Sathya Serial: ದಿವ್ಯ ಮದುವೆ ಆಗ್ಬೇಕು ಅಂದರೆ ಸತ್ಯ ಊರು ಬಿಟ್ಟು ಹೋಗ್ಬೇಕಂತೆ!
ದಿವ್ಯ ಮದುವೆಯಾಗಲು ಕಾರ್ತಿಕ್ ಮುಂದಾಗಿದ್ದರೆ, ಇದಕ್ಕೆ ಅವರ ತಾಯಿ ಸೀತಾ ವಿರೋಧ ವ್ಯಕ್ತಪಡಿಸಿದ್ದಾರೆ. ಹಣವಿಲ್ಲದಿದ್ದರೂ ಪರವಾಗಿಲ್ಲ ಗುಣ ಇದ್ದರೆ ಸಾಕು ಅಂತ ಆ ಮನೆ ಹುಡುಗಿಯನ್ನು ಮನೆ ತುಂಬಿಸಿಕೊಳ್ಳೋಕೆ ಮುಂದಾಗಿದ್ದೆವು. ಆದರೆ ಈಗ ಗುಣವೇ ಇಲ್ಲ ಅಂದ ಮೇಲೆ ಆ ಹುಡುಗಿಯನ್ನು ಮದುವೆ ಮಾಡಿಕೊಳ್ಳೋದು ಎಷ್ಟು ಸರಿ ಎಂದು ಕೇಳಿದ್ದಾಳೆ.
Recommended Video

ಆದರೆ ಇದಕ್ಕೆ ಕಾರ್ತಿಕ್ ತಂದೆ ರಾಮಚಂದ್ರ ಅದು ಏನೇ ಆಗಿರಲಿ. ಆ ಹುಡುಗಿಯನ್ನು ನಮ್ಮನೆಗೆ ತಂದುಕೊಳ್ಳುತ್ತೀವಿ ಅಂತ ನಾನು ಗಿರಿಜಮ್ಮನಿಗೆ ಮಾತು ಕೊಟ್ಟಿದೀನಿ. ಕಾರ್ತಿಕ್ ಕೂಡ ಮದುವೆಗೆ ಒಪ್ಪಿದ್ದಾನೆ ಅಂದ ಮೇಲೆ ಇನ್ನೇನು ಸಮಸ್ಯೆ ಇಲ್ಲವಲ್ಲ. ಅಕಸ್ಮಾತ್ ನನಗೆ ಹುಷಾರು ತಪ್ಪಿರಲಿಲ್ಲ ಅಂದಿದ್ದರೆ ಖಂಡಿತವಾಗಿಯೂ ಈ ಮದುವೆಯನ್ನು ನಿಲ್ಲಿಸುತ್ತಿರಲಿಲ್ಲ ಎಂದಿದ್ದಾರೆ.
ಇದಕ್ಕೆ ಸೀತಾ ಒಪ್ಪದೇ, ತನಗೆ ಸ್ವಲ್ಪ ಸಮಯ ಬೇಕು ಎಂದಿದ್ದಾಳೆ. ಅಷ್ಟೇ ಅಲ್ಲದೇ, ನಾನು ತೀರ್ಮಾನ ತೆಗೆದುಕೊಳ್ಳುವ ಮುನ್ನ ಒಬ್ಬರನ್ನ ಭೇಟಿ ಮಾಡಬೇಕು ಎಂದು ಎದ್ದು ಹೊರಟಿದ್ದಾಳೆ. ಕಾರ್ತಿಕ್, ಕೀರ್ತನಾ ಅಮ್ಮ ಎಲ್ಲಿ ಹೋದರು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಸತ್ಯ ಗ್ಯಾರೇಜ್‌ಗೆ ಬಂದ ಕಾರ್ತಿಕ್ ತಾಯಿ!
ಸೀತಾ ಸೀದಾ ಸತ್ಯಳ ಗ್ಯಾರೇಜಿಗೆ ಬಂದಿದ್ದು, ಸತ್ಯ ಹಾಗೂ ಆಕೆಯ ಗೆಳೆಯರು ಶಾಕ್ ಆಗಿದ್ದಾರೆ. ಸೀತಾ ಮಂಜನನ್ನು ಕರೆದು ನಾನು ಈ ಹುಡುಗಿ ಹತ್ರ ಒಂದು ಮುಖ್ಯವಾದ ವಿಚಾರವನ್ನು ಮಾತನಾಡಬೇಕು. ಇವರು ಯಾರೂ ಇಲ್ಲಿರಬಾರದು. ಇವರಿಂದ ಯಾವುದೇ ತೊಂದರೆ ಆಗಬಾರದು ಎಂದು ಹೇಳಿದ್ದಾಳೆ. ಇದಕ್ಕೆ ಮಂಜ ಹಾಗೂ ಸತ್ಯ ಇಬ್ಬರು ಗೆಳೆಯರನ್ನು ಹೊರಗೆ ಹೋಗಲು ಹೇಳಿದ್ದಾರೆ. ಈಗ ಗ್ಯಾರೇಜ್ ನಲ್ಲಿ ಸೀತಾ ಹಾಗೂ ಸತ್ಯ ಇಬ್ಬರೇ ಇದ್ದಾರೆ.

