'ಸತ್ಯ' ಧಾರಾವಾಹಿಯ ರಿತು ಅಲಿಯಾಸ್ ರಕ್ಷಿತಾ ಭಾಸ್ಕರ್ ಬಗ್ಗೆ ನಿಮಗೆಷ್ಟು ಗೊತ್ತು?
ಸತ್ಯ ಧಾರಾವಾಹಿಯಲ್ಲಿ ಓದುವಾಗಲೇ ರಾಕೇಶ್ ಅನ್ನು ಪ್ರೀತಿಸಿ, ಅವನ ಹಿಂದೆ ಬಿದ್ದು, ಇಬ್ಬರೂ ಪ್ರೇಮಲೋಕದಲ್ಲಿ ತೇಲಾಡುವಾಗ ಮನೆಯಲ್ಲಿ ವಿಚಾರ ಗೊತ್ತಾಗಿ ಬಹಳ ದೊಡ್ಡ ಗಲಾಟೆಯಾಗುತ್ತದೆ.
ರಾಕೇಶ್ ಪರ ನಿಂತ ಸತ್ಯಳಿಗೂ ಇದೊಂದು ದೊಡ್ಡ ಸವಾಲಾಗಿರುತ್ತದೆ. ಸತ್ಯ ಇಬ್ಬರಿಗೂ ಓದು ಮುಗಿಸಿ ಸ್ವಂತ ಕಾಲಿನ ಮೇಲೆ ನಿಲ್ಲಿ ಆಗ ನಿಮ್ಮ ಪ್ರೀತಿ ನಿಜವಾದರೆ, ನಾನೇ ಮುಂದೆ ನಿಂತು ಮದುವೆ ಮಾಡುತ್ತೀನಿ ಎಂದು ಹೇಳುತ್ತಾಳೆ.
ಸತ್ಯ ಮಾತನ್ನು ನಂಬಿದ ರಿತು ಮತ್ತು ರಾಕೇಶ್ ಪ್ರೀತಿ ಪಕ್ಕಕ್ಕಿಟ್ಟು ಓದುವ ಕಡೆಗೆ ಒಲವು ತೋರಿಸುತ್ತಾರೆ. ಅವತ್ತಿನಿಂದ ರಿತು ಕೂಡ ಸತ್ಯಳ ಪರವಾಗಿ ಇರುತ್ತಾಳೆ.

ಸತ್ಯ ಧಾರಾವಾಹಿಯ ರಿತು ಹೆಸರೇನು..?
ಈಗ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೀನಿ ಎಂದರೆ, ರಿತು ಪಾತ್ರಧಾರಿಯ ಹುಟ್ಟುಹಬ್ಬ. ಧಾರಾವಾಹಿಯಲ್ಲಿ ಅಲ್ಲ. ಅಷ್ಟಕ್ಕೂ ರಿತು ನಿಜವಾದ ಹೆಸರು ರಕ್ಷಿತಾ ಭಾಸ್ಕರ್. ಆದರೆ ಸತ್ಯ ಧಾರಾವಾಹಿಯಲ್ಲಿನ ರಿತು ಪಾತ್ರದಿಂದಲೇ ಚಿರಪರಿಚಿತರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಆಕೆ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಚಿಕ್ಕ ಹುಡುಗಿಯಂತೆ ನಟಿಸುವ ಇವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ರಿತು ಧಾರಾವಾಹಿ ತಂಡದವರ ಜೊತೆಗೆ ಆಗಾಗ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಮಂಗಳೂರು, ಉಡುಪಿ, ಬೇಲೂರು ಹೀಗೆ ಅಲ್ಲಿ ಇಲ್ಲಿ ಎಂದು ಟ್ರಾವೆಲ್ ಮಾಡುತ್ತಿರುತ್ತಾರೆ. ಇದರ ಫೊಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.
ಹಲವು ಧಾರಾವಾಹಿಗಳಲ್ಲಿ ನಟನೆ
ಇನ್ನು ರಕ್ಷಿತಾ ಭಾಸ್ಕರ್ 'ಸತ್ಯ' ಧಾರಾವಾಹಿಯಲ್ಲಿ ಮಾತ್ರ ಬಣ್ಣ ಹಚ್ಚಿಲ್ಲ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆಕೆ ನಟಿಸಿದ ಮೊದಲ ಧಾರಾವಾಹಿ 'ರಾಜಾ ರಾಣಿ'. ಬಳಿಕ 'ಹೂಮಳೆ', 'ಬೆಟ್ಟದ ಹೂ', 'ಅವನು ಮತ್ತೆ ಶ್ರಾವಣಿ', 'ಮತ್ತೆ ಮಾಯಾಮೃಗ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು 'ರಾಜಾ ರಾಣಿ' ಮತ್ತು 'ಹೂ ಮಳೆ' ಧಾರಾವಾಹಿಗಳಲ್ಲಿ ನಟಿ ಚಂದನಾ ಅನಂತಕೃಷ್ಣ ಅವರೊಂದಿಗೆ ನಟಿಸಿದ್ದು, ಇವರಿಬ್ಬರೂ ಒಳ್ಳೆಯ ಸ್ನೇಹಿತರು.

