ಸತ್ಯಗೆ ಅತ್ತೆ ಮನೆಯಲ್ಲಿ ಶುರುವಾಯ್ತು ಕಾಟ!
ಸತ್ಯ ಈಗ ಸೀತಮ್ಮನ ಬಳಿ ಬೈಸಿಕೊಂಡಿದ್ದಾಳೆ. ದೇವರ ಮನೆಗೆ ಎಂಟ್ರಿಕೊಟ್ಟಿದ್ದೇ ತಪ್ಪಾಯ್ತು ಎಂಬಂತೆ ಮಾತನಾಡಿದ್ದಾರೆ. ಇನ್ಯಾವತ್ತೂ ಕೂಡ ಸತ್ಯ ದೇವರ ಮನೆಗೆ ಹೋಗಬಾರದು. ದೇವರ ಮನೆಗೆ ಹೋಗುವ ಅರ್ಹತೆ ಹಾಗೂ ಯೋಗ್ಯತೆ ಸತ್ಯಗೆ ಇಲ್ಲ ಎಂದು ಸೀತಾ ಆಡಿದ ಮಾತುಗಳು ಸತ್ಯಗೆ ಕೋಪ ತರಿಸಿದೆ.
ಇನ್ನು ಸತ್ಯ ಹಸಿವಿನಿಂದ ಒದ್ದಾಡುತ್ತಿದ್ದಾಳೆ. ಮನೆಯಲ್ಲಿ ಬಿಸಿ ಬಿಸಿಯಾದ, ರುಚಿ ರುಚಿಯಾದ ತಿಂಡಿ ರೆಡಿಯಾಗಿದೆ. ಡೈನಿಂಗ್ ಟೇಬಲ್ ಮೇಲೆ ಘಮ ಘಮ ಎನ್ನುತ್ತಿದೆ. ಮೊದಲೇ ಹಸಿವಿನಿಂದ ಬಳಲುತ್ತಿರುವ ಸತ್ಯಗೆ ಈಗ ಡೈನಿಂಗ್ ಟೇಬಲ್ ಮೇಲಿರುವ ವಡೆ ಕಾಣಿಸಿದೆ. ಹೀಗಾಗಿ ಅವಳ ಹೊಟ್ಟೆ ಹಸಿವು ಡಬಲ್ ಆಗಿದೆ.
ಇತ್ತ ಬಾಲನ ಪರಿಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ. ರೆಸಾರ್ಟ್ ಬಿಲ್ ಕಟ್ಟಲಾಗದೇ ಒದ್ದಾಡುತ್ತಿದ್ದಾನೆ. ಯಾರ ಬಳಿ ಹಣ ಕೇಳುವುದು ಎಂದು ಯೋಚಿಸುತ್ತಿದ್ದಾನೆ. ಕೀರ್ತನಾಗೆ ಕರೆ ಮಾಡುವ ಆಲೋಚನೆಯಲ್ಲಿರುವ ಬಾಲನಿಗೆ ಹಣ ಸಿಗುತ್ತಾ? ಇಲ್ಲವೇ ದಿವ್ಯಾಗೆ ಎಲ್ಲಾ ಸತ್ಯ ಗೊತ್ತಾಗುತ್ತದೆಯಾ ಎಂಬ ಕೂತೂಹಲ ಸೃಷ್ಟಿಯಾಗಿದೆ.

ಹಲ್ಲುಕಚ್ಚಿಕೊಂಡಿರುವ ಸತ್ಯ!
ಸೀತಾ ದೇವರ ಮನೆಗೆ ಹೋಗಬಾರದು ಎಂದು ಹೇಳಿದ್ದಕ್ಕೆ, ಅದರಲ್ಲೂ ಸತ್ಯಗೆ ಅರ್ಹತೆ, ಯೋಗ್ಯತೆ ಇಲ್ಲ ಎಂದು ಹೇಳಿದ್ದಕ್ಕೆ ಕೋಪ ಬಂದಿದೆ. ಮುಷ್ಟಿ ಹಿಡಿದ ಸತ್ಯ ಒಂದು ಕ್ಷಣ ತನ್ನ ತಾಯಿ ಜಾನಕಿ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳದೇ, ತಾಳ್ಮೆಯಿಂದ ಇರಬೇಕು. ಆ ಮನೆಯ ಸಂಪ್ರದಾಯ, ಶಾಸ್ತ್ರಗಳನ್ನು ಕಲಿತು ಪಾಲಿಸಬೇಕು. ಯಾರಿಗೂ ಎದುರು ಮಾತನಾಡಬಾರದು. ಎಲ್ಲವನ್ನು ಕಲಿತುಕೊಂಡು, ಅರಿತುಕೊಂಡು ಬಾಳಬೇಕು ಎಂದು ಅವರ ತಾಯಿ ಹೇಳಿರುತ್ತಾರೆ. ಈ ಮಾತನ್ನು ನೆನಪಿಸಿಕೊಂಡು ಸತ್ಯ ಸುಮ್ಮನಾಗುತ್ತಾಳೆ. ಇನ್ನು ಸತ್ಯಗೆ ಊರ್ಮಿಳ ಸಪೋರ್ಟ್ ಮಾಡಿಕೊಂಡು ಬಂದಿದ್ದಕ್ಕೆ ಸೀತಾ ಆಕೆಗೂ ಬೈಯುತ್ತಾಳೆ.