ಅಕ್ಕನ ಮದುವೆ ಬಗ್ಗೆ ಸತ್ಯ ಹೇಳಿದ್ದೇನು?
ಇನ್ನು ನಾನು ಇಲ್ಲಿಗೆ ಯಾಕೆ ಬಂದಿದ್ದೀನಿ ಅಂತ ಗೊತ್ತಾ ಎಂದು ಸೀತಾ ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಸತ್ಯ ಒಬ್ಬರೇ ನನ್ನ ನೋಡೋಕೆ ಇಲ್ಲಿಯ ತನಕ ಬಂದಿದ್ದೀರಾ ಎಂದರೆ ಅದು ಮದುವೆಯ ವಿಚಾರಕ್ಕೆ ಇರಬೇಕು ಎಂದಿದ್ದಾಳೆ. ಅದಕ್ಕೆ ಸೀತಾ, ಕರೆಕ್ಟ್.. ನಿನ್ನನ್ನು ಹುಡುಕಿಕೊಂಡು ನಾನು ಇಲ್ಲಿಯವರೆಗೂ ಬಂದಿದ್ದೀನಿ ಅಂದರೆ, ನೀನು ಎಲ್ಲಿಯವರೆಗೂ ಹೋಗಬಹುದು ಎನ್ನುವುದನ್ನು ಯೋಚನೆ ಮಾಡು ಎಂದು ಹೇಳಿದಾಗ, ಸತ್ಯ ಅಕ್ಕನ ಮದುವೆಯಾಗುತ್ತೆ ಅನ್ನೋದಾದರೆ ನಾನು ಎಲ್ಲಿಗೆ ಬೇಕಾದರೂ ಹೋಗೋಕೆ ಸಿದ್ಧ ಎಂದಿದ್ದಾಳೆ.

ಸತ್ಯಳನ್ನು ನಿಂದಿಸಿದ ಸೀತಾ!
ಈ ಸಂತೋಷಕ್ಕೆ ಅಲ್ವಾ ನೀನು ಅರಿಶಿನ ಶಾಸ್ತ್ರದ ದಿನ ಕೊಳ್ಳಿ ಇಟ್ಟಿದ್ದು. ಮನೆಯವರೇ ನಿನ್ನನ್ನು ಮುಚ್ಚಿಟ್ಟು ಮದುವೆ ಮಾಡೋಕೆ ಹೊರಟಿದ್ದರು ಅಂದರೆ, ಇನ್ನು ನಿನ್ನ ನಡತೆ ಎಂತಹದ್ದಿರಬೇಕು? ಈ ಹುಡುಗರನ್ನು ಇಟ್ಟುಕೊಂಡು, ಈ ಗ್ಯಾರೇಜ್‌ನಲ್ಲಿ ನಟ್ಟು, ಬೋಲ್ಟು ಜೊತೆ ಜೀವನ ಮಾಡುತ್ತಿದ್ದೀಯಾ. ಹೆಣ್ಣಾದವಳಲ್ಲಿ ತ್ಯಾಗ, ಪ್ರೀತಿ, ಮಮತೆ ಇರಬೇಕು. ಸಂಸಾರ ಕಟ್ಟೋ ಗುಣ ಇರಬೇಕು. ಅದು ಯಾವುದು ನಿನ್ನಲಿಲ್ಲವಲ್ಲ ಅಂತೆಲ್ಲಾ ಸೀತಾ ಹೇಳುತ್ತಾಳೆ. ಅದಕ್ಕೆ ಸತ್ಯ ಅದೆಲ್ಲಾ ಈಗ್ಯಾಕೆ? ನನ್ನ ಗುರಿ ಏನಿದ್ದರೂ ನನ್ನ ಅಕ್ಕನ ಮದುವೆಯಾಗಬೇಕು ಅಷ್ಟೇ. ಅವಳು ಚೆನ್ನಾಗಿರಬೇಕು ಎಂದು ಸತ್ಯ ಹೇಳುತ್ತಾಳೆ.