ಗಾಯಕಿಯೂ ಆಗಿರುವ ರಿತು
ರಕ್ಷಿತಾ ಭಾಸ್ಕರ್ ಒಳ್ಳೆಯ ಗಾಯಕಿ ಕೂಡ ಹೌದು. ಧಾರಾವಾಹಿಗಳಲ್ಲೂ ಕೆಲವೊಮ್ಮೆ ಹಾಡು ಹಾಡುತ್ತಿರುತ್ತಾರೆ. ರಕ್ಷಿತಾ ಕಂಠ ಬಹಳ ಇಂಪಾಗಿದ್ದು, ಕನರ್ಸ್ಟ್‌ಗಳಲ್ಲಿ ರಕ್ಷಿತಾ ಭಾಗವಹಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಲಿತಿರುವ ರಕ್ಷಿತಾಗೆ ಹಾಡುವುದು, ಡ್ಯಾನ್ಸ್ ಮಾಡುವುದು ಎಂದರೆ ಬಹಳ ಇಷ್ಟ. 2006ರಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆದ್ದಿದ್ದರು. 2007ರಲ್ಲಿಯೂ ಕೂಡ 'ಪಾಡಲಾನಿ ವುಂದಿ' ಎಂಬ ತೆಲುಗಿನ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.
ರಕ್ಷಿತಾ ಭಾಸ್ಕರ್ ಹುಟ್ಟುಹಬ್ಬ
ಆಕೆ ಕ್ಲಾಸಿಕಲ್ ನೃತ್ಯ ಕೂಡ ಕಲಿತಿದ್ದು, ಇವರಿಗೆ ಡ್ಯಾನ್ಸ್ ಮಾಡುವುದು ಎಂದರೂ ಅಷ್ಟೇ ಇಷ್ಟ. ಹಲವು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಕೂಡ ಮಾಡಿದ್ದು. ನಟಿ, ಡ್ಯಾನ್ಸರ್, ಸಿಂಗರ್ ಆಗಿರುವ ರಕ್ಷಿತ ಭಾಸ್ಕರ್ ಅವರು ಒಳ್ಳೆಯ ಪ್ರತಿಭೆಯೂ ಹೌದು. ಸತ್ಯ ಧಾರಾವಾಹಿ ಮೂಲಕ ಜನರಿಗೆ ಚಿರಪರಿಚಿತರಾಗಿರುವ ರಕ್ಷಿತಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಿತು ಅಲಿಯಾಸ್ ರಕ್ಷಿತಾಗೆ ಅಭಿಮಾನಿಗಳು ಹಾಗೂ ಆಪ್ತರು ಶುಭಾಶಯ ಕೋರುತ್ತಿದ್ದಾರೆ.


Click it and Unblock the Notifications