ಊಟಕ್ಕಾಗಿ ಅತ್ತೆ ಬಳಿ ಬೈಸಿಕೊಂಡ ಸತ್ಯ!
ಇನ್ನು ಸತ್ಯಗೆ ಹಸಿವಾಗುತ್ತಿರುತ್ತದೆ. ಹೀಗಾಗಿ ಡೈನಿಂಗ್ ಟೇಬಲ್‌ನಲ್ಲಿರುವ ತಿಂಡಿಯನ್ನು ನೋಡಿ ಖುಷಿ ಪಡುತ್ತಾಳೆ. ಆದರೆ, ಎಲ್ಲರೂ ಬಂದಮೇಲೆ ತಿನ್ನಬೇಕಲ್ಲ ಎಂದು ಒದ್ದಾಡುತ್ತಿರುತ್ತಾಳೆ. ಎಲ್ಲರೂ ಬರುವುದರೊಳಗೆ ಒಡೆ ತಿನ್ನೋಣ ಎಂದುಕೊಳ್ಳುವಷ್ಟರಲ್ಲಿ ಊರ್ಮಿಳಾ ಬಂದು ತಡೆಯುತ್ತಾಳೆ. ಮನೆ ದೇವರ ಪೂಜೆ ಆದ ಮೇಲೆ ತಿಂಡಿ. ಅಲ್ಲಿಯವರೆಗೂ ತಿನ್ನಬಾರದು ಎನ್ನುತ್ತಾಳೆ. ಆದರೆ, ಸತ್ಯ ಕೇಳದೇ ಇಬ್ಬರೂ ತಿನ್ನೋಣ ಎನ್ನುತ್ತಾಳೆ ಅದನ್ನು ಕೇಳಿಸಿಕೊಂಡ ಸೀತಾ ಮಹಾಮಂಗಳಾರತಿ ಮಾಡುತ್ತಾಳೆ. ಊರ್ಮಿಳಾಗೂ ಸೇರಿಸಿಕೊಂಡು ತರಾಟೆಗೆ ತೆಗೆದುಕೊಳ್ಳುತ್ತಾಳೆ.

ಕೀರ್ತನಾ ಬಳಿ ಹಣ ಕೇಳಿದ ಬಾಲ!
ಬಾಲ ರೆಸಾರ್ಟ್ ಬಿಲ್ ಕಟ್ಟಬೇಕು ಎಂದು ಹಣಕ್ಕಾಗಿ ಒದ್ದಾಡುತ್ತಿದ್ದಾನೆ. ಹೇಗಿದ್ದರು ಕೀರ್ತನಾ ಮೇಡಂ ಇದ್ದಾರಲ್ಲ ಎಂದು ಬಾಲ ಅವರಿಗೆ ಕಾಲ್ ಮಾಡುತ್ತಾನೆ. ಕೀರ್ತನಾ ಕಾಲ್ ರಿಸೀವ್ ಮಾಡಿ ಮಾತನಾಡುತ್ತಾಳೆ. ಬಾಲ ಹಣ ಕೇಳುತ್ತಿದ್ದಂತೆಯೇ ಸಿಟ್ಟು ಮಾಡಿಕೊಳ್ಳುವ ಕೀರ್ತನಾ, ದುಡ್ಡೆಲ್ಲಾ ಕೊಡೋದಕ್ಕೆ ಆಗೋದಿಲ್ಲ ಬಾಲ. ಈಗಾಗಲೇ ನೀನು ದಿವ್ಯಾ ಒಂದಾಗಲಿ ಎಂದು ಸಾಕಷ್ಟು ಹಣ ಕೊಟ್ಟಿದ್ದೇನೆ ಎಂದು ಬೈದು ಫೋನ್ ಇಡುತ್ತಾಳೆ. ಆದರೆ ಬಾಲ ಮತ್ಯಾರ ಬಳಿ ಹಣ ಕೇಳುವುದು ಎಂದು ಒದ್ದಾಡುತ್ತಿದ್ದಾನೆ.

ಚಿಂತೆಗೀಡಾದ ಕಾರ್ತಿಕ್!
ಕಾರ್ತಿಕ್‌ಗೆ ಇಷ್ಟವಿಲ್ಲದೆ ಸತ್ಯಳನ್ನು ಮದುವೆಯಾಗಿರುವುದು ದೊಡ್ಡ ತಲೆನೋವಾಗಿದೆ. ಇನ್ನು ಬದುಕಿನುದ್ದಕ್ಕೂ ಸತ್ಯ ಜೊತೆಗೆ ಜೀವಿಸಬೇಕಲ್ಲ. ಯಾಕೆ ಹೀಗಾಯ್ತು.? ನಾನು ಸತ್ಯನಾ ಮದುವೆಯಾಗಬಾರದಿತ್ತು. ನನ್ನ ಬದುಕಲ್ಲಿ ಏನೆಲ್ಲಾ ಆಯಿತು. ಅಪ್ಪ ಯಾಕೆ ಸತ್ಯ ಜೊತೆಗೆ ನನ್ನ ಮದುವೆ ಮಾಡಿಸಿದರು ಎಂಬ ಆಲೋಚನೆಯಲ್ಲೇ ಇದ್ದಾನೆ. ಮುಂದೆ ಏನು ಮಾಡುವುದು ಎಂಬ ಯೋಚನೆಯಲ್ಲಿ ಕಾರ್ತಿಕ್ ಇದ್ದಾನೆ. ಇನ್ನು ಮನೆಯವರೆಲ್ಲರೂ ಮನೆ ದೇವರ ಪೂಜೆಗೆ ಹೊರಟಿದ್ದಾರೆ.


Click it and Unblock the Notifications