ಸತ್ಯ ಬಳಿ ಮಾತು ತೆಗೆದುಕೊಂಡ ಸೀತಾ!
ನಿನ್ನ ಹಾಗೆ ನಿನ್ನಕ್ಕ ಇಲ್ಲ. ಅವಳು ಚೆನ್ನಾಗೇ ಇರುತ್ತಾಳೆ. ಯಾರಿಗೆ ಗೊತ್ತು ನನ್ನ ಮಗ ಕಾರ್ತಿಕ್ ಜೊತೆಗೆ ಅವಳ ಮದುವೆ ಆದರೂ ಆಗಬಹುದು ಎಂದಾಗ, ಸತ್ಯ ಖುಷಿ ಪಟ್ಟಿದ್ದಾಳೆ. ಆದರೆ ಸೀತಾ ಸತ್ಯಳ ಉಡುಗೆ ತೊಡುಗೆ ಬಗ್ಗೆ ಮಾತನಾಡಿದ್ದು, ನೀನು ಹೆಣ್ಣೇ ಅಲ್ಲ ಅನಿಸುತ್ತೆ. ನಿನ್ನಲ್ಲಿನ ಹೆಣ್ತನ ಸತ್ತು ಹೋಗಿರಬಹುದು. ಪುಡಿ ರೌಡಿ ಅಂತೆಲ್ಲಾ ಮಾತನಾಡಿದ್ದಾಳೆ. ನಿನ್ನ ಅಕ್ಕನನ್ನು ಮನೆಗೆ ತಂದುಕೊಂಡರೆ ನಮಗೆ ನೆಂಟರಿಷ್ಟರ ಹತ್ತಿರ ಮಾನ ಮರ್ಯಾದೆ ಹೋಗುತ್ತೆ ಅಂತಾಳೆ. ದಿವ್ಯಾಳನ್ನು ನಮ್ಮನೆಗೆ ಸೊಸೆಯಾಗಿ ಮಾಡಿಕೊಳ್ಳಬೇಕು ಅಂದರೆ ನೀನು ನನಗೆ ಮಾತು ಕೊಡು ಅನ್ನುತ್ತಾಳೆ.

ಸೀತಾ ಶರತ್ತಿಗೆ ಸತ್ಯ ಒಪ್ಪುತ್ತಾಳಾ?
ಆಗ ಸತ್ಯ ಹಿಂದೆ ಮುಂದೆ ಯೋಚಿಸದೆ ಸರಿ. ಹೇಳಿ ನೀವು ಹೇಳಿದಂಗೆ ಮಾಡುತ್ತೀನಿ ಅನ್ನುತ್ತಾಳೆ. ಆಗ ಸೀತಾ ನೀನು ಎಲ್ಲರಿಂದ ದೂರ ಹೋಗಬೇಕು. ಕಣ್ಣಿಗೆ ಕಾಣಿಸಬಾರದು ಅಂದರೆ, ನನ್ನ ಕಣ್ಣಿಗೆ ಮಾತ್ರ ಕಾಣಿಸದಂತೆ ಇರೋದಲ್ಲ. ಯಾರ ಕಣ್ಣಿಗೂ ನೀನು ಕಾಣಿಸಬಾರದು. ನೀನು ಊರು ಬಿಟ್ಟು ಹೋಗಬೇಕು ಎಂದು ಹೇಳುತ್ತಾಳೆ. ಈಗ ಸತ್ಯ ಅಕ್ಕನ ಮದುವೆ ಮಾಡಿಸುವ ಸಲುವಾಗಿ ಊರು ಬಿಟ್ಟು ಹೋಗುತ್ತಾಳೋ..? ಇಲ್ಲವೋ..? ಅನ್ನೋದು ಮುಂದಿನ ಸಂಚಿಕೆಯಲ್ಲಿ ನೋಡಬಹುದು.


Click it and Unblock the Notifications











