ರೀತಿಯ ಕಥಾಹಂದರದ ಧಾರಾವಾಹಿ ಮೂಲಕ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವುದರಲ್ಲಿ ಉದಯ ವಾಹಿನಿಯೂ ಕೂಡಾ ಒಂದು. ಉದಯ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಹೊಸ ಧಾರಾವಾಹಿಯೊಂದು ಶುರುವಾಗಿದೆ. ಅದುವೇ 'ಶಾಂತಿನಿವಾಸ'. ಈ ಧಾರಾವಾಹಿ ಇತ್ತೀಚೆಗಷ್ಟೇ ಶುರುವಾಗಿದ್ದು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
'ಶಾಂತಿನಿವಾಸ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುವ ಮೂಲಕ ಮೋಡಿ ಮಾಡುತ್ತಿದ್ದಾರೆ ಪ್ರಿಯಾಂಕಾ ಶಿವಣ್ಣ. ಮಂತ್ರ ಎನ್ನುವ ಪಾತ್ರಕ್ಕೆ ಜೀವ ತುಂಬುತ್ತಿರುವ ಪ್ರಿಯಾಂಕಾ ಸಂಪೂರ್ಣ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಡಿವಂತ ಕುಟುಂಬದಲ್ಲಿ ಹುಟ್ಟಿರುವ ಮಂತ್ರ ಐಷಾರಾಮಿ ಬದುಕಿನ ಕನಸು ಕಂಡಿರುವ ಮಹತ್ವಾಕಾಂಕ್ಷಿ. ತನಗೆ ಬೇಕಾದ ಹಾಗೆ ಇರಬೇಕೆಂದು ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಬಂದವಳು. ಮಾಡರ್ನ್ ಲೈಫ್ ಸ್ಟೈಲ್‌ಗೆ ಆಸೆ ಬಿದ್ದು, ನಾಯಕಿ ಶಾಂತಿಯ ಮುಖಾಂತರ ಕಳ್ಳತನದ ಆರೋಪದಡಿ ಜೈಲಿಗೆ ಸೇರಿದವಳು. ಹಾಗಂತ ವಿದ್ಯಾಭ್ಯಾಸ ನಿಲ್ಲಿಸದೆ ಜೈಲಿನಲ್ಲಿ ಎಂ.ಕಾಂ.ಪದವಿ ಪಡೆದಾಕೆ. ಜೈಲುವಾಸದ ನಂತರ ನನ್ನ ಈ ಸ್ಥಿತಿಗೆ ಕಾರಣವಾದ ಶಾಂತಿಯ ಮೇಲೆ ಸೇಡು ತೀರಿಸಿಕೊಳ್ಳಬೇಕು ಹಠ ತೊಟ್ಟಿದ್ದಾಳೆ. ತನ್ನ ದ್ವೇಷ, ಸೇಡು ತೀರಿಸಿಕೊಳ್ಳವುದಕ್ಕೆ ತಾವ ಹಂತಕ್ಕೂ ಬೇಕಾದರೂ ಹೋಗುತ್ತಾಳೆ. ಕುತಂತ್ರದಲ್ಲಿ ಈಕೆ ಎತ್ತಿದ ಕೈ. ಮೇನಕೆಯಂತಹ ಸುಂದರಿಯಾದ್ರೂ ಮನಸ್ಸಿನಲ್ಲಿ ವಿಷಕನ್ಯೆ. ಎಂತಹ ತಿಮಿಂಗಲ ಆದ್ರೂ ತನ್ನ ಮೋಹದ ಬಲೆಯಲ್ಲಿ ಬೀಳಿಸಿಕೊಳ್ಳುವ ಚಾಣಾಕ್ಷಿ - ಇದು ಮಂತ್ರ ಪಾತ್ರದ ಸಂಕ್ಷಿಪ್ತ ಪರಿಚಯ.
ಅಸಲಿಗೆ ಪ್ರಿಯಾಂಕಾಗೆ ನೆಗೆಟಿವ್ ರೋಲ್ ಹೊಸದೇನಲ್ಲ. ಬದಲಿಗೆ ಆಕೆ ನೆಗೆಟಿವ್ ಪಾತ್ರದ ಮೂಲಕ ಗುರುತಿಸಿಕೊಂಡವರು ಎಂದರೆ ಸುಳ್ಳಲ್ಲ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಖಳನಾಯಕಿ ಚಂದ್ರಿಕಾ ಆಗಿ ನಟಿಸಿದ ಈಕೆ ಆ ಪಾತ್ರದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಮಾತ್ರವಲ್ಲ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಮಂಥರೆ ಪ್ರಶಸ್ತಿಯನ್ನು ಈಕೆ ಪಡೆದುಕೊಂಡಿದ್ದರು.

ಅಂದ ಹಾಗೇ ಪ್ರಿಯಾಂಕಾ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಗೂ ಮುಂದೆ ತೆಲುಗಿನ 'ಕೃಷ್ಟ ತುಳಸಿ', 'ನಾಗಪಂಚಮಿ' ಧಾರಾವಾಹಿಯಲ್ಲಿಯೂ ಅಭಿನಯಿಸಿದ ಈಕೆ ಅಲ್ಲೂ ವಿಲನ್ ಆಗಿಯೇ ಅಬ್ಬರಿಸಿದ್ದರು.
ಇನ್ನು ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯಳ ಅಕ್ಕ ದಿವ್ಯಳಾಗಿ ಅಭಿನಯಿಸಿದ್ದ ಈ ನಟಿ ಆರಂಭದಲ್ಲಿ ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿದ್ದರೂ, ಧಾರಾವಾಹಿ ಮುಕ್ತಾಯಗೊಳ್ಳುವಾಗ ಪಾಸಿಟಿವ್ ಆಗಿ ಬದಲಾಗಿದ್ದರು. ಸದ್ಯ ಮಂತ್ರಳಾಗಿ ಕಿರುತೆರೆಗೆ ವೀಕ್ಷಕರನ್ನು ರಂಜಿಸುತ್ತಿರುವ ಪ್ರಿಯಾಂಕಾ ಶಿವಣ್ಣ ನಟನಾ ಪಯಣ ಶುರುವಾಗಿದ್ದು 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ಮೂಲಕ.
ಮುಂದೆ 'ಒಂದೂರಲ್ಲಿ ರಾಜ ರಾಣಿ', 'ಪರಿಣಯ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಪ್ರಿಯಾಂಕಾ ಅವರಿಗೆ ನೆಗೆಟಿವ್ ರೋಲ್‌ನಲ್ಲಿ ನಟಿಸುವುದೆಂದರೆ ತುಂಬಾ ಇಷ್ಟ. ಹಾಗೇ ನೆಗೆಟಿವ್ ಪಾತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುವುದೆಂದರೆ ಆಕೆಗೆ ಖುಷಿ. ಖಳನಾಯಕಿಯ ಪಾತ್ರವಾದರೆ ಅಲ್ಲಿ ನಟನೆಗೆ ಅವಕಾಶ ಜಾಸ್ತಿ ಎಂಬುದೇ ಈ ನಟಿಯ ನಂಬಿಕೆ.


Click it and Unblock the Notifications











